ನಾಯಕತ್ವ ಬದಲಾವಣೆ, ನಾನು ವ್ಯಕ್ತಿ ಪೂಜೆ ಮಾಡುವವನಲ್ಲ: ಅಪ್ಪಚ್ಚು ರಂಜನ್

Public TV
2 Min Read

– ಶಸಿಕಲಾ ಜೊಲ್ಲೆ ಹೇಳಿದ್ದೇನು..?

ಮಡಿಕೇರಿ: ಸಿಎಂ ಬದಲಾವಣೆ ವಿಚಾರ ಇನ್ನೂ ಕೂಡ ತಣ್ಣಗೆ ಆಗಿಲ್ಲ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಂದು ಬಿಜೆಪಿಯ ಭಿನ್ನಭಿಪ್ರಾಯವನ್ನು ಸರಿದೂಗಿಸಲು ಪ್ರಯತ್ನ ಪಡುತ್ತಿದ್ದರು ಕೂಡ ಅತೃಪ್ತಿಯ ಬೆಂಕಿ ಹೊಗೆಯಾಡುತ್ತಲೇ ಇದೆ. ಈ ನಡುವೆ ನಾನು ವ್ಯಕ್ತಿ ಪೂಜೆ ಮಾಡುವವನಲ್ಲ ಎನ್ನುವ ಮೂಲಕ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ಸಿಎಂ ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಆಗಬೇಕು ಎನ್ನೋ ಪರೋಕ್ಷ ಸಂದೇಶ ರವಾನೆ ಮಾಡಿದ್ದಾರೆ.

ಮಡಿಕೇರಿಯಲ್ಲಿ ಮಾತನಾಡಿದ ಅಪ್ಪಚ್ಚು ರಂಜನ್, ನಾನು ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ನಾನು ಪಕ್ಷದ ಪರವಾಗಿದ್ದೇನೆ, ಪಕ್ಷದ ವಿಚಾರವನ್ನು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಬಳಿ ಮಾತನಾಡಿದ್ದೇನೆ. ಪಕ್ಷ ಎಂದ ಮೇಲೆ ಜಗಳಗಳು ಇದ್ದದ್ದೇ. ಅದನ್ನು ಪಕ್ಷದ ಒಳಗೆ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಬಹಿರಂಗ ಚರ್ಚೆ ಮಾಡೋದಿಲ್ಲ ಎಂದರು.

ಶಾಸಕ ಹೆಚ್ ವಿಶ್ವನಾಥ್ ಅವರು ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ಹೇಳಿದ ವಿಷಯಕ್ಕಾಗಲಿ, ಅವರ ವಿರುದ್ಧ ರೇಣುಕಾಚಾರ್ಯ ಅವರು ಆಕ್ರೋಶ ವ್ಯಕ್ತಪಡಿಸಿದ ವಿಷಯಕ್ಕಾಗಲಿ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕಾಗಿ ಮತ್ತು ಸಿಎಂ ಬದಲಾವಣೆ ವಿಚಾರದಲ್ಲಿ ಹೊತ್ತಿಕೊಂಡಿರುವ ಬೆಂಕಿ ಇನ್ನೂ ಬೂದಿಮುಚ್ಚಿದ ಕೆಂಡದಂತೆ ಇದೆ. ಇದನ್ನೂ ಓದಿ: ರಾಜ್ಯ ಸರ್ಕಾರ ವಜಾಕ್ಕೆ ರಾಜ್ಯಪಾಲರು ಶಿಫಾರಸ್ಸು ಮಾಡಬೇಕು – ಸಿದ್ದರಾಮಯ್ಯ

ಹೈಕಮಾಂಡ್ ಸಮರ್ಥವಾಗಿದ್ದು ಎಲ್ಲವನ್ನೂ ನಿಭಾಯಿಸುತ್ತದೆ:
ರಾಜ್ಯ ನಾಯಕತ್ವ ಬದಲಾವಣೆ ವಿಚಾರವಾಗಿ ಮಡಿಕೇರಿಯಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಒಂದು ಮನೆ ಎಂದ ಮೇಲೆ ವೈಮನಸ್ಸು ಇದ್ದೇ ಇರುತ್ತದೆ. ಅದನ್ನು ಮನೆ ಒಳಗೆ ಬಗೆಹರಿಸಿಕೊಳ್ಳುತ್ತೇವೆ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಹೈಕಮಾಂಡ್ ಸಮರ್ಥವಾಗಿದ್ದು ಎಲ್ಲವನ್ನೂ ನಿಭಾಯಿಸುತ್ತದೆ ಎಂದರು.

ರಾಜ್ಯಕ್ಕೆ ಬಂದಿರುವ ಅರುಣ್ ಸಿಂಗ್ ಅವರೊಂದಿಗೆ ಪ್ರತ್ಯೇಕ ಸಭೆ ವಿಚಾರ ಹಿನ್ನೆಲೆಯಲ್ಲಿ ನಿನ್ನೆ ನನ್ನ ಇಲಾಖೆಯ ಕಾರ್ಯವೈಖರಿ ಅಭಿವೃದ್ಧಿ ಕುರಿತು ವರದಿ ನೀಡಿದ್ದೇನೆ. ಬೇರೆ ರಾಜಕೀಯವಾಗಿ ನಾನು ಯಾವುದೇ ವರದಿ ನೀಡಿಲ್ಲ. ಹೆಚ್ ವಿಶ್ವನಾಥ್ ಅವರು ಬಹಿರಂಗವಾಗಿ ಮುಖ್ಯಮಂತ್ರಿ ಬದಲಾವಣೆ ಮಾಡಬೇಕು ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ನಾನು ವಿಶ್ವನಾಥ್ ವಿರುದ್ಧ ಮಾತನಾಡುವಷ್ಟು ದೊಡ್ಡವಳಲ್ಲ ಹೈಕಮಾಂಡ್ ಎಲ್ಲಾವವನ್ನು ನಿರ್ಧಾರ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.

Share This Article
Leave a Comment

Leave a Reply

Your email address will not be published. Required fields are marked *