ಹೋರಾಟ ಮಾಡಿ ಸಾಕಾಗಿದೆ, ಆದ್ರೆ ಶಸ್ತ್ರ ತ್ಯಾಗ ಮಾಡಿಲ್ಲ: ಕುಮಾರಸ್ವಾಮಿ

Public TV
1 Min Read

ಬೆಂಗಳೂರು: ಭೂ ಸುಧಾರಣ ಕಾಯ್ದೆ ಹಾಗೂ ಎಪಿಎಂಸಿ ಕೃಷಿ ಮಸೂದೆ ವಿರುದ್ಧ ನಾನು ಹೋರಾಟ ಮಾಡಿ ಸಾಕಾಗಿದೆ. ಆದರೆ ನಾನು ಶಸ್ತ್ರ ತ್ಯಾಗ ಮಾಡಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ಭೂ ಸುಧಾರಣ ಕಾಯ್ದೆ, ಎಪಿಎಂಸಿ ಕಾಯ್ದೆ ವಿರುದ್ಧ ಜೆಡಿಎಸ್ ಈಗಾಗಲೇ ಪ್ರತಿಭಟನೆ ಮಾಡಿದೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ನಾವು ಪ್ರತಿಭಟನೆ ಮಾಡಿದ್ದೇವೆ. ಆದರೆ ಆತುರವಾಗಿ ಈ ಕಾಯ್ದೆ ಸುಗ್ರಿವಾಜ್ಞೆ ತರುವ ಅವಶ್ಯಕತೆ ಏನಿತ್ತು? ಎಂದು ಪ್ರಶ್ನಿಸಿದರು.

ಇದರಲ್ಲಿರುವ ಸಾಧಕ-ಬಾಧಕಗಳ ಬಗ್ಗೆ ರೈತರು, ಶಾಸಕರು ಜೊತೆ ಚರ್ಚೆಮಾಡಬೇಕಿತ್ತು. ಜೊತೆಗೆ ಇದರಿಂದ ರೈತರಿಗೆ ಯಾವ ರೀತಿ ಅನುಕೂಲವಾಗುತ್ತದೆ. ಯಾವ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ ಎಂಬುದನ್ನು ಪ್ರಸ್ತಾಪ ಮಾಡಬೇಕಿತ್ತು. ಆದರೆ ಸರ್ಕಾರ ಯಾವುದೇ ರೀತಿ ಚರ್ಚೆಯನ್ನು ಮಾಡಿಲ್ಲ. ಹೀಗಾಗಿ ಸರ್ಕಾರ ಈ ಕಾಯ್ದೆಯಿಂದ ಹಿಂದೆ ಸರಿಬೇಕು. ನಾನು ಹೋರಾಟ ಮಾಡಿ ಸಾಕಾಗಿದೆ. ಆದರೆ ನಾನು ಶಸ್ತ್ರ ತ್ಯಾಗ ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಇನ್ನೂ ಕಾಂಗ್ರೆಸ್ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಸಪೋರ್ಟ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಇದೂವರೆಗೂ ಕಾಂಗ್ರೆಸ್ ನವರು ನಮ್ಮ ಜೊತೆ ಚರ್ಚೆ ಮಾಡಿಲ್ಲ. ಆ ವಿಷಯ ಬಂದಾಗ ನಾನು ಚರ್ಚೆ ಮಾಡುತ್ತೀನಿ. ಇವತ್ತು ನನ್ನ ವಿಶ್ವಾಸಕ್ಕಿಂತ ರಾಜ್ಯದ ಜನತೆಯ ವಿಶ್ವಾಸ ಮುಖ್ಯವಾಗಿದೆ. ಇಂದಿನ ಕೊರೊನಾ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ವಿಪತ್ತು ಇರುವ ಈ ಸಮಯದಲ್ಲಿ ಗೊಂದಲ ಮೂಡಿಸುವ ನಡೆಗಳು ಬೇಕಾ? ಎಂದರು.

ಸಿಎಂ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪ ವಿಚಾರವಾಗಿ ಮಾತನಾಡಿ, ಯಾವ ಕುಟುಂಬದ ವಿರುದ್ಧ ಆರೋಪ ಇಲ್ಲ ಹೇಳಿ. ಎಲ್ಲರ ಮೇಲೂ ಆರೋಪಗಳು ಕೇಳಿ ಬರುತ್ತವೆ ಎಂದರು. ಭ್ರಷ್ಟಾಚಾರ ವಿಷಯಗಳು ತಾರ್ಕಿಕ ಅಂತ್ಯ ಎಲ್ಲಿಗೆ ಹೋಗಿ ಅಂತ್ಯ ಕಾಣುತ್ತೆ ಎಂಬುದೂ ನನಗೆ ಗೊತ್ತು ಎಂದು ಕುಮಾರಸ್ವಾಮಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *