ನಿಮ್ ಹತ್ರ ಬಂಡೆ ಇರ್ಬೋದು, ನಿಮ್ಮಿಂದ ಬಂದಿರುವ ಒಂದೊಂದು ಡೈನಾಮೈಟ್‍ ಅದನ್ನು ಪುಡಿ ಮಾಡ್ತಾರೆ: ಕಟೀಲ್

Public TV
2 Min Read

– ಲಿಂಬಾವಳಿ, ಅಶೋಕ್ ಜೋಡೆತ್ತುಗಳು

ಬೆಂಗಳೂರು: ನಿಮ್ಮ ಬಳಿ ಬಂಡೆ ಇರಬಹುದು. ನಮ್ಮ ಬಳಿ ನಿಮ್ಮಿಂದಲೇ ಬಂದ ಡೈನಮೇಟ್‍ಗಳಿವೆ ಒಂದೊಂದು ಡೈನಾಮೈಟ್‍ ನಿಮ್ಮನ್ನು ಪುಡಿ ಪುಡಿ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.

ರಾಜರಾಜೇಶ್ವರಿ ನಗರ ಉಪ ಚುನಾವಣೆ ಹಿನ್ನಲೆ ಬಿಜೆಪಿ ಸೇರ್ಪಡೆ ಕಾರ್ಯಕ್ರಮವನ್ನು ನಗರದ ಖಾಸಗಿ ಹೊಟೇಲ್ ನಲ್ಲಿ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, ಕನಕಪುರದಿಂದ ಬಂದು ಇಲ್ಲಿ ಗೂಂಡಾಗಿರಿ ರಾಜಕಾರಣ ಮಾಡುತ್ತಿದ್ದೀರಿ, ಇದು ನಡೆಯಲ್ಲ. ನಿಮ್ಮನ್ನ ಬಂಡೆ ಎಂದು ಕರೆಯುತ್ತಾರೆ. ನಿಮ್ಮ ಬಳಿ ಬಂಡೆ ಇರಬಹುದು. ಆದರೆ ನಮ್ಮ ಬಳಿ ನಿಮ್ಮಿಂದ ಬಂದಿರುವ ಡೈನಾಮೈಟ್‍ಗಳಿವೆ. ಒಂದೊಂದು ಡೈನಾಮೈಟ್‍ ಗಳು ನಿಮ್ಮನ್ನು ಪುಡಿಪುಡಿ ಮಾಡುತ್ತಾರೆ ಎಂದರು.

ತಿಹಾರ್ ಜೈಲಿಗೆ ಹೋದಾಗ ಜನ ನೋಡಿದ್ದಾರೆ. ಜೈಲಿಗೆ ಹೋದಾಗ ಮೆರವಣಿಗೆ, ಜೈಲಿನಿಂದ ಹೊರಬಂದಾಗ ಮೆರವಣಿಗೆ, ಕುಂತಾಗ ಮೆರವಣಿಗೆ, ನಿಂತಾಗ ಮೆರವಣಿಗೆ. ಸಾಕು ನಿಮ್ಮ ಮೆರವಣಿಗೆ, ನೀವು ಮನೆಯಲ್ಲಿ ಕೂರಿ ಎಂದು ಜನ ಕೂರಿಸುತ್ತಾರೆ. ಜಾತಿ ರಾಜಕೀಯ ನಡೆಯಲ್ಲ, ಅಭಿವೃದ್ಧಿ ರಾಜಕೀಯದ ಮೂಲಕ ಮುನಿರತ್ನ ಜನರ ಹೃದಯದಲ್ಲಿ ಇದ್ದಾರೆ. ಕೋವಿಡ್-19 ಸಂದರ್ಭದಲ್ಲಿ ಮನೆ, ಮನೆಗೆ ಹೋಗಿ ಜನರ ಕಷ್ಟ ಕೇಳಿದ್ದಾರೆ. ಮುನಿರತ್ನ ಅವರನ್ನು ಪ್ರೀತಿಯಿಂದ ನಮ್ಮ ಪಕ್ಷ ಬರಮಾಡಿಕೊಂಡಿದೆ ಎಂದು ಹೊಗಳಿದರು.

ಸಚಿವ ಆರ್.ಅಶೋಕ್ ಮತ್ತು ಅರವಿಂದ ಲಿಂಬಾವಳಿ ಜೋಡೆತ್ತುಗಳು. ಈ ಜೋಡೆತ್ತುಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಮುನಿರತ್ನ ಗೆಲ್ಲಿಸುತ್ತಾರೆ. ರಾಜರಾಜೇಶ್ವರಿ ನಗರದಲ್ಲಿ ಗೆಲ್ಲುವ ಮೂಲಕ ವಿಶ್ವದಾಖಲೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಭಿವೃದ್ಧಿಯ ಹರಿಕಾರರು, ಸಾಮಾನ್ಯ ಜನರ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಮಾಜಿ ಶಾಸಕ ಮುನಿರತ್ನ ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿ, ಪ್ರಧಾನಿ ಮೋದಿ, ಯಡಿಯೂರಪ್ಪ ಸರ್ಕಾರದ ಒಳ್ಳೆಯ ಕಾರ್ಯ ಒಪ್ಪಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರಿದ್ದಾರೆ. ಎಲ್ಲರನ್ನೂ ಪಕ್ಷಕ್ಕೆ ಸ್ವಾಗತ ಮಾಡುತ್ತೇವೆ. ನಮ್ಮ ಪಕ್ಷಕ್ಕೆ ಸಕ್ಕರೆ ಸೇರಿದೆ. ಹಾಲಿನ ಜೊತೆ ಸಕ್ಕರೆ ಸೇರಿದಾಗ ಸಿಹಿ ಕೊಡುತ್ತೆ. ರಾಜರಾಜೇಶ್ವರಿನಗರದಲ್ಲಿ ಹಾಲು-ಸಕ್ಕರೆ ಸೇರಿ ಗೆಲುವಿನ ಸಿಹಿ ಕೊಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜರಾಜೇಶ್ವರಿ ನಗರ ಉಪ ಚುನಾವಣೆ ಹಿನ್ನೆಲೆ ಆಪರೇಷನ್ ಕಮಲ ಜೋರಾಗಿದ್ದು, ಆರ್‍ಆರ್ ನಗರದ ಕಾಂಗ್ರೆಸ್ ಕಾರ್ಪೊರೇಟರ್ ಗಳು ಕಮಲ ಪಾಳಯಕ್ಕೆ ಬರುತ್ತಿದ್ದಾರೆ. ಮುನಿರತ್ನ ವಿರುದ್ಧವಿದ್ದ ಕಾಂಗ್ರೆಸ್ ಕಾರ್ಪೋರೇಟರ್ ಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಎಚ್‍ಎಂಟಿ ವಾರ್ಡ್ ಕಾಂಗ್ರೆಸ್ ಕಾರ್ಪೋರೇಟರ್ ಆಶಾ ಸುರೇಶ್ ಅವರು ಅಧಿಕೃತವಾಗಿ ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಜೆಡಿಎಸ್ ಲಗ್ಗೆರೆ ಮಂಜುಳಾ ನಾರಾಯಣಸ್ವಾಮಿ ಈಗಾಗಲೇ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ ಕಟೀಲ್, ಬಿಜೆಪಿ ಉಪಾಧ್ಯಕ್ಷ ಲಿಂಬಾವಳಿ, ಸಚಿವ ಆರ್. ಅಶೋಕ್ ಹಾಗೂ ಆರ್.ಆರ್ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಸಹ ಭಾಗಿಯಾಗಿದ್ದರು.

ಐವರು ಕಾರ್ಪೋರೇಟರ್ಸ್ ಬಿಜೆಪಿಗೆ ಸೇರ್ಪಡೆ
ಕಾಂಗ್ರೆಸ್ ಮುಖಂಡರಾದ ಮಾಜಿ ಮೇಯರ್ ನಾರಾಯಣಸ್ವಾಮಿ, ಕಾಂಗ್ರೆಸ್ ಕಾರ್ಪೋರೇಟರ್ ಗಳಾದ ಜಾಲಹಳ್ಳಿಯ ಶ್ರೀನಿವಾಸ್, ಯಶವಂತಪುರದ ಜಿ.ಕೆ.ವೆಂಕಟೇಶ್, ಹೆಚ್‍ಎಂಟಿ ವಾರ್ಡ್ ನ ಆಶಾ ಸುರೇಶ್, ಲಕ್ಷ್ಮೀದೇವಿನಗರದ ವೇಲು ನಾಯ್ಕರ್, ಕೊಟ್ಟಿಗೆಪಾಳ್ಯ ವಾರ್ಡ್ ಮೋಹನ್ ಕುಮಾರ್, ಲಗ್ಗೆರೆ ವಾರ್ಡ್ ನ ನಾಮನಿರ್ದೇಶಿತ ಬಿಬಿಎಂಪಿ ಸದಸ್ಯ ಸಿದ್ದೇಗೌಡ ಸೇರಿದಂತೆ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *