ನಾನು ಕುಡುಕ ಅಲ್ಲ, ಕುಡಿಯುವ ಅಭ್ಯಾಸವೂ ನನಗಿಲ್ಲ: ಸಿ.ಟಿ.ರವಿ

Public TV
3 Min Read

– ನೆಹರು ಹುಕ್ಕಾ ಸೇದುತ್ತಿದ್ದದ್ದು ತಪ್ಪೋ, ನಾನು ಹೇಳಿದ್ದು ತಪ್ಪೋ?
– ನಾನು ಕೊತ್ವಾಲ್ ರಾಮಚಂದ್ರನ ಶಿಷ್ಯನಲ್ಲ

ಚಿಕ್ಕಮಗಳೂರು: ನಾನು ಕುಡುಕ ಅಲ್ಲ, ನನಗೆ ಕುಡಿಯುವ ಅಭ್ಯಾಸವೂ ಇಲ್ಲ. ಕುಡುಕನ ಪಟ್ಟ ಕಟ್ಟಿದರು. ಆದರೆ ದಿನಾ ಕುಡಿಯುವವರು ಅವರೇ ಎಂದು ಕಾಂಗ್ರೆಸ್ ನಾಯಕರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

ತಾಲೂಕಿನ ಕರಗಡ ಗ್ರಾಮದಲ್ಲಿ ಎರಡನೇ ಕುಡಿಯುವ ನೀರಾವರಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಕುಡುಕ ಅಲ್ಲ, ನಾನು ಬೆಳಗ್ಗೆ 5 ಗಂಟೆಗೆ ಎದ್ದು ಯೋಗ ಮಾಡುತ್ತೇನೆ. ಬೆಳಗ್ಗೆ 5 ಗಂಟೆಯಿಂದ ರಾತ್ರಿ 11, 11.30ರ ವರೆಗೆ ಪಕ್ಷ, ಸಮಾಜ, ದೇಶದ ಬಗ್ಗೆ ಯೋಚನೆ ಮಾಡುತ್ತೇನೆ. ಅವರ ಹಳೆಯ ಕಥೆಗಳನ್ನು ಹೇಳಬೇಕಾ, ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯ, ಕೊತ್ವಾಲ್ ರಾಮಚಂದ್ರನ ಶಿಷ್ಯನಲ್ಲ ಎಂದಿದ್ದಾರೆ.

ಹುಕ್ಕಾ ಬಾರಿನ ಬಗ್ಗೆ ಮಾತನಾಡುತ್ತಿದ್ದಂತೆ ಉರಿ ಹತ್ತಿಕೊಂಡು ಮಾತನಾಡುತ್ತಿದ್ದಾರೆ. ಹಾಗಾದರೆ ಮಾಜಿ ಪ್ರಧಾನಿ ಜವಾಹರ್‍ಲಾಲ್ ನೆಹರು ಹುಕ್ಕಾ ಸೇದುತ್ತಿದ್ದದ್ದು ತಪ್ಪೋ, ಹುಕ್ಕಾ ಬಗ್ಗೆ ಸಿ.ಟಿ.ರವಿ ಹೇಳಿದ್ದು ತಪ್ಪೋ? ನಾನು ಹೇಳಿದ್ದು ತಪ್ಪು ಅನ್ನುವುದಾದರೆ ಕಾಂಗ್ರೆಸ್ಸಿಗರಿಗೆ ನೆಹರು ಬಗ್ಗೆ ಎಷ್ಟು ಆಕ್ರೋಶ ಇರಬಹುದು? ಪತ್ರಿಕೆ, ಸಾಮಾಜಿಕ ಜಾಲತಾಣದಲ್ಲಿ ನೆಹರು ಹುಕ್ಕಾ ಸೇರುತ್ತಿರುವ ಫೋಟೋಗಳಿವೆ. ಅವನ್ನ ಆಧರಿಸಿಯೇ ನಾನು ಹೇಳಿದ್ದು. ನಾನು ಹೇಳಿದ್ದೇ ತಪ್ಪು ಎನ್ನುವುದಾದರೆ ಅದನ್ನು ಮಾಡಿರುವವರ ಬಗ್ಗೆ ಕಾಂಗ್ರೆಸ್ಸಿಗರಿಗೆ ಎಷ್ಟು ಆಕ್ರೋಶ ಇರಬಹುದು ಎಂದು ವ್ಯಂಗ್ಯವಾಡಿದರು.

ವೀರ ಸಾವರ್ಕರ್ ಹೆಸರಿಡಲು ವಿರೋಧ ಮಾಡಿದರು. ಸಾವರ್ಕರ್ ತ್ಯಾಗದ ಅರಿವು ಕಾಂಗ್ರೆಸಿಗರಿಗೆ ಇತ್ತಾ? ಸಾವರ್ಕರ್ ಒಬ್ಬರಿಗೆ ಎರಡು ಕರೀ ನೀರಿನ ಶಿಕ್ಷೆ, ಎರಡು ಜೀವಾವಧಿ ಶಿಕ್ಷೆ. ಅವರ ಬಗ್ಗೆ ಎಷ್ಟು ಲಘುವಾಗಿ ಮಾತನಾಡಿದರು? ನೆಹರು ಹಾಗೂ ಇಂದಿರಾ ಗಾಂಧಿ ಅವರು ಮಾಡಿದ ಒಳ್ಳೆಯ ಕೆಲಸಗಳನ್ನು ಮುಂದುವರಿಸುತ್ತೇವೆ. ನೆಹರು ಮಾಡಿದ ಪ್ರಮಾದಗಳನ್ನ ಸರಿಪಡಿಸುವ ಕೆಲಸ ಮಾಡುತ್ತೇವೆ. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಳ್ಳಲು ಆಗುತ್ತಾ ಎಂದು ಪ್ರಶ್ನಿಸಿದರು.

ನಾನು ಇಂದಿರಾ ಗಾಂಧಿ, ನೆಹರು ಬಗ್ಗೆ ಮಾತನಾಡುವುದನ್ನ ತಪ್ಪು ಎನ್ನುತ್ತಿದ್ದಾರೆ. ಸಿದ್ದರಾಮಯ್ಯನವರು ಇಂದಿರಾ ಗಾಂಧಿ ಬಗ್ಗೆ ಮಾತನಾಡಿರುವ ಹಳೆ ಪ್ರತಿಗಳನ್ನು ಹಾಕಿಸಬೇಕಾ, ಸಿಎಂ ಇಬ್ರಾಹಿಂ ಇಂದಿರಾ ಗಾಂಧಿಯವರನ್ನು ಏನೆಂದು ಕರೆದರೆಂದು ಹೇಳಬೇಕಾ? ನಾನು ಆ ಮಟ್ಟಕ್ಕೆ ಇಳಿದಿಲ್ಲ ಎಂದರು.

ವೀರ ಸಾವರ್ಕರ್ ಹಾಗೂ ನೆಹರು ಇಬ್ಬರಲ್ಲಿ ನೆಹರು ಅವರಿಗೆ ಪುಣ್ಯ ಹೆಚ್ಚಿತ್ತು. ಅದಕ್ಕೆ ಸಾವರ್ಕರ್‍ನ್ನು ಅಂಡಮಾನ್ ಆ್ಯಂಡ್ ನಿಕೋಬಾರ್‍ನಲ್ಲಿ ಗಾಣ ತಿರುಗಿಸಲು ಬಿಟ್ಟಿದ್ದರು. ಇವರಿಗೆ ಡಿಸ್ಕವರಿ ಬರೆಯಲು ಅವಕಾಶ ಮಾಡಿಕೊಟ್ಟಿದ್ದರು. ನನಗೆ ನೆಹರು ಒಳ್ಳೆತನವೂ ಗೊತ್ತು, ಮಹಾತ್ಮ ಗಾಂಧಿಯ ಜೀವನಕ್ಕೆ ವಿರುದ್ಧವಾಗಿರುವಂತಹ ಜೀವನವೂ ಗೊತ್ತು. ಒಂದೆಡೆ ಮಹಾತ್ಮ ಗಾಂಧಿಯವರ ನೈತಿಕ ಉನ್ನತಿಯ ಜೀವನ. ಇನ್ನೊಂದೆಡೆ ಅದಕ್ಕೆ ತದ್ವಿರುದ್ಧವಾಗಿರುವ ನೆಹರು ಜೀವನ ಎರಡೂ ಗೊತ್ತು. ಅವರ ಹೋರಾಟವೂ ಗೊತ್ತು, ಡಿಸ್ಕವರಿ ಆಫ್ ಇಂಡಿಯಾ ಬರೆದದ್ದೂ ಗೊತ್ತು. ಅವರಿಂತ ಹೆಚ್ಚಾಗಿ ನಾನೇ ಹೇಳಬಲ್ಲೇ ಎಂದರು.

ಒಂದೇ ಗೋಡೆಯ ಇನ್ನೊಂದು ಬದಿಯಲ್ಲಿ ಸಹೋದರ ಗಣೇಶ್ ಸಾವರ್ಕರ್ ಇದ್ದಾರೆ. ಸಾವರ್ಕರ್‍ಗೆ ಏಳು ವರ್ಷ ಗೊತ್ತಿರಲಿಲ್ಲ. ನನ್ನ ಸಹೋದರ ಅಲ್ಲಿದ್ದಾನೆ ಎಂದು. ಅವರ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ನೆಹರು, ಮೋತಿಲಾಲ್ ನೆಹರು ಸ್ವತಂತ್ರ್ಯ ಹೋರಾಟಗಾರರು ಅದೂ ನನಗೆ ಗೊತ್ತು. ಅವರು ಮಾತ್ರ ಹೋರಾಟಗಾರರಲ್ಲ. ಹಾಗಾದ್ರೆ, ಹುತಾತ್ಮರಾದ ಭಗತ್ ಸಿಂಗ್, ಕುದಿರಾಮ್ ಭೋಸ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರಭೋಸ್, ಅಸ್ಮತ್ ಉಲ್ಲಾಖಾನ್‍ಗೆ ಬೆಲೆ ಇಲ್ಲವಾ ಎಂದು ಪ್ರಶ್ನಿಸಿದರು.

ಅವರು ಜೀವನವನ್ನೇ ಕಳೆದುಕೊಂಡರು. ಇವರು ಅದೇ ಹೆಸರು ಹೇಳುತ್ತಾ 4 ತಲೆಮಾರು ಅಧಿಕಾರ ಅನುಭವಿಸಿದ್ದಾರೆ. ಅದಕ್ಕೆ ಮಹಾತ್ಮ ಗಾಂಧಿ ಹೇಳಿದ್ದು, ಕಾಂಗ್ರೆಸ್ ಸ್ವತಂತ್ರ ಹೋರಾಟಗಾರರ ವೇದಿಕೆ, ಇದನ್ನ ದುರ್ಬಳಕೆ ಮಾಡಿಕೊಳ್ಳುವ ಅಪಾಯವಿದೆ. ಇದನ್ನ ವಿಸರ್ಜನೆ ಮಾಡಿ ಎಂದು ಸುಮ್ಮನೆ ಹೇಳಿದರಾ? ಸನ್ಮಾನ್ಯ ಡಿ.ಕೆ.ಶಿವಕುಮಾರ್ ಅವರೇ, ನೀವು ಮಹಾತ್ಮ ಗಾಂಧಿಯವರ ಮಾತನ್ನ ಮೆಲುಕು ಹಾಕಿ. ಕಾಂಗ್ರೆಸ್ ವಿಸರ್ಜನೆ ಮಾಡುವಂತೆ ಅವರು ಹೇಳಿದ್ದರು. ನೀವು ಹೀಗೆ ಹೇಳಿ ದುರ್ಬಳಕೆ ಮಾಡಿಕೊಳ್ಳುತ್ತೀರಾ ಎಂದೇ ಅವರು ಹೇಳಿದ್ದು. ದುರ್ಬಳಕೆ ಮಾಡಿ, ಮಾಡಬಾರದ ಭ್ರಷ್ಟಾಚಾರ ಮಾಡುತ್ತೀರಾ, ಪ್ರಜಾಪ್ರಭುತ್ವಕ್ಕೆ ಅಪಾಯ ತಂದಿಡ್ತೀರಿ ಎಂದೇ ಅವರು ಹೇಳಿದ್ದು. ಕಾಂಗ್ರೆಸ್ ವಿಸರ್ಜಿಸಿ ಎಂದು ಸಿ.ಟಿ.ರವಿ ಹೇಳಿದ್ದಲ್ಲ, ಆರ್‍ಎಸ್‍ಎಸ್ ಹೇಳಿದ್ದಲ್ಲ, ಮಹಾತ್ಮ ಗಾಂಧಿ ಹೇಳಿದ್ದು. ಕಾಂಗ್ರೆಸ್ ಉರಿಯುವ ಮನೆ ಎಂದು ಹೇಳಿದ್ದು ಸಿ.ಟಿ.ರವಿ ಅಲ್ಲ, ಡಾ.ಬಿ.ಆರ್.ಅಂಬೇಡ್ಕರ್. ಕಾಂಗ್ರೆಸ್ ಉರಿಯುವ ಮನೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಪೇಪರ್ ಕಟ್ಟಿಂಗ್‍ಗಳನ್ನ ಕಳುಹಿಸಿಕೊಡುತ್ತೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *