ನಾವು ಅಡ್ಜೆಸ್ಟ್‌ಮೆಂಟ್ ಮಾಡಿಕೊಳ್ಳುವುದಾದರೆ ಸರ್ಕಾರವನ್ನೇ ಉರುಳಿಸಬಹುದಿತ್ತು- ಪ್ರೀತಂ ಗೌಡಗೆ ಎಚ್‍ಡಿಕೆ ತಿರುಗೇಟು

Public TV
2 Min Read

ಮಂಡ್ಯ: ನಾವು ಅಡ್ಜೆಸ್ಟ್‌ಮೆಂಟ್ ಮಾಡಿಕೊಳ್ಳುವುದಾದರೆ ಸರ್ಕಾರವನ್ನೇ ಉರುಳಿಸಬಹುದಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಾಸಕ ಪ್ರೀತಂ ಗೌಡಗೆ ತಿರುಗೇಟು ನೀಡಿದರು.

ಬಿಜೆಪಿ ಜೊತೆ ಅಡ್ಜೆಸ್ಟ್‌ಮೆಂಟ್ ಗಾಗಿ ಜೆಡಿಎಸ್ ಕಾಯುತ್ತಿದೆ ಎಂಬ ಪ್ರೀತಂ ಗೌಡ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಅಡ್ಜೆಸ್ಟ್‌ಮೆಂಟ್ ಮಾಡಿಕೊಳ್ಳುವುದಾಗಿದ್ದರೆ ಸರ್ಕಾರವನ್ನೇ ಉರುಳಿಸಬಹುದಿತ್ತು. 224 ಜನರು ಮುಖ್ಯಮಂತ್ರಿ ಜೊತೆಯೇ ಇದ್ದಾರೆ. ನಾವು ಯಾವ ಅಡ್ಜೆಸ್ಟ್‌ಮೆಂಟ್ ಗಾಗಿ ಕಾಯುತ್ತಿಲ್ಲ. ಅಡ್ಜೆಸ್ಟ್‌ಮೆಂಟ್ ಮಾಡಿಕೊಳ್ಳುವುದಾಗಿದ್ದರೆ ಸರ್ಕಾರವನ್ನೇ ಉರುಳಿಸಬಹುದಿತ್ತು. ಅದರ ಅವಶ್ಯಕತೆ ನಮಗೆ ಇಲ್ಲ, ಯಾರೋ ಮಾತನಾಡುವವರಿಗೆ ಉತ್ತರ ಕೊಡುವುದಿಲ್ಲ ಎಂದರು.

ಮೇಕೆದಾಟು ಬಗ್ಗೆ ಕೇಂದ್ರ ಸರ್ಕಾರ ಪಾರ್ಲಿಮೆಂಟ್ ನಲ್ಲಿ ಏನೋ ಉತ್ತರ ನೀಡಿದೆ. ರಾಜ್ಯ ಸರ್ಕಾರ ನಾವು ಮಾಡೇ ಮಾಡುತ್ತೇವೆ ಎನ್ನುತ್ತಿದ್ದಾರೆ. ಯಾವಾಗ ಪ್ರಾರಂಭವಾಗುತ್ತದೆ ಕಾದು ನೋಡೋಣ ಎಂದು ತಿಳಿಸಿದರು.

ನೂತನ ಸಚಿವ ಸಂಪುಟದ ಖಾತೆ ಹಂಚಿಕೆ ವಿಚಾರದ ಕುರಿತು ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಪೂರ್ಣಾವಧಿ ಬಗ್ಗೆ ನಾನು ಭವಿಷ್ಯ ನುಡಿಯಲ್ಲ. ನೂತನ ಸಿಎಂ ಉಳಿದಿರುವ 28 ತಿಂಗಳು ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ನಿರ್ವಹಿಸಲಿ. ಅವರು ಮುಂದುವರಿಯುವುದು, ಸಮಸ್ಯೆಗಳು ಎದುರಾಗುವುದು ಬಿಜೆಪಿ ಪಕ್ಷದಲ್ಲಿನ ವಿಚಾರ. ಈ ಬಗ್ಗೆ ನಾನು ಭವಿಷ್ಯ ನುಡಿಯಲ್ಲ. ನನ್ನ ಆತ್ಮೀಯ ಸ್ನೇಹಿತರು ಸಂಪೂರ್ಣ ಅವಧಿಯನ್ನು ಮುಗಿಸಬೇಕು ಎನ್ನುವುದು ನಮ್ಮೆಲ್ಲರ ಆಶಯ. ಅಲ್ಲದೆ ನಾಡಿನ ಜನರ ಸಮಸ್ಯೆಗಳಿಗೆ ಸರ್ಕಾರದಲ್ಲಿ ಉತ್ತಮ ರೀತಿಯ ಕಾರ್ಯಕ್ರಮ ರೂಪಿಸಲಿ ಎಂದು ಸಲಹೆ ನೀಡಿದರು.

ಪ್ರೀತಂ ಗೌಡ ಹೇಳಿದ್ದೇನು?
ಸಿಎಂ ಬಸವರಾಜ ಬೊಮ್ಮಾಯಿಯವರು ಮೊದಲು ಸಿದ್ದಗಂಗಾ ಶ್ರೀ, ಸುತ್ತೂರು ಶ್ರೀ, ಸಿರಿಗೆರೆ ಸ್ವಾಮೀಜಿಗಳಿಗೆ ಅಥವಾ ಆದಿ ಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆಯಬೇಕಾಗಿತ್ತು. ಆದರೆ ಅವರ ತಂದೆ ಸರ್ಕಾರ ಉರುಳಿಸಿದಂತಹವರ ಮನೆಗೆ ಹೋಗಿ ಆಶೀರ್ವಾದ ಪಡೆಯುವ ಅಗತ್ಯ ಇರಲಿಲ್ಲ. ಇದು ನಾನು ಹೇಳುತ್ತಿಲ್ಲ ಎಲ್ಲಾ ಕಾರ್ಯಕರ್ತರು ಮಾತನಾಡುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡೋದು ಬೇಡ: ಶಾಸಕ ಪ್ರೀತಂ ಗೌಡ

ನಾನು ಯಾವುದೇ ಮುಲಾಜಿಗೆ ಒಳಗಾಗಿ ರಾಜಕಾರಣ ಮಾಡುವಂತನಲ್ಲ. ನಮ್ಮ ಮನೆಗೆ ಕಲ್ಲು ಹೊಡೆದ ಸಮಯದಲ್ಲಿ ಯಡಿಯೂರಪ್ಪನವರು ಹಾಗೂ ಆರ್. ಅಶೋಕ್ ಬಂದು ಮಾನಸಿಕವಾಗಿ, ನೈತಿಕವಾಗಿ ಧೈರ್ಯ ತುಂಬಿ ಹೆಚ್ಚು ಶಕ್ತಿ ಕೊಟ್ಟಂತಹ ನಾಯಕರ ಮಧ್ಯೆ ನಾನು ಬೆಳೆದು ಬಂದಿದ್ದೇನೆ. ನಾವು ಬೆಳಗಾದರೆ ಜಾತ್ಯತೀಯ ಜನತ ದಳದ ವಿರುದ್ಧ ಗುದ್ದಾಟ ಮಾಡಿ ಪಕ್ಷ ಕಟ್ಟುವುದು, ಇನ್ನೊಬ್ಬರು ಹೋಗಿ ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡಿಕೊಳ್ಳುವುದು. ಇಂತಹ ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡಿಕೊಳ್ಳಲು ನಾವು ರಾಜಕೀಯದಲ್ಲಿ ಸನ್ಯಾಸಿಗಳಲ್ಲ. ನಾನು ರಾಜಕಾರಣ ಮಾಡಬೇಕೆಂದೇ ಬಂದಿರುವುದು. ಹಳೇ ಮೈಸೂರು ಜಿಲ್ಲೆಯಲ್ಲಾಗಲಿ, ಹಾಸನ ಜಿಲ್ಲೆಯಲ್ಲಾಗಲಿ ಎಲ್ಲೆಯಾದರು ಯಾವುದೇ ಕಾರಣಕ್ಕೂ ಅಡ್ಜೆಸ್ಟ್‌ಮೆಂಟ್ ರಾಜಕಾರಣ ಆಗುವುದಿಲ್ಲ ಎಂದು ನಾನು ಕಾರ್ಯಕರ್ತರಿಗೆ ಪ್ರಾಮಾಣಿಕವಾಗಿ ತಿಳಿಸಿಕೊಡುವಂತಹ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *