ನಾಳೆಯಿಂದ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಸೀಲ್‍ಡೌನ್

Public TV
3 Min Read

– ಕೆ.ಆರ್.ಮಾರ್ಕೆಟ್ ಸುತ್ತ ಟಫ್ ರೂಲ್ಸ್ ಜಾರಿ
– ಬಿಬಿಎಂಪಿಯಿಂದ ಮಹತ್ವದ ಆದೇಶ

ಬೆಂಗಳೂರು: ಕೊರೊನಾ ಪ್ರಕಣಗಳು ಹೆಚ್ಚುತ್ತಿರುವ ಹಿನ್ನೆಲೆ ಕಟ್ಟುನಿಟ್ಟಿನ ಲಾಕ್‍ಡೌನ್ ಜಾರಿಗೆ ತರಲು ಬಿಬಿಎಂಪಿ ಕ್ರಮ ಕೈಗೊಂಡಿದ್ದು, ಕೆ.ಆರ್.ಮಾರ್ಕೆಟ್ ಸುತ್ತಲಿನ ಏರಿಯಾಗಳಲ್ಲಿ ಟಫ್ ರೂಲ್ಸ್ ಜಾರಿಗೆ ತರುವ ಕುರಿತು ಬಿಬಿಎಂಪಿಯಿಂದ ಮಹತ್ವದ ಆದೇಶ ಹೊರಡಿಸಲಾಗಿದೆ.

ಟೌನ್ ಹಾಲ್ ಸರ್ಕಲ್, ಜೆಸಿ ರೋಡ್, ಕಲಾಸಿಪಾಳ್ಯ ಮುಖ್ಯ ರಸ್ತೆ, ಕೆ.ಆರ್.ಮಾರ್ಕೆಟ್ ಜಂಕ್ಷನ್, ಟಿಪ್ಪು ಸುಲ್ತಾನ್ ಪ್ಯಾಲೇಸ್ ರೋಡ್, ತಗರ್ ಪೇಟ್ ಮುಖ್ಯರಸ್ತೆ ಸೇರಿದಂತೆ ಕೆ.ಆರ್.ಮಾರ್ಕೆಟ್ ಸುತ್ತಲಿನ ರಸ್ತೆಗಳನ್ನು ಕಂಪ್ಲೀಟ್ ಬಂದ್ ಮಾಡಲು ಯೋಜಿಸಲಾಗಿದೆ. ಈ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ, ಹೊಟೇಲ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಬೀದಿಬದಿ ವ್ಯಾಪಾರ, ಧಾರ್ಮಿಕ ಕೇಂದ್ರಗಳು ಸಂಪೂರ್ಣವಾಗಿ ಬಂದ್ ಆಗಲಿವೆ.

ನಿಯಮ ಉಲ್ಲಂಘಿಸಿ ರಸ್ತೆಗಿಳಿದರೆ ಕಠಿಣ ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲಾಗಿದೆ. ಆಸ್ಪತ್ರೆ, ಮೆಡಿಕಲ್, ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ನಾಳೆಯಿಂದ ಕಂಟೈನ್ಮೆಂಟ್ ಝೋನ್ ಗಳಲ್ಲಿ ಸಾರಿ, ಐಎಎಲ್ ಲಕ್ಷಣಗಳು ಇದ್ದವರನ್ನು ಪತ್ತೆ ಹಚ್ಚುವ ಕಾರ್ಯ ಆರಂಭವಾಗಲಿದೆ. ಈ ಏರಿಯಾಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಲ್ಲಿ ಅಂಗಡಿ ಮಾಲೀಕರು ಹಾಗೂ ಜನರು ಸಂಪರ್ಣ ವಿಫಲರಾಗಿದ್ದರು. ಈ ಹಿನ್ನಲೆ ಸಿಎಂ ಆದೇಶದ ಮೇರೆಗೆ ಬಿಬಿಎಂಪಿ ಟಫ್ ಸೀಲ್ ಡೌನ್ ಜಾರಿ ಮಾಡುತ್ತಿದೆ.

ಯಾವ್ಯಾವ ರಸ್ತೆಗಳು ಸೀಲ್‍ಡೌನ್?
ನಗರದ ಒಟ್ಟು 15 ಪ್ರಮುಖ ರಸ್ತೆಗಳು ಸೀಲ್‍ಡೌನ್ ಆಗಲಿದ್ದು, ಟೌನ್‍ಹಾಲ್ ಸರ್ಕಲ್, ಜೆಸಿ ರಸ್ತೆ, ಎಎಂ ರಸ್ತೆ, ಕಲಾಸಿಪಾಳ್ಯ ಮುಖ್ಯರಸ್ತೆ, ಕೃಷ್ಣರಾಜೇಂದ್ರ ಮಾರುಕಟ್ಟೆ ಜಂಕ್ಷನ್ ಮತ್ತು ಸರ್ವೀಸ್ ರಸ್ತೆ, ತರಗುಪೇಟೆ ರಸ್ತೆ (2ನೇ ಮುಖ್ಯರಸ್ತೆ), ಟಿಪ್ಪುಸುಲ್ತಾನ್ ಪ್ಯಾಲೇಸ್ ರಸ್ತೆ, ತರಗುಪೇಟೆ ರಸ್ತೆ (4ನೇ ಮುಖ್ಯ ರಸ್ತೆ), ಭಾಷ್ಯಂ ರಸ್ತೆ, ಶ್ರೀನಿವಾಸ ಮಂದಿರ ರಸ್ತೆ, ಕಿಲರಿ ರಸ್ತೆ, ಆಂಜನೇಯ ಸ್ವಾಮಿದೇವಸ್ಥಾನ ರಸ್ತೆ, ಸನಕಲಪೇಟೆ ರಸ್ತೆ ಹಾಗೂ ಎಸ್‍ಜಿಪಿ ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಲಿವೆ.

ಯಾವ ವ್ಯವಸ್ಥೆ ಇರುತ್ತದೆ:
ಸೀಲ್‍ಡೌನ್ ಮಾಡಲಾಗಿರುವ ಪ್ರದೇಶಗಳಲ್ಲಿ ಈ ಹಿಂದೆ ಪಾದರಾಯನಪುರದಲ್ಲಿ ಅನುಸರಿಸಿದ ಮಾರ್ಗಸೂಚಿಗೂ ಕಠಿಣ ಮಾರ್ಗಸೂಚಿ ಅಳವಡಿಸಿಕೊಳ್ಳಲಾಗಿದೆ. ಇದರಂತೆ ಕೃಷ್ಣರಾಜೇಂದ್ರ ಮಾರುಕಟ್ಟೆ ಹಾಗೂ ಕಲಾಸಿಪಾಳ್ಯದ ಎಲ್ಲ ವಹಿವಾಟು ಬಂದ್ ಮಾಡಲಾಗುತ್ತದೆ. ಎಲ್ಲ ರೀತಿಯ ವಾಣಿಜ್ಯ ವಹಿವಾಟು ನಡೆಸುವ ಅಂಗಡಿಗಳು, ಹೋಟೆಲ್, ರೆಸ್ಟೋರೆಂಟ್ ಹಾಗೂ ಬೀದಿ ವ್ಯಾಪರ, ಧಾರ್ಮಿಕ ಕೇಂದ್ರಗಳು ತೆರೆಯುವುದಕ್ಕೆ ಅಥವಾ ಜನ ಸಮೂಹ ಸೇರುವಂತಹ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ. ಕಿರಾಣಿ ಮಾರಾಟಗಾರರು ಅಥವಾ ಅಂಗಡಿಗಳ ಮಾಲೀಕರು ಈ ಪ್ರದೇಶಗಳಲ್ಲಿ ಮಾರಾಟ ಮಾಡುವಂತಿಲ್ಲ. ಮದ್ಯ ಮಾರಾಟಕ್ಕೂ ಅವಕಾಶ ಇಲ್ಲ, ಹೂ ಮಾರುಕಟ್ಟೆ ಮತ್ತು ಅಂಗಡಿಗಳು ಬಂದ್ ಮಾಡಲು ನಿರ್ದೇಶನ ನೀಡಲಾಗಿದೆ.

ಯಾವುದಕ್ಕೆ ಅವಕಾಶ ಇರುತ್ತದೆ:
ಹಣ್ಣು, ತರಕಾರಿ, ಮಾಂಸ ಮಾರಾಟ ಹಾಗೂ ದಿನಸಿ ಸೇರಿ ಅತ್ಯವಶ್ಯಕ ವಸ್ತುಗಳ ಮಾರಾಟ ಮತ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಆಸ್ಪತ್ರೆಗಳು, ಕ್ಲಿನಿಕ್ ಹಾಗೂ ಮೆಡಿಕಲ್ ಶಾಪ್‍ಗಳು ತೆರೆದಿರಲಿವೆ. ದಿನಪತ್ರಿಕೆ ಹಾಗೂ ಅತ್ಯವಶ್ಯಕ ವಸ್ತುಗಳು ಸಿಗಲಿವೆ.

ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ:
ಈ ಪ್ರದೇಶಗಳಲ್ಲಿ ಜನರ ಆರೋಗ್ಯ ಪರೀಕ್ಷೆ, ಸೋಂಕಿತರ ಸಂಪರ್ಕದಲ್ಲಿರುವ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯಾಚರಣೆ ಹೆಚ್ಚು ಮುಂಜಾಗ್ರತೆ ವಹಿಸುವಂತೆ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಉಸಿರಾಟದ ಸಮಸ್ಯೆ, ಸೋಂಕಿನ ಲಕ್ಷಣ ಕಾಣಿಸಿಕೊಂಡವರ ಪರೀಕ್ಷೆ, ಗಂಟಲು ದ್ರವ ಸಂಗ್ರಹ ಹಾಗೂ ರ್ಯಾಂಡಮ್ ಪರೀಕ್ಷೆಗೆ ಸೂಚನೆ ನೀಡಲಾಗಿದೆ. ಸೀಲ್‍ಡೌನ್ ರಸ್ತೆಗಳಲ್ಲಿ ಕಸ ವಿಲೇವಾರಿ, ನೀರು ಹಾಗೂ ಸ್ವಚ್ಛತೆ ಸೇರಿದಂತೆ ಪಾಲಿಕೆ ಕಾರ್ಯಗಳಲ್ಲಿ ಯಾವುದೇ ಲೋಪವಾಗದಂತೆ ಸಮನ್ವಯ ತಂಡ ರಚನೆ ಮಾಡಿಕೊಳ್ಳಲು ಆಯುಕ್ತರು ನಿರ್ದೇಶನ ನೀಡಿದ್ದಾರೆ.

ಈ ರಸ್ತೆಗಳೇ ಏಕೆ ಸೀಲ್‍ಡೌನ್?
ಆಯ್ಕೆ ಮಾಡಿರುವ ಪ್ರಮುಖ ರಸ್ತೆಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚು ಕಂಡು ಬಂದ ಹಿನ್ನೆಲೆಯಲ್ಲಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಜನ ಸಂಚಾರ ಹಾಗೂ ವಾಣಿಜ್ಯ ಚಟುವಟಿಕೆಯು ಹೆಚ್ಚಾಗಿದೆ. ಅಲ್ಲದೆ, ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಾಗುವ ಆತಂಕ ಎದುರಾಗಿದ್ದು, ಈ ರಸ್ತೆಗಳನ್ನು ಸೀಲ್‍ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಎಸ್‍ಎಸ್‍ಎಲ್‍ಸಿ ಸೆಂಟರ್ ಗೆ ಅವಕಾಶ:
ಸೀಲ್‍ಡೌನ್ ಮಾಡಲಾಗಿರುವ ಪ್ರದೇಶದ ಸುತ್ತ ಎಸ್‍ಎಸ್‍ಎಲ್‍ಸಿ ಸೆಂಟರ್ ಳಿದ್ದರೆ ಅಲ್ಲಿಯೂ ಬಿಬಿಎಂಪಿ ವಿನಾಯಿತಿ ನೀಡಿದೆ. ಆದರೆ ಇದನ್ನು ಬಳಸಿಕೊಳ್ಳುವುದು ಅಥವಾ ಬಿಡುವ ನಿರ್ಧಾರವನ್ನು ಶಿಕ್ಷಣ ಇಲಾಖೆಗೆ ಬಿಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *