ನಾವು ಕುಟುಂಬದ ಜೊತೆ ಇದ್ದಾಗ ಮಾಸ್ಕ್ ಹಾಕಲ್ಲ- ಚಹರ್ ಕಮೆಂಟ್ ವೈರಲ್

Public TV
1 Min Read

ನವದೆಹಲಿ: ನಾವು ಕುಟುಂಬದ ಜೊತೆ ಇದ್ದಾಗ ಮಾಸ್ಕ್ ಹಾಕಲ್ಲ ಎಂದು ಸಿಎಸ್‍ಕೆ ತಂಡದ ವೇಗಿ ದೀಪಕ್ ಚಹರ್ ಈ ಹಿಂದೆ ಮಾಡಿದ್ದ ಕಮೆಂಟ್ ವೈರಲ್ ಆಗಿದೆ.

ಶುಕ್ರವಾರವಷ್ಟೇ ಯುಎಇಯಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ದೀಪಕ್ ಚಹರ್ ಗೆ ಕೊರೊನಾ ಪಾಸಿಟಿವ್ ಬಂದಿತ್ತು. ಇವರ ಜೊತೆ ತಂಡದ 10 ಸಹಾಯಕ ಸಿಬ್ಬಂದಿಗೂ ಕೊರೊನಾ ವೈರಸ್ ತಗುಲಿದ್ದು, ಮಾಸ್ಕ್ ಬಗ್ಗೆ ಚಹರ್ ಈ ಹಿಂದೆ ಮಾಡಿದ್ದ ಇನ್‍ಸ್ಟಾ ಕಮೆಂಟ್ ಈಗ ವೈರಲ್ ಆಗಿದೆ.

ಯುಎಇಗೆ ಹೊರಡುವ ಮುನ್ನಾ ದೀಪಕ್ ಚಹರ್ ಅವರು, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಸಿಎಸ್‍ಕೆ ಇತರ ಆಟಗಾರರ ಜೊತೆ ಸೆಲ್ಫಿ ತೆಗೆದುಕೊಂಡಿದ್ದರು. ಈ ಫೋಟೋವನ್ನು ಚಹರ್ ಅವರು, ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿಕೊಂಡಿದ್ದರು. ಇದಕ್ಕೆ ಸ್ವತಃ ಅವರ ಸಹೋದರ ರಾಹುಲ್ ಚಹರ್ ಅವರು, ನಿಮ್ಮ ಮಾಸ್ಕ್ ಎಲ್ಲಿ ಸಹೋದರ, ಸಾಮಾಜಿಕ ಅಂತರ ಎಲ್ಲಿ ಎಂದು ಕಮೆಂಟ್ ಮಾಡಿದ್ದರು.

ಸಹೋದರನ ಕಮೆಂಟ್‍ಗೆ ಪ್ರತಿಕ್ರಿಯೆ ಕೊಟ್ಟಿದ್ದ ಚಹರ್, ನಾನು ಎರಡು ಸಲ ಕೊರೊನಾ ಟೆಸ್ಟ್ ಮಾಡಿಸಿದ್ದೇನೆ ಅದರಲ್ಲಿ ನೆಗೆಟಿವ್ ಬಂದಿದೆ ಸಹೋದರ. ನಾವು ಕುಟುಂಬದ ಜೊತೆ ಇದ್ದಾಗ ಮಾಸ್ಕ್ ಹಾಕಿಕೊಳ್ಳಲ್ಲ ಎಂದಿದ್ದರು. ಈಗ ಅವರಿಗೇ ಯುಎಇಗೆ ತೆರಳಿದ ನಂತರ ಕೊರೊನಾ ಪಾಸಿಟಿವ್ ಬಂದಿದ್ದು, ಈಗ ಈ ಕಮೆಂಟ್ ವೈರಲ್ ಆಗಿದೆ. ಇದನ್ನೇ ಇಟ್ಟುಕೊಂಡು ನೆಟ್ಟಿಗರು ಚಹರ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಗಸ್ಟ್ 21ರಂದೇ ಯುಎಇಗೆ ತೆರಳಿತ್ತು. ಎಂದಿನಂತೆ ಎಲ್ಲ ಆಟಗಾರರಿಗೆ ಭಾರತದಲ್ಲೂ ಕೂಡ ಒಂದು ಬಾರಿ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಅಂತೆಯೇ ಯುಎಇಗೆ ತೆರಳಿದ ತಂಡ ಅಲ್ಲಿ ಆರು ದಿನಗಳ ಕಾಲ ಕ್ವಾರಂಟೈನ್‍ಗೆ ಒಳಗಾಗಿತ್ತು. ಶುಕ್ರವಾರಕ್ಕೆ ಆ ಅವಧಿ ಮುಗಿಯಲಿದ್ದು, ಚೆನ್ನೈ ತಂಡ ಅಭ್ಯಾಸ ನಡೆಸಬೇಕಿತ್ತು. ಆದರೆ ಕೊರೊನಾ ಟೆಸ್ಟ್ ನಲ್ಲಿ ತಂಡದ ಸದಸ್ಯರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಹೀಗಾಗಿ ತಂಡ ಸೆಪ್ಟೆಂಬರ್ 1ರಿಂದ ಅಭ್ಯಾಸ ಆರಂಭಿಸಲಿದೆ.

Share This Article
Leave a Comment

Leave a Reply

Your email address will not be published. Required fields are marked *