ನಿರೀಕ್ಷೆಗೂ ಮೀರಿ ಕೇಸ್‍ಗಳು ಬರ್ತಿವೆ, ನಾವೇನು ಮಾಡೋಕೆ ಆಗುತ್ತೆ : ಈಶ್ವರಪ್ಪ

Public TV
1 Min Read

ಶಿವಮೊಗ್ಗ: ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿರೀಕ್ಷೆಗೂ ಮೀರಿ ಕೇಸುಗಳು ಬರುತ್ತಿವೆ. ನಾವೇನು ಮಾಡೋಕೆ ಆಗುತ್ತೆ? ಆದರೂ, ನಾವು ಎಲ್ಲಾ ಪ್ರಯತ್ನಗಳನ್ನು ನಡೆಸಿ, ಕೋವಿಡ್ ಸೋಂಕಿತರಿಗೆ ಸೌಕರ್ಯ ಒದಗಿಸುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಕೋವಿಡ್ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಅಗತ್ಯವಾಗಿರುವ ಆಕ್ಸಿಜನ್ ಲಭ್ಯವಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ, 32 ಕೆ.ಎಲ್, ಸರ್ಕಾರಿ ಆಸ್ಪತ್ರೆಗಳಲ್ಲಿ 19 ಕೆ.ಎಲ್ ಒಟ್ಟು 51 ಕೆ.ಎಲ್ ನಷ್ಟು ಆಕ್ಸಿಜನ್ ಲಭ್ಯವಿದೆ. ಜೊತೆಗೆ 42 ಡ್ಯೂರಾ ಸಿಲಿಂಡರ್ ಗಳು ಮತ್ತು 582 ಜಂಬೋ ಸಿಲಿಂಡರ್ ಗಳು ಲಭ್ಯವಿದೆ ಎಂದು ತಿಳಿಸಿದ್ದಾರೆ. ಅದರಂತೆ, ಸರ್ಕಾರಿ ಆಸ್ಪತ್ರೆಗಳಲ್ಲಿ 552, ಖಾಸಗಿ ಆಸ್ಪತ್ರೆಗಳಲ್ಲಿ 383 ಸೇರಿದಂತೆ, ಒಟ್ಟು, 935 ರೆಮಿಡಿಸ್ವಿರ್ ಇಂಜೆಕ್ಷನ್ ಲಭ್ಯವಿದೆ ಎಂದು ಈಶ್ವರಪ್ಪ ಮಾಹಿತಿ ನೀಡಿದರು.

ಅದರಂತೆ, ಕೊರೊನಾ ನಿರ್ವಹಣೆಗೆ ಜಿಲ್ಲಾಡಳಿತದ ವತಿಯಿಂದ ಗರಿಷ್ಟ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್‍ಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ 776 ಬೆಡ್, ಖಾಸಗಿ ಆಸ್ಪತ್ರೆಗಳಲ್ಲಿ 999 ಬೆಡ್‍ಗಳನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ 216 ಐಸಿಯು ಬೆಡ್ ಹಾಗೂ 944 ಆಕ್ಸಿಜನ್ ಬೆಡ್‍ಗಳಿವೆ. ಸರ್ಕಾರಿ ಆಸ್ಪತ್ರೆಯಲ್ಲಿ 78 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 32 ವೆಂಟಿಲೇಟರ್‍ಗಳಿವೆ. ಪ್ರಸ್ತುತ ಶಿವಮೊಗ್ಗ, ಶಿಕಾರಿಪುರ, ಸಾಗರದಲ್ಲಿ ಕೋವಿಡ್ ಕೇರ್ ಸೆಂಟರ್‍ಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಅದೇ ರೀತಿ, ಜಿಲ್ಲೆಯಲ್ಲಿ ಇದುವರೆಗೆ 2,67,060 ಡೋಸ್ ಕೋವಿಶೀಲ್ಡ್ ನೀಡಲಾಗಿದ್ದು, 2540 ಡೋಸ್ ಉಳಿಕೆ ಇದೆ. ಕೋವಾಕ್ಸಿನ್ 20,460 ಡೋಸ್ ನೀಡಲಾಗಿದ್ದು, ಉಳಿಕೆ ಇರುವುದಿಲ್ಲ. 2,41,578 ಮಂದಿಗೆ ಮೊದಲ ಡೋಸ್ ನೀಡಲಾಗಿದ್ದು, 54,358 ಮಂದಿಗೆ ಎರಡನೇ ಡೋಸ್ ಪೂರ್ಣಗೊಳಿಸಲಾಗಿದೆ. 88 ಸಕ್ರಿಯ ಕಂಟೈನ್‍ಮೆಂಟ್ ಜೋನ್‍ಗಳಿವೆ. ಮಾಸ್ಕ್ ಧರಿಸದ 9207 ಪ್ರಕರಣಗಳಲ್ಲಿ 12,76,850 ರೂ. ದಂಡ ವಿಧಿಸಲಾಗಿದೆ ಎಂದು ಸಚಿವ ಈಶ್ವರಪ್ಪ ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *