ನಾವ್ಯಾರೂ ಜಿಪ್ ತೆಗೀರಿ, ಶರ್ಟ್ ಬಿಚ್ಚಿ ಅಂತ ಹೇಳಿಲ್ಲ: ಡಿ.ಕೆ.ಶಿವಕುಮಾರ್

Public TV
3 Min Read

– ಮಂಚದಲ್ಲಿ ರಾಜಕಾರಣ ಕೆಲಸ ಮಾಡಬಾರದು?
– ಹನಿ ತಿಂದವರೇ ಟ್ರ್ಯಾಪ್ ಆಗೋದು ಅಲ್ವಾ?
– ಸೆಷನ್ ನಲ್ಲಿ ಸಿಡಿ ಸದ್ದು

ಬೆಂಗಳೂರು: ಇಂದು ಸದನದಲ್ಲಿ ಸಿಡಿ ಪ್ರಕರಣ ಹೆಚ್ಚು ಸದ್ದು ಮಾಡಿತು. ಈ ವಿಷಯವಾಗಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಮಂಚದಲ್ಲಿ ಮಂಚದ ಕೆಲಸ ಮಾಡಬೇಕೇ ಹೊರತು ರಾಜಕಾರಣ ಮಾಡಬಾರದು. ನಾವ್ಯಾರೂ ಅವರಿಗೆ ಜಿಪ್ ತೆಗೀರಿ, ಶರ್ಟ್ ಬಿಚ್ಚಿ ಅಂತ ಹೇಳಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.

ಹನಿ ಟ್ರ್ಯಾಪ್ ಅಂತೆ, ಹನಿ ತಿಂದವರು ಯಾರು? ಹನಿ ತಿಂದ್ರೆ ತಾನೇ ಟ್ರ್ಯಾಪ್ ಆಗೋದು ಎಂದು ಡಿ.ಕೆ.ಶಿವಕುಮಾರ್ ವ್ಯಂಗ್ಯ ಮಾಡಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಎಸ್.ಟಿ.ಸೋಮಶೇಖರ್, ಯಾರೂ ನಿರ್ಮಾಪಕರು, ಯಾರು ನಿರ್ದೇಶಕರು, ಯಾರು ಫೈನಾನ್ಸಿಯರ್, ಯಾವ ಲೋಕೇಶನ್ ಅನ್ನೋದು ಚರ್ಚೆ ಆಗ್ತಿದೆ ಎಂದರು. ಸಿಡಿ ಮಾಡುವ ದರಿದ್ರ ಕೆಲಸ ಕಾಂಗ್ರೆಸ್ ನವರದ್ದು ಎಂದು ಸೋಮಶೇಖರ್ ಹೇಳುತ್ತಾರೆ ಎಂದ ಕೂಡಲೇ ನಾನು ಹಾಗೆ ಹೇಳಿಲ್ಲ, ಬೇಕಾದ್ರೆ ಒಂದು ಕಾಪಿ ಕಳಿಸ್ತೀನಿ ನೋಡಿಕೊಳ್ಳಿ, ಎಲ್ಲರಿಗೂ ಕಳಿಸ್ತೀನಿ ಎಂದ ಸೋಮಶೇಖರ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು.

ಮಂಚದಲ್ಲಿ ರಾಜಕಾರಣ ಮಾಡೋದಲ್ಲ: ನಾವ್ಯಾರೂ ಜಿಪ್ ತೆಗಿ ಅಂತಾ ಹೇಳಿಲ್ಲ, ಶರ್ಟ್ ಬಿಚ್ಚಿ ಅಂತಾ ಹೇಳಿಲ್ಲ. ಸಿಎಂ ಭ್ರಷ್ಟ ಅಂತಾ ನಾವು ಹೇಳಿಲ್ಲ, ಪ್ರಹ್ಲಾದ್ ಜೋಷಿ ಸಿಎಂ ಮಾಡ್ತೀನಿ ಅಂತಾ ನಾವ್ಯಾರೂ ಹೇಳಿಲ್ಲ. ಸಿದ್ದರಾಮಯ್ಯ ಜೊತೆ ಎರಡು ಸಲ ಮಾತಾಡ್ತಾರಂತೆ. ಕನ್ನಡಿಗರ ಬಗ್ಗೆ ಮಾತಾಡ್ತಾರಂತೆ. ಮಂಚದಲ್ಲಿ ಮಂಚದ ಕೆಲಸ ಮಾಡಬೇಕು ಹೊರತು, ಮಂಚದಲ್ಲಿ ರಾಜಕಾರಣ ಮಾಡೋದಲ್ಲ ಎಂದು ಮಾಜಿ ಸಚಿವರ ಸಿಡಿ ಪ್ರಕರಣದ ಬಗ್ಗೆ ಡಿ.ಕೆ.ಶಿವಕುಮಾರ್ ಹೇಳಿದರು.

ರಾಜಕಾರಣಕ್ಕೆ ಕಪ್ಪು ಚುಕ್ಕೆ: ರಾಜಕಾರಣಿಗಳಿಗೆ ಮನೆಗೆ ಕರೆದು ಊಟ ಹಾಕುವ ಕಾಲ ಇಲ್ಲ. ಸಿಡಿ ಪ್ರಕರಣ ಇಡೀ ರಾಜಕಾರಣದ ಕುಟುಂಬಕ್ಕೆ ಕಪ್ಪು ಚುಕ್ಕೆಯಾಗಿದೆ. ಈ ಘಟನೆ ಬಹಳ ಹಿಂದಿನಿಂದಲೂ ಬಹಳ ಸ್ಟಿಂಗ್ ಆಪರೇಷನ್, ಫೋನ್ ಟ್ಯಾಪಿಂಗ್ ನಡೆದಿವೆ. ನಾಲ್ಕು ತಿಂಗಳ ಹಿಂದೆಯೇ ನನ್ನ ಸಿಡಿ ಗ್ಯಾಂಗ್ ಬ್ಲ್ಯಾಕ್ ಮೇಲ್ ಮಾಡಿತ್ತು ಎಂದು ರಮೇಶ್ ಜಾರಕಿಹೊಳಿ ಹೇಳಿ, ಇನ್ನೊಂದು ಕಡೆ ಫೇಕ್ ಸಿಡಿ ಅಂತಾರೆ. ಮಾಜಿ ಸಿಎಂಗಳಾದ ಹೆಚ್.ಡಿ.ಕುಮಾರಸ್ವಾಮಿ 5 ಕೋಟಿ ವ್ಯವಹಾರ ಎಂದು ಹೇಳುತ್ತಾರೆ.

ಒನ್ ಸೈಡ್ ತನಿಖೆ ನಡೆಯಬಾರದು: ಈ ವಿಡಿಯೋ ನಕಲಿನಾ ಅಥವಾ ಮಾರ್ಫಿಂಗ್ ಆಗಿದೆಯೋ ಇಲ್ಲವೋ ಅನ್ನೋ ಮಾಹಿತಿಯನ್ನ ಗೃಹ ಸಚಿವರಾದ ಬೊಮ್ಮಾಯಿ ಅವರು ಪಡೆದುಕೊಳ್ಳಬೇಕು. ದೇಶದಲ್ಲಿ ಕರ್ನಾಟಕ ರಾಜ್ಯದ ಪೊಲೀಸರಿಗೆ ದೊಡ್ಡ ಗೌರವ ಇದೆ, ಆ ಗೌರವ ಸಣ್ಣ ವಿಷಯಕ್ಕೆ ಕಳೆದುಕೊಳ್ಳುವುದು ಬೇಡ. ಹೆಣ್ಣು ಮಗಳಿಗೆ ನ್ಯಾಯ ಕೊಡಿಸಬೇಕು, ಒನ್ ಸೈಡ್ ತನಿಖೆ ನಡೆಯಬಾರದು. ಶಾಸಕ ಕುಮಟಳ್ಳಿ ಅವರು ಮಚ್ಚೆ ಬಗ್ಗೆ ಹೇಳುತ್ತಾರೆ. ಎಸ್‍ಐಟಿ ತನಿಖೆಗೆ ಫ್ರೀ ಹ್ಯಾಂಡ್ ನೀಡಿ ಬೊಮ್ಮಾಯಿ ಅವರು ಅಧಿಕೃತ ಆದೇಶ ಮಾಡಬೇಕೆಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿಕೊಂಡರು.

ಸಿಬಿಐ ತನಿಖೆ ಯಾಕಿಲ್ಲ?: ಸಿಡಿ ಪ್ರಕರಣದಲ್ಲಿ 5 ಕೋಟಿ ವ್ಯವಹಾರ, ಎರಡು ಫ್ಲ್ಯಾಟ್ ನೀಡಲಾಗಿದೆ ಅಂತ ಹೇಳಿದ್ದರಿಂದ ಈ ಬಗ್ಗೆ ಇಡಿ ತನಿಖೆ ನಡೆಯಬೇಕು. 400 ಸಿಡಿಗಳು ಇವೆಯಂತೆ ಎಂದು ಶಾಸಕ ಯತ್ನಾಳ್ ಅವರೇ ಹೇಳಿದ್ದಾರೆ. ಕಾಂಗ್ರೆಸ್ ನ, ಬಿಜೆಪಿಯ ಇಬ್ಬರು ಮಹಾನ್ ನಾಯಕರ ಬಳಿ ಸಿಡಿ ರೆಡಿಯಾಗ್ತಿದೆ. ಮುಂಬೈನಲ್ಲಿದ್ದ ಶಾಸಕರಿಗೆ ಸಚಿವ ಯೋಗೇಶ್ವರ್ 9 ಕೋಟಿ ಖರ್ಚು ಮಾಡಿದ್ದಾರೆ ಅಂತಾ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಆದ್ರೆ ಇಷ್ಟೆಲ್ಲ ಹೇಳಿಕೆ ನೀಡುತ್ತಿದ್ದರು ಸಿಬಿಐ ಯಾಕೆ ಕೇಸ್ ತೆಗೆದುಕೊಂಡಿಲ್ಲ. ಸಿಡಿ ಇಟ್ಕೊಂಡು ಕಾಂಗ್ರೆಸ್ ಶಾಸಕರು ಬ್ಲ್ಯಾಕ್‍ಮೇಲ್ ಮಾಡ್ತಾರೆ ಅಂತ ಯತ್ನಾಳ್ ಹೇಳ್ತಾರೆ. ನಮ್ಮ ಮುಖ್ಯಮಂತ್ರಿಗಳನ್ನ ಬ್ಲ್ಯಾಕ್ ಮೇಲ್ ಮಾಡುತ್ತಿರೋದು ಎಂದು ಗುಡುಗಿದರು.

Share This Article
Leave a Comment

Leave a Reply

Your email address will not be published. Required fields are marked *