ನಿರ್ಣಾಯಕ ‘ಪಂಚಮ’ ಕಹಳೆಗೆ ತತ್ತರಿಸಿದ ಸರ್ಕಾರ – ಯತ್ನಾಳ್ ರಾಜಕೀಯ ದಾಳ, ಫಲಕೊಡದ ಸಿಎಂ ಸಂಧಾನ

Public TV
3 Min Read

– ಸರ್ಕಾರಕ್ಕೆ ಮಾರ್ಚ್ 4ರವರೆಗೂ ಡೆಡ್‍ಲೈನ್
– ಇಕ್ಕಟ್ಟಿನಲ್ಲಿ ಸಿಎಂ ಬಿಎಸ್‍ವೈ

ಬೆಂಗಳೂರು: 2ಎ ಮೀಸಲಾತಿಗೆ ಆಗ್ರಹಿಸಿ ಏಳುನೂರಕ್ಕೂ ಹೆಚ್ಚು ಕಿಲೋಮೀಟರ್ ದೂರವನ್ನು ಪಾದಯಾತ್ರೆ ಮೂಲಕ ಕ್ರಮಿಸಿದ ಪಂಚಮಸಾಲಿ ಸಮುದಾಯದ ಲಕ್ಷಾಂತರ ಮಂದಿ ಬೆಂಗಳೂರಿನಲ್ಲಿ ಪಂಚಮ ಪಾಂಚಜನ್ಯ ಮೊಳಗಿಸಿದ್ದಾರೆ. ಪಂಚಮಸಾಲಿ ಸಮುದಾಯದ ಹೋರಾಟವನ್ನು ನಿಲ್ಲಿಸಬೇಕೆಂದು ಸಚಿವರ ಮೂಲಕ ಸಿಎಂ ಯಡಿಯೂರಪ್ಪ ಮಾಡಿದ ಒಂದೇ ಒಂದು ತಂತ್ರವೂ ಫಲ ಕೊಡಲಿಲ್ಲ. ಬದಲಿಗೆ ಮೀಸಲು ಹೋರಾಟ ಇನ್ನಷ್ಟು ತೀವ್ರವಾಯ್ತು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಇಡೀ ಸಮುದಾಯ ಯತ್ನಿಸಿತು. ಅಧಿವೇಶನದಲ್ಲಿ ಅಂತಿಮ ನಿರ್ಣಯ ಆಗಲೇಬೇಕು. ಎಂಬ ಒಕ್ಕೊರಲ ನಿರ್ಣಯವನ್ನು ಸಮಾವೇಶ ತೆಗೆದುಕೊಂಡಿದೆ. ಇದರಿಂದಾಗಿ ಸಿಎಂ ಯಡಿಯೂರಪ್ಪ ಅಕ್ಷರಷಃ ಅಡಕತ್ತರಿಗೆ ಸಿಲುಕಿದ್ದಾರೆ.

ಸ್ವಾಗತ ಸಮಿತಿ ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್, ಕತ್ತಿ ಝಳಪಿಸುವ ಮೂಲಕ, ವಿಜಯಾನಂದ ಕಾಶಪ್ಪನವರ್ ಕಹಳೆ ಊದುವ ಮೂಲಕ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿದರು. ಸಮಾವೇಶ ಉದ್ದೇಶಿಸಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಇದು ಮುಕ್ತಾವಯಲ್ಲ, ಶಕ್ತಿ ಪ್ರದರ್ಶನ. ಯಾರೇನೇ ಒತ್ತಡ ಹೇರಿದರೂ ಮೀಸಲಾತಿ ಸಿಗೋವರೆಗೂ ಹೋರಾಟ ನಿಲ್ಲಿಸಲ್ಲ. ಮಾರ್ಚ್ 4ರವರೆಗೂ ಶಾಂತಿಯುತ ಧರಣಿ ಮಾಡೋದಾಗಿ ಘೋಷಿಸಿದರು.

ಸಚಿವರ ಮನವೊಲಿಕೆ ಫುಲ್ ಫೇಲ್: ಸಿಎಂ ಸಂದೇಶ ತಂದಿದ್ದ ಸಚಿವ ಸಿಸಿ ಪಾಟೀಲ್ ಮಾತನಾಡಿ, ನಮ್ಮ ಹೋರಾಟಕ್ಕೆ ಸಿಎಂ ಬೆಂಬಲ ಸೂಚಿಸಿದ್ದಾರೆ. ಹಿಂದುಳಿದ ಆಯೋಗಕ್ಕೆ ವರದಿ ನೀಡುವಂತೆ ಸೂಚಿಸಿದ್ದಾರೆ. ಏಕಾಏಕಿ ತೀರ್ಮಾನ ಕೈಗೊಂದರೆ ಬೇರೆಯವರು ನ್ಯಾಯಾಲಯಕ್ಕೆ ಹೋಗಬಹುದು ಎನ್ನುತ್ತಲೇ ಸಭಿಕರು ಘೋಷಣೆ ಕೂಗಿದರು. ಆದ್ರೂ ಮಾತು ಮುಂದುವರೆಸಿದ ಸಿಸಿ ಪಾಟೀಲ್, ಸಮಾವೇಶದ ನಂತರ ಪ್ರತಿಭಟನೆ ಕೈಬಿಡಿ ಮನವಿ ಮಾಡಿದರು.

ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಯಾರು ಚಿಂತೆ ಮಾಡುವ ಅಗತ್ಯವಿಲ್ಲ. ಮೀಸಲಾತಿ ಕೊಡಿಸುವ ಸಲುವಾಗೆ ಈ ಸಮಾವೇಶ ಮಾಡ್ತಿದ್ದೇವೆ. 70 ವರ್ಷ ಆಳಿದವರು ಏನು ಮಾಡಲಿಲ್ಲ ಅಂತಾ ಕಾಂಗ್ರೆಸ್ಸಿಗರ ಮೇಲೆ ಗೂಬೆ ಕೂರಿಸಲು ನೋಡಿದರು. ನಾವು ಕೊಟ್ಟೇ ಕೊಡ್ತೀವಿ ಸ್ವಲ್ಪ ಟೈಮ್ ಕೊಡಿ ಎಂದು ಮನವಿ ಮಾಡಿಕೊಂಡರು.

ಸಚಿವರ ಭರವಸೆಯನ್ನು ಒಪ್ಪಲು ತಯಾರಿಲ್ಲದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಮೂಗಿಗೆ ತುಪ್ಪ ಸವರೋ ಕೆಲಸ ಮಾಡಬೇಡಿ. ಇದು ಮಾಡು ಇಲ್ಲವೇ ಮಡಿ ಹೋರಾಟ. ಮೀಸಲಾತಿ ಸಿಗವರೆಗೂ ಮನೆಗೆ ಹೋಗಲ್ಲ. ನಾವು ವಿಧಾನಸೌಧಕ್ಕೆ ಮುತ್ತಿಗೆ ಹಾಕೇ ಹಾಕ್ತೀವಿ ಅಂತಾ ಗುಡುಗಿದರು.

ಯತ್ನಾಳ್ ಸವಾಲ್:
ಸಚಿವರ ಭರವಸೆಯನ್ನು ನಂಬಲು ತಯಾರಿರದ ಜಯಮೃತ್ಯುಂಜಯ ಸ್ವಾಮೀಜಿ, ಮುಂದಿನ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಸ್ವಾಗತ ಸಮಿತಿ ಅಧ್ಯಕ್ಷ ಯತ್ನಾಳ್‍ಗೆ ನೀಡಿದ್ರು. ಈ ವೇಳೆ ಮಾತನಾಡಿದ ಯತ್ನಾಳ್, ನನ್ನ ಕೈಯಲ್ಲಿ ಕತ್ತಿ ಕೊಟ್ಟಿದ್ದಾರೆ. ಯಾಕೆ ಅಂದ್ರೆ ಮಾಡು ಇಲ್ಲವೇ ಮಡಿ ಅಂತಾ. ನಾವು ಬೆನ್ನಿಗೆ ಚೂರಿ ಹಾಕಲ್ಲ. ಎದುರು ಬಂದ್ರೆ ಹೊಡೆಯೋದೇ ಅಂತಾ ಅಬ್ಬರಿಸಿದರು. ಇಬ್ಬರು ಸಚಿವರು ಹೋಗಿ ಸಿಎಂಗೆ ಕೇಳಿ, ಇಲ್ಲವಾದ್ರೆ ರಾಜೀನಾಮೆ ಕೊಡ್ತಿನಿ ಅಂತಾ ಹೇಳಿರಿ.. ಅದ್ಯಾಕೆ ಮಾಡಲ್ಲ ನಾನು ನೋಡ್ತೀನಿ ಅಂತಾ ಓಪನ್ ವೇದಿಕೆಯಲ್ಲಿ ಸವಾಲು ಹಾಕಿದರು.

ಶಾಸಕ ಯತ್ನಾಳ್ ಉರುಳಿಸಿದ ರಾಜಕೀಯ ದಾಳಕ್ಕೆ ಕಕ್ಕಾಬಿಕ್ಕಿಯಾದ ಸಚಿವರಿಬ್ಬರು ಕೋಪದಿಂದ ವೇದಿಕೆಯಿಂದ ಕೆಳಗಿಳಿದು ಹೊರ ನಡೆದರು. ನೇರವಾಗಿ ಸಿಎಂ ಮನೆಗೆ ಹೋಗಿ ಸಮಾವೇಶದ ವರದಿ ಒಪ್ಪಿಸಿದರು. ಇದಕ್ಕೂ ಮುನ್ನ ಜೈಲಲ್ಲಿರುವ ಮಾಜಿ ಮಂತ್ರಿ ವಿಜಯ್ ಕುಲಕರ್ಣಿ ಪತ್ನಿಯನ್ನು ವೇದಿಕೆಗೆ ಕರೆಯಿಸಿ ಸಮುದಾಯದ ಮುಖಂಡರು ಧೈರ್ಯ ತುಂಬುವ ಕೆಲಸ ಮಾಡಿದರು. ಈ ವೇಳೆ ಮಾತು ಬಾರದೇ ವಿನಯ್ ಕುಲಕರ್ಣಿ ಪತ್ನಿ ಗದ್ಗದಿತರಾದರು. ಸಮಾವೇಶದ ಮಧ್ಯೆ ಮಳೆ ಬಂದು ಕೆಲ ಕಾಲ ಜನ ಪರದಾಡಿದರು. ನಗರದಲ್ಲಿ ಟ್ರಾಫಿಕ್ ಜಾಮ್ ಕೂಡ ಕಂಡುಬಂತು.

Share This Article
Leave a Comment

Leave a Reply

Your email address will not be published. Required fields are marked *