ನಾಲ್ಕೈದು ವಾರಗಳಲ್ಲಿ ಕೊರೊನಾ ಲಸಿಕೆ: ಸಿಎಂ ಬಿಎಸ್‍ವೈ

Public TV
3 Min Read

ಮೈಸೂರು: ಇನ್ನು ನಾಲ್ಕು ವಾರಗಳಲ್ಲಿ ಕೊರೊನಾ ಲಸಿಕೆ ಬರಬಹುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಮೈಸೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಇನ್ನು ನಾಲ್ಕೈದು ವಾರಗಳಲ್ಲಿ ಕೊರೊನಾ ಲಸಿಕೆ ಬರಲಿದೆ. ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ಹಲವು ರಾಜ್ಯಗಳ ಸಿಎಂ ಸಭೆ ಕರೆದಿದ್ದರು. ಕೊರೊನಾ ಲಸಿಕೆ ವಿಚಾರವಾಗಿಯೇ ಚರ್ಚೆ ನಡೆಸಲಾಗಿದೆ. ಅಲ್ಲದೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸಹ ಹೇಳಿದ್ದಾರೆ. ಇದೇ ವೇಳೆ ನಾಲ್ಕು ವಾರಗಳಲ್ಲಿ ಕೊರೊನಾ ಲಸಿಕೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ ಎಂದರು.

ಲಸಿಕೆಗೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಿದರು. ನಾವು ಸಹ ಜಿಲ್ಲಾ ಮಟ್ಟದಲ್ಲಿ ಲಸಿಕೆ ಹಂಚಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅದಕ್ಕೆ ಬೇಕಾದ ತಯಾರಿ ನಡೆದಿದೆ. ದೊಡ್ಡ ಮಟ್ಟದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕೊರೊನಾ ಲಸಿಕೆ ವಿತರಣೆಯ ತಯಾರಿ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ವಿವಿಧ ರಾಜ್ಯಗಳ ಸಿಎಂಗಳ ಜೊತೆ ಸಭೆ ನಡೆಸಿ ಮಹತ್ವದ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದ ಬಳಿಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಈ ಕುರಿತು ವಿವರಿಸಿದ್ದಾರೆ. ಸಭೆಯಲ್ಲಿ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ಅವರು ಭಾಗವಹಿಸಿ ಲಸಿಕೆ ಬಗ್ಗೆ ಮಾಹಿತಿ ನೀಡಿದರು. ಯಾವ್ಯಾವ ದೇಶಗಳಲ್ಲಿ ಲಸಿಕೆ ತಯಾರಿಕೆ ಸ್ಥಿತಿ ಯಾವ ಹಂತದಲ್ಲಿದೆ ಎಂಬ ಬಗ್ಗೆ ತಿಳಿಸಿದರು. ಇಡೀ ವಿಶ್ವದಲ್ಲಿ ಹಲವು ಕಡೆ ಲಸಿಕೆ ತಯಾರಾಗುತ್ತಿದೆ. ಈ ಪೈಕಿ ನಮ್ಮ ದೇಶದಲ್ಲಿ 50 ಲಸಿಕೆಗಳು ಕ್ಲಿನಿಕಲ್ ಸಂಶೋಧನೆಗಳ ಹಂತದಲ್ಲಿವೆ. 25 ಲಸಿಕೆಗಳು ಅಡ್ವಾನ್ಸ್ ಟ್ರಯಲ್ ನಲ್ಲಿವೆ. 5 ಲಸಿಕೆಗಳು ಕ್ಲಿನಿಕಲ್ ಟ್ರಯಲ್ ಹಂತದಲ್ಲಿವೆ. ಭಾರತದಲ್ಲಿ ಒಟ್ಟು 24 ಸಂಸ್ಥೆಗಳಿಗೆ ಲಸಿಕೆ ತಯಾರಿಸುವ ಸಾಮರ್ಥ್ಯ ಇದೆ ಎಂಬ ಮಾಹಿತಿ ನೀಡಿದರು ಎಂದು ಬೊಮ್ಮಾಯಿ ತಿಳಿಸಿದ್ದಾರೆ.

30 ಕೋಟಿ ಜನರಿಗೆ ಲಸಿಕೆ:
ಲಸಿಕೆ ಬರುವಾಗ ಸರಿಯಾದ ರೀತಿಯಲ್ಲಿ ವಿತರಣೆಗೆ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಯಿತು. ಅದ್ಯತೆ ಮೇರೆಗೆ ವಿತರಣೆ ಬಗ್ಗೆ ಸಭೆಯಲ್ಲಿ ಹೇಳಲಾಯಿತು. ದೇಶದಲ್ಲಿ ಆರಂಭಿಕವಾಗಿ 30 ಕೋಟಿ ಜನರಿಗೆ ಕೋವಿಡ್ ಲಸಿಕೆ ಹಂಚುವ ಉದ್ದೇಶ ಹೊಂದಲಾಗಿದೆ. ಈ ಪೈಕಿ 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ, 2 ಕೋಟಿ ಕೊರೊನಾ ವಾರಿಯರ್ಸ್‍ಗೆ ಹಾಗೂ 26 ಕೋಟಿ 50, 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಉದ್ದೇಶಿಸಲಾಗಿದೆ ಎಂದು ವಿವರಿಸಿದ್ದಾರೆ.

ಬೂತ್ ಮಾದರಿಯಲ್ಲಿ ಹಂಚಿಕೆ:
ಲಸಿಕೆ ವಿತರಣೆಗೆ ರಾಜ್ಯದಲ್ಲಿ ಮೂರು ಸಮಿತಿಗಳ ರಚನೆಗೆ ನಿರ್ಧರಿಸಲಾಗಿದ್ದು, ಸಿಎಂ ನೇತೃತ್ವದಲ್ಲಿ, ಡಿಸಿಗಳ ನೇತೃತ್ವದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಸಮಿತಿಗಳ ರಚನೆಗೆ ನಿರ್ಧಾರಿಸಲಾಗಿದೆ. ಲಸಿಕೆ ಹಂಚಿಕೆಗೆ ಬೂತ್ ಗಳನ್ನು ರಚನೆ ಮಾಡಲಾಗುತ್ತಿದ್ದು, ಚುನಾವಣಾ ಬೂತ್ ಗಳ ಮಾದರಿಯಲ್ಲಿ ವಿತರಣೆ ಕೇಂದ್ರಗಳನ್ನು ರಚಿಸಲಾಗುತ್ತಿದೆ. ಅಲ್ಲದೆ ಕೊರೊನಾ ಲಸಿಕೆ ಕೊಟ್ಟ ಬಳಿಕ ಟ್ರ್ಯಾಕ್ ರಿಪೋರ್ಟ್ ಸಂಗ್ರಹಕ್ಕೆ ಸಹ ಸೂಚಿಸಲಾಗುತ್ತದೆ. ಲಸಿಕೆಯ ಡೋಸ್ ಕೊಟ್ಟ ವ್ಯಕ್ತಿಗಳ ಟ್ರ್ಯಾಕ್ ರಿಪೋರ್ಟ್ ಸಂಗ್ರಹಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸೂಚಿಸಿದ್ದಾರೆ ಎಂದು ಮಾಹಿತಿ ನೀದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *