ನಾಳೆ ಮದುವೆ ಆಗಬೇಕಿದ್ದ ವಧುವಿನ ತಂದೆ, ತಂಗಿಗೆ ಕೊರೊನಾ ಪಾಸಿಟಿವ್

Public TV
1 Min Read

– ಮದ್ವೆ ಮನೆಯ ಸಂತಸಕ್ಕೆ ಕೊಳ್ಳಿಯಿಟ್ಟ ಮಹಾಮಾರಿ

ಯಾದಗಿರಿ: ಜಿಲ್ಲೆಯಲ್ಲಿ ಇಷ್ಟು ದಿನ ಕ್ವಾರೆಂಟೈನ್ ಕೇಂದ್ರಗಳಿಗೆ ಸೀಮಿತವಾಗಿದ್ದ ಡೆಡ್ಲಿ ಕೊರೊನಾ ವೈರಸ್, ಈಗ ಜಿಲ್ಲೆಯ ಮದುವೆ ಮನೆಯೊಂದರ ಬಾಗಿಲು ತಟ್ಟಿದೆ. ನಾಳೆ ಮದುವೆಯಾಗಬೇಕಿದ್ದ ವಧುವಿನ ತಂದೆ ಹಾಗೂ ತಂಗಿಗೆ ಕೊರೊನಾ ವಕ್ಕರಿಸಿದೆ.

ಯಾದಗಿರಿ ತಾಲೂಕಿನ ಅಲ್ಲಿಪೂರತಾಂಡಾದ ಯುವತಿ ಜೊತೆ ನಾಲ್ವಾರತಾಂಡಾದ ಯುವಕನ ನಾಳೆ(ಗುರುವಾರ) ಮದುವೆ ನಿಗದಿಯಾಗಿತ್ತು. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲ್ವಾರತಾಂಡಾದಲ್ಲಿ ಮದುವೆಗೆ ಸಿದ್ಧತೆ ನಡೆಸಲಾಗಿತ್ತು. ಆದರೆ ಕೊರೊನಾ ಎಂಬ ಮಾಹಾಮಾರಿ ಈ ಮದುವೆ ಮನೆಯ ಸಂತಸವನ್ನು ಕಿತ್ತುಕೊಂಡಿದೆ. ಮದುವೆ ಮನೆಯಲ್ಲಿ ಈಗ ಆತಂಕದ ಛಾಯೆ ಆವರಿಸಿದೆ. ಆದ್ದರಿಂದ ಮದುವೆಯನ್ನು ಮುಂದಕ್ಕೆ ಹಾಕಲಾಗಿದೆ.

ವಧು ಮತ್ತು ಕುಟುಂಬಸ್ಥರು, ಸದ್ಯ ಆಂಧ್ರಪ್ರದೇಶದ ನೆಲ್ಲೂರನಲ್ಲಿ ವಾಸವಿದ್ದಾರೆ. ಮಗಳ ಮದುವೆ ಮಾಡುವ ಹಿನ್ನೆಲೆ ಈ ಕುಟುಂಬ ಕಳೆದ 10 ದಿನಗಳ ಹಿಂದೆ ಜಿಲ್ಲೆಗೆ ಆಗಮಿಸಿತ್ತು. ಅಂತರ್ ರಾಜ್ಯ ಪ್ರಯಾಣದ ಹಿನ್ನೆಲೆ ಈ ಕುಟುಂಬಸ್ಥರ ಎಲ್ಲರಿಗೂ ಪರೀಕ್ಷೆ ಮಾಡಿ ಸಾಂಪಲ್‍ಗಳನ್ನು ಲ್ಯಾಬ್‍ಗೆ ಕಳುಹಿಸಲಾಗಿತ್ತು. ಇವರೆಲ್ಲರನ್ನು ಏಳು ದಿನ ಕ್ವಾರೆಂಟೈನ್ ನಲ್ಲಿಟ್ಟು ವರದಿ ಬರುವ ಮುನ್ನವೇ ಮನೆಗೆ ಕಳುಹಿಸಲಾಗಿತ್ತು. ಸದ್ಯ ಇವರ ಫಲಿತಾಂಶ ಹೊರ ಬಿದ್ದಿದ್ದು, ಇದರಲ್ಲಿ ತಂದೆ ಮತ್ತು ಮಗಳಿಗೆ ಕೊರೊನಾ ಪಾಸಿಟಿವ್ ಧೃಡಪಟ್ಟಿದೆ.

ಇದರ ಜೊತೆಗೆ ಅಲ್ಲಿಪೂರತಾಂಡಾದಲ್ಲಿ 11 ಜನರಿಗೆ ಕೊರೊನಾ ಧೃಡಪಟ್ಟಿದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸೋಂಕಿತ 11 ಜನ ವಾಪಸ್ ಕೋವಿಡ್ ಆಸ್ಪತ್ರೆಗೆ ಸೇರಲು ಉದ್ಧಟತನ ತೋರುತ್ತಿದ್ದಾರೆ. ಅಧಿಕಾರಿಗಳು ಇವರನ್ನು ಕರೆತರಲು ಕಳೆದ ರಾತ್ರಿಯಿಂದ ಹರಸಾಹಸ ಪಡುತ್ತಿದ್ದಾರೆ. ವಧುವಿನ ತಂದೆ ಹಾಗೂ ತಂಗಿಗೆ ಕೊರೊನಾ ಪತ್ತೆಯಾಗಿದ್ದು, ಈ ಇಬ್ಬರ ಜೊತೆ ವಧು ಪ್ರಾಥಮಿಕ ಸಂಪರ್ಕ ಹೊಂದಿರುವ ಕಾರಣ, ವಧು ಹಾಗೂ ಕುಟುಂಬಸ್ಥರನ್ನು ಹೋಂ ಕ್ವಾರೆಂಟೈನ್ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *