ನಾಯಕನಾಗಿ ರಾಹುಲ್ ದಾಖಲೆ – ಐಪಿಎಲ್ ಆರಂಭದಲ್ಲೇ ಕನ್ನಡಿಗರ ಅಬ್ಬರ

Public TV
2 Min Read

ಅಬುಧಾಬಿ: 6 ತಿಂಗಳು ತಡವಾಗಿ ಆರಂಭವಾದರೂ ಈ ಬಾರಿಯ ಐಪಿಎಲ್ ಹಬ್ಬ ರಂಗೇರಿದೆ. ಜೊತೆಗೆ ಕರ್ನಾಟಕ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ ಎಂಬಂತೆ ಐಪಿಎಲ್ ಆರಂಭದಲ್ಲೇ ಕರ್ನಾಟಕದ ಯುವ ಆಟಗಾರರು ಮೇಲುಗೈ ಸಾಧಿಸಿದ್ದಾರೆ.

ಈಗಾಗಲೇ ಐಪಿಎಲ್ ಆರಂಭವಾಗಿ ಒಂದು ವಾರವಾಗಿದೆ. ಟೂರ್ನಿಯ ಏಳು ಪಂದ್ಯಗಳು ಯಶಸ್ವಿಯಾಗಿ ಮುಗಿದಿವೆ. ಇದೇ ವೇಳೆ ಐಪಿಎಲ್ ಆರಂಭದಲ್ಲೇ ಮೂವರು ಕನ್ನಡಿಗರು ಐಪಿಎಲ್‍ನಲ್ಲಿ ಉತ್ತಮವಾಗಿ ಆಡಿದ್ದಾರೆ. ಬೆಂಗಳೂರು ತಂಡದ ದೇವದತ್ ಪಡಿಕಲ್ ಮತ್ತು ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಐಪಿಎಲ್ ಆರಂಭದಲ್ಲೇ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ.

ಕೆ.ಎಲ್ ರಾಹುಲ್
ಈ ಬಾರಿ ಮೊದಲ ಬಾರಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕತ್ವವನ್ನು ವಹಿಸಿಕೊಂಡ ಕೆಎಲ್ ರಾಹುಲ್ ಅವರು, ಕ್ಯಾಪ್ಟನ್ ಆಗಿ ದಾಖಲೆ ಬರೆದಿದ್ದಾರೆ. ಗುರುವಾರ ನಡೆದ ಬೆಂಗಳೂರು ವಿರುದ್ಧ ಪಂದ್ಯದಲ್ಲಿ ಕೇವಲ 69 ಎಸೆತಗಳಲ್ಲಿ 14 ಬೌಂಡರಿ ಮತ್ತು 7 ಸಿಕ್ಸರ್ ಸಹಾಯದಿಂದ ಭರ್ಜರಿ 132 ರನ್ ಗಳಿಸಿದರು. ಈ ಮೂಲಕ ನಾಯಕನಾಗಿ ಐಪಿಎಲ್‍ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಮಾಡಿದರು. ಜೊತೆಗೆ ಐಪಿಎಲ್-2020ಯಲ್ಲಿ ಶತಕ ದಾಖಲಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ದೇವದತ್ ಪಡಿಕಲ್
ಈ ಬಾರಿ ತಾನು ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಆರ್‌ಸಿಬಿ ತಂಡದ ಆರಂಭಿಕ ಆಟಗಾರ ದೇವದತ್ ಪಡಿಕಲ್ ಅವರು ಅರ್ಧಶತಕ ಸಿಡಿಸುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ ಪಡಿಕಲ್ 42 ಎಸೆತಗಳಲ್ಲಿ 8 ಭರ್ಜರಿ ಬೌಂಡರಿಯೊಂದಿಗೆ 56 ರನ್ ಸಿಡಿಸಿದರು. ಈ ಮೂಲಕ ತಾನು ಆಡಿದ ಪ್ರಥಮ ದರ್ಜೆ, ಲಿಸ್ಟ್ ಎ, ಟಿ 20, ಐಪಿಎಲ್‍ನ ಎಲ್ಲ ಮೊದಲ ಪಂದ್ಯದಲ್ಲಿ ಅರ್ಧಶತಕ ಹೊಡೆದ ಅಪರೂಪದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಮಯಾಂಕ್ ಅಗರ್ವಾಲ್
ಐಪಿಎಲ್‍ನಲ್ಲಿ ಪಂಜಾಬ್ ತಂಡದ ಪರವಾಗಿ ಆಡುತ್ತಿರುವ ಮಯಾಂಕ್ ಅಗರ್ವಾಲ್ ಅವರು ಕೂಡ ಉತ್ತಮ ಲಯದಲ್ಲಿದ್ದಾರೆ. ಡೆಲ್ಲಿ ವಿರುದ್ಧದ ಮೊದಲ ಪಂದ್ಯದಲ್ಲಿ ಸೂಪರ್ ಆಗಿ ಬ್ಯಾಟ್ ಬೀಸಿದ ಅಗರ್ವಾಲ್ 60 ಎಸೆತಗಳಲ್ಲಿ 7 ಫೋರ್ ಮತ್ತು 4 ಸಿಕ್ಸರ್ ಸಹಾಯದಿಂದ 89 ರನ್ ಸಿಡಿಸಿದರು. ಈ ಮೂಲಕ ಏಕಾಂಗಿಯಾಗಿ ತಂಡವನ್ನು ಟೈ ಹಂತಕ್ಕೆ ತೆಗೆದುಕೊಂಡು ಹೋಗಿದ್ದರು. ಜೊತೆಗೆ ಎರಡನೇ ಪಂದ್ಯದಲ್ಲೂ ಕೂಡ ಉತ್ತಮವಾಗಿ ರಾಹುಲ್ ಅವರಿಗೆ ಸಾಥ್ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *