– ಜೆಡಿಎಸ್ ಕತ್ತು ಹಿಸುಕೋ ಪ್ರಯತ್ನಕ್ಕೆ ‘ಕೈ’ ಮುಂದಾಗಿದೆ
– ಸಿದ್ದರಾಮಯ್ಯ ನನ್ನ ಋಣದಲ್ಲಿದ್ದಾರೆ
ಬೆಂಗಳೂರು: ನಾವು ಬದುಕಿರುವವರೆಗೆ ಜೆಡಿಎಸ್ ಯಾವ ಪಕ್ಷದ ಜೊತೆಗೂ ವಿಲೀನ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕಾರಣದ ಊಹ ಪೋಹಗಳನ್ನ ಗಮನಿಸಿದ್ದೇನೆ. ಜೆಡಿಎಸ್ ಅನ್ನು ಯಾವ ಪಕ್ಷದ ಜೊತೆ ವಿಲೀನ ಮಾಡುವುದು ನಾವು ಬದುಕಿರುವವರೆಗೆ ಆಗಲ್ಲ. ದೇವೇಗೌಡರ 60 ವರ್ಷದ ರಾಜಕಾರಣದಲ್ಲಿ 4-5 ವರ್ಷ ಅವರು ಅಧಿಕಾರದಲ್ಲಿ ಇದ್ದರು ಅಷ್ಟೆ. ಕಾಂಗ್ರೆಸ್ ನಿರಂತರವಾಗಿ ಜೆಡಿಎಸ್ ಕತ್ತು ಹಿಸುಕುವ ಪ್ರಯತ್ನಕ್ಕೆ ಮುಂದಾಗಿದೆ. ಆ ಕಾರಣಕ್ಕ ಅನಿವಾರ್ಯವಾಗಿ ಕೆಲವು ನಿರ್ಧಾರ ಮಾಡಿದ್ದೇವೆ ಎಂದರು.
ಕಾಂಗ್ರೆಸ್ಸಿನ ಕೆಲವು ನಾಯಕರು ಜೆಡಿಎಸ್ ನಿಂದ ಹೋದವರೇ ಆಗಿದ್ದು, ಅವರೇ ಇದೀಗ ಜೆಡಿಎಸ್ ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಡಿಎಂಕೆ, ನಿತೀಶ್ ಕುಮಾರ್ ಮೊದಲಾದವರು ಕಾಂಗ್ರೆಸ್ ಹಾಗೂ ಜೆಡಿ ಎಸ್ ಎರಡರ ಜೊತೆಗೂ ಹೋಗಿದ್ದಾರೆ. ಈ ದೇಶದಲ್ಲಿ ಯಾವ ಪಕ್ಷಕ್ಕೂ ಯಾವ ಸಿದ್ಧಾಂತವು ಇಲ್ಲ. ಪ್ರತಿ ಪಕ್ಷವು ಅಧಿಕಾರ ಹೇಗೆ ಹಿಡಿಯಬೇಕು ಎಂಬುದನ್ನ ನೋಡುತ್ತವೆ ಅಷ್ಟೆ ಎಂದು ಹೇಳಿದರು.
ಕಾಂಗ್ರೆಸ್ಸಿನ ಕೆಲವು ನಾಯಕರಿಂದ ನಮಗೆ ಹಿನ್ನಡೆಯಾಗಿದೆ. ಉಪ ಚುನಾವಣೆ ಯಾವುದೇ ಮಾನದಂಡ ಅಲ್ಲಾ. 2023ರ ಚುನಾವಣೆ ನಮಗೆ ಮುಖ್ಯ. ಸಂಕ್ರಾಂತಿ ನಂತರ ಪಕ್ಷ ಸಂಘಟನೆ ಕಾರ್ಯ ಶುರುಮಾಡುತ್ತೇವೆ ಎಂದು ತಿಳಿಸಿದರು.
ಪಕ್ಷದಿಂದ ಕಾಲು ಹೊರಗಿಟ್ಟವರು ಕೆಲವು ಹೇಳಿಕೆ ಕೊಡ್ತಾರೆ ಅದಕ್ಕೆ ತಲೆ ಕೆಡಿಸಿಕೊಳ್ಳುವುದು ಬೇಡ. 2023ಕ್ಕೆ ನನ್ನ ನಿಜವಾದ ರಾಜಕಾರಣ ಶುರುವಾಗುತ್ತದೆ. ಇದುವರೆಗಿನ ರಾಜಕಾರಣ ತಾತ್ಕಾಲಿಕವಾಗಿ ಮಾಡಿದ್ದು, 2023ಕ್ಕೆ ಸ್ವತಂತ್ರವಾಗಿ ಅಧಿಕಾರಕ್ಕೆ ತರುವುದು ನನ್ನ ಗುರಿ. ಯಾವ ಪಕ್ಷದ ಜೊತೆಗೆ ವಿಲಿನದ ಪ್ರಸ್ತಾಪವು ಇಲ್ಲ. ನಾನು ಬಿಜೆಪಿಯ ಬಿ ಟೀಮ್ ಆಗಿದ್ದರೆ ಕಾಂಗ್ರೆಸ್ ಜೊತೆ ಸರ್ಕಾರ ಮಾಡುತ್ತಿರಲಿಲ್ಲ ಎಂದರು.
2004ರಲ್ಲಿ ನಿಮ್ಮನ್ನ ಅಧಿಕಾರಕ್ಕೆ ತರಲು ನನ್ನ ದುಡಿಮೆ ಇದೆ. ನನ್ನನ್ನು ಸಿಎಂ ಮಾಡುವಲ್ಲಿ ನಿಮ್ಮ ದುಡಿಮೆ ಇಲ್ಲ. ಸಿದ್ದರಾಮಯ್ಯ ಈ ಸ್ಥಾನಕ್ಕೆ ಬರಲು ನನ್ನ ದುಡಿಮೆ ಇದೆ. 2004ರಲ್ಲಿ ನನ್ನ ಆರ್ಥಿಕ ಶಕ್ತಿಯನ್ನು ಬಳಸಿ ನಿಮ್ಮನ್ನ ಡಿಸಿಎಂ ಮಾಡಿದ್ದೇನೆ. ನಾನು ಸಿದ್ದರಾಮಯ್ಯ ಋಣದಲ್ಲಿ ಇಲ್ಲಾ ಸಿದ್ದರಾಮಯ್ಯ ನನ್ನ ಋಣದಲ್ಲಿ ಇದ್ದಾರೆ. ತಾಜ್ ವೆಸ್ಟ್ ಎಂಡ್ ನಲ್ಲಿ ಇದ್ದು ಆಡಳಿತ ಮಾಡಿದೆ ಅಂತ ಸಿದ್ದರಾಮಯ್ಯ ಲಘುವಾಗಿ ಮಾತನಾಡುವುದು ಬೇಡ ಎಂದು ವಾಗ್ದಾಳಿ ನಡೆಸಿದರು.