ನಿರಾಣಿ ಅವರು ಪೀಠಕ್ಕೆ ಬಂದು ಲೆಕ್ಕ ಕೇಳಲಿ: ಜಯಮೃತ್ಯುಂಜಯ ಸ್ವಾಮೀಜಿ

Public TV
1 Min Read

– ಯತ್ನಾಳ್ ನಮ್ಮ ಸಮಾಜದ ಧೀಮಂತ ನಾಯಕ

ಕೊಪ್ಪಳ: ಪಾದಯಾತ್ರೆ ಸಚಿವರು ಮುರುಗೇಶ್ ನಿರಾಣಿ ಒಂದು ರೂಪಾಯಿಯನ್ನ ನೀಡಿಲ್ಲ. ಲೆಕ್ಕ ನೀಡಿ ಎಂದು ಯಾಕೆ ಕೇಳಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಸಚಿವರು ಬೇಕಿದ್ದಲ್ಲಿ ಪೀಠಕ್ಕೆ ಬಂದು ಲೆಕ್ಕ ಕೇಳಲಿ ಎಂದು ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಸ್ವಾಮೀಜಿಗಳು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಾವ ದೃಷ್ಠಿಕೋನವಿಟ್ಟುಕೊಂಡು ಸಿಎಂ ಬದಲಾವಣೆ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ರಾಜಕೀಯವಾಗಿ ಏನಾಗುತ್ತದೆ ಎಂಬುದು ಗೊತ್ತಿಲ್ಲ. ಯತ್ನಾಳ್ ಅವರು ಯಾವ ಉದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ. ಯಡಿಯೂರಪ್ಪ ಅವರು ಅಧಿವೇಶನದಲ್ಲಿ ಮಾತು ನೀಡಿದ್ದಾರೆ. ಹಾಗಾಗಿ ಯಡಿಯೂರಪ್ಪ ಅವರ ಅವಧಿಯಲ್ಲಿಯೇ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಸನಗೌಡ ಪಾಟೀಲ್ ಯತ್ನಾಳ ನಮ್ಮ ಸಮಾಜದ ಧೀಮಂತ ನಾಯಕ. ಅವರ ಹೋರಾಟಕ್ಕೆ ಬಂದ ಪರಿಣಾಮದಿಂದಾಗಿ ನಮ್ಮ ಮೀಸಲಾತಿ ಹೋರಾಟ ಒಂದು ದಡಕ್ಕೆ ಬಂದು ಮುಟ್ಟಿದೆ. ಮುರುಗೇಶ ನಿರಾಣಿ ಅವರು ಸಹ ನಮ್ಮ ಸಮಾಜದ ನಾಯಕರು. ಅವರ ಮೇಲೆ ನಂಬಿಕೆ ಇಟ್ಟಿದ್ದೇವೆ. ಆದರೆ ಮಂತ್ರಿಸ್ಥಾನ ನೀಡುವಾಗ ಒಪ್ಪಂದವಾಗಿತ್ತು ಎಂದು ಅನಿಸುತ್ತದೆ. ಮಂತ್ರಿಸ್ಥಾನ ನೀಡುತ್ತೇವೆ, ಪಾದಯಾತ್ರೆ ನಿಲ್ಲಿಸಿ ಎಂದು ಸಿಎಂ ಹೇಳಿದ್ದರು. ನಮ್ಮ ಮೇಲಿನ ಅಭಿಮಾನದಿಂದ ಪಾದಯಾತ್ರೆಯನ್ನು ನಿಲ್ಲಿಸುತ್ತೇವೆ ಎಂದು ನಿರಾಣಿ ಹೇಳಿದ್ದರು. ಆದರೆ ಜನರು ಕೇಳಲಿಲ್ಲ. ಸಹಜವಾಗಿಯೇ ಸಿಎಂ ಅವರ ಒತ್ತಡದಿಂದ ಆ ರೀತಿ ನಿರಾಣಿ ಹೇಳಿರಬೇಕು.

10 ಲಕ್ಷ ಜನರ ಸಮ್ಮುಖದಲ್ಲಿ ವಿಜಯಾನಂದ್ ಕಾಶಪ್ಪನವರನ್ನು ಸಮಾಜದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ನಿರಾಣಿ ಪಾದಯಾತ್ರೆ ಲೆಕ್ಕ ನೀಡುವಂತೆ ಕೇಳಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸ್ವಾಮೀಜಿ ಪೀಠಕ್ಕೆ ಬಂದು ಅವರು ಲೆಕ್ಕ ಕೇಳಲಿ. ಅಲ್ಲದೆ ನಿರಾಣಿಯವರು ಇಂದಿಗೂ ನಮ್ಮ ಪಾದಯಾತ್ರೆಗೆ ಒಂದು ರುಪಾಯಿಯನ್ನೂ ನೀಡಿಲ್ಲ. ಅವರು ಯಾಕೆ ಈ ರೀತಿಯಾಗಿ ಹೇಳುತ್ತಾರೋ ಗೊತ್ತಿಲ್ಲ. ಇಲ್ಲಿಯವರೆಗೂ ಅವರು ಸಹಾಯ ಮಾಡಿಲ್ಲ, ಮುಂದೆ ಮಾಡಬಹುದು ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *