ನಿರ್ದೇಶಕ ಮಂಸೋರೆ ನಿಶ್ಚಿತಾರ್ಥ: ಆಗಸ್ಟ್‌ನಲ್ಲಿ ಮದುವೆ

Public TV
2 Min Read

ಬೆಂಗಳೂರು: ಹರಿವು, ನಾತಿಚರಾಮಿ ಮತ್ತು ಆಕ್ಟ್-1978 ಚಿತ್ರಗಳ ನಿರ್ದೇಶಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಮಂಸೋರೆ’ ಅವರು ಇಂದು ಬೆಂಗಳೂರಿನಲ್ಲಿ ‘ಅಖಿಲಾ’ ಅವರೊಂದಿಗೆ ನಿಶ್ಚಿತಾರ್ಥವಾಗಿ ಉಂಗುರ ಬದಲಾಯಿಸಿಕೊಂಡಿದ್ದಾರೆ.

ಕೋವಿಡ್ ಕಾರಣದಿಂದಾಗಿ ಹೆಚ್ಚು ಜನರನ್ನು ಆಹ್ವಾನಿಸದೇ, ಕುಟುಂಬದವರು ಹಾಗೂ ಕೆಲವು ಗೆಳೆಯರ ಸಮಕ್ಷಮದಲ್ಲಿ ನಿಶ್ಚಿತಾರ್ಥ ನಡೆದಿದ್ದು, ಮದುವೆಗೆ ಆಗಸ್ಟ್ 15ನೇ ತಾರೀಖು ದಿನಾಂಕ ನಿಗದಿ ಆಗಿದೆ. ಮಂಸೋರೆ ಅವರ ವೃತ್ತಿಜೀವನದಲ್ಲಿ ಮಾಧ್ಯಮ ಮಿತ್ರರು ಹಾಗೂ ಚಿತ್ರರಂಗದ ಹಲವಾರು ಸ್ನೇಹಿತರು ಭಾಗಿಯಾಗಿರುವುದರಿಂದ, ಮಾಧ್ಯಮಗಳ ಮೂಲಕವೇ ಅವರೆಲ್ಲರಿಗೂ ತಮ್ಮ ಮದುವೆ ನಿಶ್ಚಯವಾಗಿರುವ ಶುಭಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಾರೆ.

2014ರಲ್ಲಿ ಮಂಸೋರೆ ಅವರು ಮೊದಲು ನಿರ್ದೇಶಿಸಿದ ‘ಹರಿವು’ ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರಪ್ರಶಸ್ತಿ ಬಂದಿತ್ತು. ಹರಿವು ಚಿತ್ರದಲ್ಲಿ ‘ಸಂಚಾರಿ ವಿಜಯ್’ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ಮಂಸೋರೆ ನಿರ್ದೇಶನದಲ್ಲಿ, ಶೃತಿ ಹರಿಹರನ್ ಮತ್ತು ಸಂಚಾರಿ ವಿಜಯ್ ನಟಿಸಿ, 2018ರಲ್ಲಿ ಬಿಡುಗಡೆಯಾಗಿದ್ದ ‘ನಾತಿಚರಾಮಿ’ ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರಪ್ರಶಸ್ತಿ, ಮಂಸೋರೆ ಅವರಿಗೆ ಉತ್ತಮ ಸಾಹಿತ್ಯಕ್ಕೆ ರಾಷ್ಟ್ರಪ್ರಶಸ್ತಿ ಮತ್ತು ಇತರೆ ಮೂರು ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿ ಗೌರವ ಸಿಕ್ಕಿದ್ದು, ಅದೇ ಚಿತ್ರದ ನಿರ್ದೇಶನಕ್ಕಾಗಿ ಮಂಸೋರೆ ಅವರಿಗೆ ಉತ್ತಮ ನಿರ್ದೇಶಕ ಫಿಲ್ಮ್ ಫೇರ್ ಪ್ರಶಸ್ತಿಯ ಗರಿ ಸಿಕ್ಕಿತ್ತು. ಇದನ್ನೂ ಓದಿ : ಬಾಯಿ ಮುಚ್ಚಿದರೆ ಸರಿ- ಚಕ್ರವರ್ತಿಗೆ ಪ್ರಿಯಾಂಕಾ ಅವಾಜ್

ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ನೇತೃತ್ವದ, ‘ಬದಲಾದ ಭಾರತ’ ಎಂಬ ಯೋಜನೆಯಡಿಯಲ್ಲಿ ಆಯ್ಕೆಯಾದ ಸಿನಿಮಾಗಳ ಪಟ್ಟಿಯಲ್ಲಿ ‘ನಾತಿಚರಾಮಿ’ ಚಿತ್ರವೂ ಒಂದಾಗಿತ್ತು. ಮಂಸೋರೆ ನಿರ್ದೇಶನದ ಮೂರನೇ ಚಲನಚಿತ್ರ “ಆಕ್ಟ್-1978” ಕಳೆದ ವರ್ಷ ದೀರ್ಘಕಾಲದ ಲಾಕ್-ಡೌನ್ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ದಕ್ಷಿಣ ಭಾರತದ ಚಲನಚಿತ್ರ ಎಂದೇ ಖ್ಯಾತಿಯಾಗಿತ್ತು.

ಕೊರೋನಾ ಲಾಕ್-ಡೌನ್ ನಂತರ ಸಿನಿಮಾಗಳನ್ನು ಬಿಡುಗಡೆ ಮಾಡಲು ಚಿತ್ರರಂಗ ಹಿಂದೇಟು ಹಾಕುತ್ತಿದ್ದ ವೇಳೆಯಲ್ಲಿ ಬಿಡುಗಡೆಯಾದ ‘ಆಕ್ಟ್-1978’ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯಕ್ಕೆ ಮಂಸೋರೆ ಅವರು ‘ರಾಣಿ ಅಬ್ಬಕ್ಕ’ನ ಕುರಿತಾದ ಚಿತ್ರ ಮಾಡುವ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದು, ಅದರ ಚಿತ್ರೀಕರಣಕ್ಕೆ ಹೋಗುವ ಮುನ್ನ ಮತ್ತೊಂದು ಚಿತ್ರ ಮಾಡುವ ಬಗ್ಗೆ ಯೋಚಿಸುತ್ತಿದ್ದು, ಮದುವೆಯ ಬಳಿಕ ಮುಂದಿನ ಚಿತ್ರದ ಘೋಷಣೆ ಮಾಡುವುದಕ್ಕೆ ಸಿದ್ಧತೆಗಳನ್ನು ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *