ನಾಳೆಯಿಂದ ಉತ್ತರ ಕನ್ನಡದ ಕಾಲೇಜುಗಳಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳಿಗೆ ಲಸಿಕಾಕರಣ

Public TV
1 Min Read

– 33,965 ಫಲಾನುಭವಿಗಳಿಗೆ ಲಸಿಕೆ

ಕಾರವಾರ: ರಾಜ್ಯ ಸರ್ಕಾರ ಶೀಘ್ರದಲ್ಲಿ ಪದವಿ ಕಾಲೇಜುಗಳನ್ನು ಪ್ರಾರಂಭ ಮಾಡಲು ನಿರ್ಣಯಿಸಿರುವ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈಗಾಗಲೇ 33 ಸಾವಿರಕ್ಕೂ ಹೆಚ್ಚು ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಆಯಾ ಕಾಲೇಜಿನಲ್ಲಿ ಲಸಿಕೆ ನೀಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಬಹುತೇಕ ಇಳಿಮುಖ ಕಂಡಿದೆ. ಜಿಲ್ಲೆಯಲ್ಲಿ ಸದ್ಯ 1.08 ಪಾಸಿಟಿವ್ ರೇಟ್ ಇದ್ದು, ಪಾಸಿಟಿವ್ ರೇಟ್‍ನ್ನು ಶೂನ್ಯಕ್ಕೆ ತರಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಈಗಾಗಲೇ 33,965 ಫಲಾನುಭವಿಗಳನ್ನು ಲಸಿಕಾಕರಣಕ್ಕೆ ಗುರುತಿಸಲಾಗಿದೆ.

ಜಿಲ್ಲೆಯಲ್ಲಿ ಪಾಲಿಟೆಕ್ನಿಕ್, ಪದವಿ, ಐಟಿಐ ಸೇರಿದಂತೆ 94 ಕಾಲೇಜುಗಳಿವೆ. ಇದರಲ್ಲಿ 18 ವರ್ಷ ಮೇಲ್ಪಟ್ಟ 31,833 ವಿದ್ಯಾರ್ಥಿಗಳಿದ್ದರೆ, 18 ರಿಂದ 44 ವರ್ಷ ವಯಸ್ಸಿನ ಬೋಧಕ, ಬೋಧಕೇತರ ಸಿಬ್ಬಂದಿ 1497, 45 ವರ್ಷ ಮೇಲ್ಪಟ್ಟ ಬೋಧಕ, ಬೋಧಕೇತರ ಸಿಬ್ಬಂದಿ 645 ಜನ ಇದ್ದು, ಒಟ್ಟು 33,965 ಜನರಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಹಂತ ಹಂತವಾಗಿ ಲಸಿಕಾಕರಣ
ಜಿಲ್ಲೆಯಲ್ಲಿ 4000 ಕೋವ್ಯಾಕ್ಸಿನ್ ಡೋಸ್ ಮಾತ್ರ ಇದ್ದು, ಇಂದು ಹೆಚ್ಚುವರಿಯಾಗಿ 7,000 ಕೋವಿಶೀಲ್ಡ್ ಡೋಸ್ ಬರಲಿದೆ. ಒಟ್ಟು 11 ಸಾವಿರ ನಾಳೆಗೆ ವ್ಯಾಕ್ಸಿನ್ ಇರಲಿದ್ದು, ಇದರಲ್ಲಿ 4000 ಡೋಸ್ ನ್ನು ವಿದ್ಯಾರ್ಥಿಗಳಿಗೆ ಹಾಗೂ 3000 ಡೋಸ್ ನ್ನು ಸಾರ್ವಜನಿಕರಿಗೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ನಾಳೆ ಕಾರವಾರದ ದಿವೇಕರ್ ಕಾಲೇಜು, ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಕುಮಟಾದ ಎವಿ ಬಾಳಿಗಾ ಕಾಲೇಜ್, ಶಿರಸಿಯ ಎಂಇಎಸ್ ಕಾಲೇಜ್ ಮತ್ತು ಎಂಇಎಸ್ ವಾಣಿಜ್ಯ ಕಾಲೇಜುಗಳಲ್ಲಿ ಲಸಿಕೆ ನೀಡಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *