ವಿಜಯಪುರ: ಯಾರು ನಾಲಾಯಕರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಮೇಟಿಯವರ ಸಿಡಿ ಮಾಡಿದವರು ನಾಲಾಯಕರು. ಯಾರ್ಯಾರಿಗೆ ಸಪ್ಲೈಯರ್ ಆಗಿ ಇದ್ದಾರೋ ಅವರು ನಾಲಾಯಕರು ಎಂದು ಯತ್ನಾಳ್ ವಿರುದ್ಧ ಸಚಿವ ನಿರಾಣಿ ‘ನಾಲಾಯಕ್’ ಪದ ಬಳಕೆಗೆ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದರು.
ನಾನು ಸಪ್ಲೈಯರ್ ಅಲ್ಲ, ಯಾರಿಗೂ ದುಡ್ಡು ಕೊಟ್ಟಿಲ್ಲ. ಮಂತ್ರಿಯಾಗಲು ಯಾರ ಕಾಲು ಹಿಡಿದಿಲ್ಲ, ಎಂಎಲ್‍ಸಿ ಆಗುವುದಕ್ಕೂ ನಾನು ಯಾರ ಕಾಲು ಹಿಡಿದಿಲ್ಲ. ಅಂತಹ ನಾಲಾಯಕರಿಂದ ನಾವು ಏನೂ ಕಲಿಯಲು ಸಾಧ್ಯವಿಲ್ಲ ಎಂದು ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಪ್ಲೈಯರ್ ಯಾರ್ಯಾರಿಗೆ ಏನು ಸಪ್ಲೈ ಮಾಡಿದ್ದಾರೆ ಎಂದು ಗೊತ್ತಿದೆ. ಯಡಿಯೂರಪ್ಪನವರಿಗೆ, ಮೇಲಿನವರಿಗೆ ಏನೇನು ಸಪ್ಲೈ ಮಾಡಿದ್ದಾರೆ ಎಂದು ಎಲ್ಲವನ್ನೂ ಕಾಲ ಬಂದಾಗ ಹೇಳುತ್ತೇನೆ. ಕೆಲವರು ಸಿಡಿ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಮಂತ್ರಿಯಾಗಿದ್ದಾರೆ ಎಂದು ಆರೋಪಿಸಿದರು.