ನಾಳೆ ಕರ್ನಾಟಕ ಬಂದ್‌ – ಏನಿರುತ್ತೆ? ಏನು ಇರಲ್ಲ?

Public TV
2 Min Read

ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ನಾಳೆ ಭಾರತ್ ಬಂದ್ ನಡೆಸಲಾಗುತ್ತಿದೆ. ಇದರ ಭಾಗವಾಗಿ ಕರ್ನಾಟಕ ಬಂದ್‌ಗೂ ಕರೆ ನೀಡಲಾಗಿದೆ. ಆದರೆ ಕರ್ನಾಟಕದಲ್ಲಿ ಹೋರಾಟಗಾರರು ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಿದ್ದು, ಸಂಘಟನೆಗಳು ನೈತಿಕ ಬೆಂಬಲ ನೀಡಿವೆ. ಹೀಗಾಗಿ ಕರ್ನಾಟಕದಲ್ಲಿ ಬಂದ್‌ ಬಿಸಿ ನಾಳೆ ಇರಲ್ಲ.

ಬಂದ್‌ ಯಾಕೆ?
ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುಂತೆ ಒತ್ತಾಯಿಸಿ, ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ನಾಳೆಗೆ ನಾಲ್ಕು ತಿಂಗಳು ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಬಂದ್ ಯಶಸ್ವಿಗೊಳಿಸಲು, ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ವತಿಯಿಂದ ಮನವಿ ಮಾಡಲಾಗಿದೆ.

ಕರ್ನಾಟಕದಲ್ಲೂ ಬಂದ್ ಯಶಸ್ವಿಗೊಳಿಸುವಂತೆ ಮನವಿ ಮಾಡಲಾಗಿದೆ. ರಾಜ್ಯದ ಎಲ್ಲ ನಾಗರೀಕರು ಬಂದ್‌ಗೆ  ಬೆಂಬಲ ಸೂಚಿಸುವಂತೆ ಸಂಯುಕ್ತ ಹೋರಾಟ ಕರ್ನಾಟಕದ ಸಂಯೋಜಕ ಮತ್ತು ರೈತ ಮುಖಂಡ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.

ಬಂದ್‌ ಇರಲ್ಲ:  ಕಳೆದ ಆರು ತಿಂಗಳಿಂದ ಕರ್ನಾಟಕದಲ್ಲಿ 3- 4 ಬಾರಿ ಬಂದ್ ಆಚರಣೆ ಮಾಡಲಾಗಿದೆ. ಇದಕ್ಕೆ ರಾಜ್ಯದ ಜನರು ರೈತರು ಅಂದು ಅಭೂತಪೂರ್ವ ಬೆಂಬಲ ನೀಡಿದ್ದಾರೆ ಆದರೆ ಈ ಬಾರಿಯ ಬಂದ್ ಬಗ್ಗೆ ಪೂರ್ವಯೋಜಿತವಾಗಿ ರಾಜ್ಯದ ಎಲ್ಲ ರೈತ, ಜನಪರ ಸಂಘಟನೆಗಳು ಚರ್ಚಿಸಿದೆ ಇರುವ ಕಾರಣ ಯಶಸ್ವಿ ಬಂದ್ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ. ನಾವು ರಾಜ್ಯದಲ್ಲಿ ಬಂದ್ ಕಾರ್ಯಕ್ರಮದ ಬದಲು ಎಲ್ಲಾ ಜಿಲ್ಲೆಯಲ್ಲಿ ಕೃಷಿ ಕಾಯ್ದೆಗಳ ಶವಯಾತ್ರೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ. ರಾಷ್ಟ್ರೀಯ ಕಿಸಾನ್ ಸಂಯುಕ್ತ ಮೋರ್ಚಾ ಕರೆಯನ್ನು ಈ ರೀತಿಯಲ್ಲಿ ಕರ್ನಾಟಕದ ರೈತರು ಬೆಂಬಲಿಸಲಿದ್ದೇವೆ ಅಂತ ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ಜನಪರ ಸಂಘಟನೆಗಳ ಜೊತೆ ಚರ್ಚಿಸದೇ ಭಾರತ್ ಬಂದ್ ಗೆ ಕರೆ ನೀಡಿದೆ. ಹೀಗಾಗಿ ನಾಳೆ ರಾಜ್ಯದಲ್ಲಿ ಬಂದ್ ನಡಸದಿರಲು ರಾಜ್ಯ ರೈತ ಸಂಘಟನೆಗಳು ತೀರ್ಮಾನ ಮಾಡಲಾಗಿದೆ. ಬೆಂಗಳೂರಿನ ಟೌನ್ ಹಾಲ್ ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಬೆಂಬಲ ನೀಡಿದವರು ಯಾರು?
ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟ ನಾಳೆ ಬೆಳಿಗ್ಗೆ 11.30ಕ್ಕೆ ಮೆಜೆಸ್ಟಿಕ್ ನಲ್ಲಿ ಪ್ರತಿಭಟನೆ ಮಾಡಲಿದೆ. ನಮ್ಮ ಚಾಲಕರ ಟ್ರೇಡ್ ಯೂನಿಯನ್, ಅದರ್ಶ ಆಟೋ ಚಾಲಕರ ಮತ್ತು ಮಾಲೀಕರ ಸಂಘ, ರಾಷ್ಟ್ರೀಯ ವಾಹನ ಚಾಲಕರ ಒಕ್ಕೂಟ, ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘ, ಕರವೇ ಪ್ರವೀಣ್ ಶೆಟ್ಟಿ ಬಣ, ಆಟೋ ಚಾಲಕರ ಸಂಘ, ಪೀಸ್ ಆಟೋ ಚಾಲಕ ಸಂಘ, ಹೋಟೆಲ್ ಮಾಲೀಕರು ನೈತಿಕ ಬೆಂಬಲ ಸೂಚಿಸಿದ್ದಾರೆ.

ನಾಳೆ ಏನಿರತ್ತೆ?
ಎಂದಿನಂತೆ ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ಬಸ್ ಸಂಚಾರ ಇರಲಿದೆ. ಮೆಟ್ರೋ, ಆಟೋ ಸಂಚಾರ ಕೂಡ ಎಂದಿನಂತೆ ಇರಲಿದೆ. ಓಲಾ-ಊಬರ್, ಖಾಸಗಿ ಬಸ್, ರೈಲ್ವೇ ಸಂಚಾರದಲ್ಲಿ ವ್ಯತ್ಯಯ ಇಲ್ಲ . ಶಾಲೆ, ಕಾಲೇಜುಗಳಿಗೆ ರಜೆ ನೀಡಿಲ್ಲ.

ಮಾರುಕಟ್ಟೆ ವ್ಯಾಪಾರ ವಹಿವಾಟಿಗೆ ಯಾವುದೇ ಅಡ್ಡಿ ಇಲ್ಲ. ಮೆಡಿಕಲ್ ಅಂಗಡಿ ಮತ್ತು ಹಾಲಿನ‌ ಮಳಿಗೆಗಳು ಎಂದಿಂತೆ ತೆರಿದಿರುತ್ತವೆ. ಲಾರಿ ಮಾಲೀಕರಿಂದ ಬೆಂಬಲ ನೀಡದ ಕಾರಣ ಎಂದಿನಂತೆ ಲಾರಿಗಳು ಸಂಚರಿಸಲಿವೆ.

ನಾಳೆ ಏನಿರಲ್ಲ?
ರಾಷ್ಟ್ರೀಯ ಚಾಲಕರ ವೇದಿಕೆ ಮತ್ತು ನಮ್ಮ ಚಾಲಕರ ಟ್ರೇಡ್ ಯೂನಿಯನ್ (ಟ್ಯಾಕ್ಸಿ) ಬಂದ್‌ಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಕಡೆ ಹೋಗುವ ಟ್ಯಾಕ್ಸಿಗಳ ಜೊತೆ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಲು ವಾಹನಗಳು ಸಿಗುವುದು ಅನುಮಾನ.

Share This Article
Leave a Comment

Leave a Reply

Your email address will not be published. Required fields are marked *