ನಾನು ಅಲ್ಪಸಂಖ್ಯಾತನಾಗಿದ್ದೇನೆ, ನನ್ನನ್ನು ತುಳಿಯಲು ನೋಡಲಾಗುತ್ತಿದೆ – ಜಮೀರ್‌

Public TV
2 Min Read

ಬೆಂಗಳೂರು: ನಾನು ಅಲ್ಪಸಂಖ್ಯಾತನಾಗಿದ್ದೇನೆ. ನಾನು ಬೆಳೆಯುತ್ತಿರುವುದನ್ನು ನೋಡಿ ನನ್ನನ್ನು ತುಳಿಯಲು ನೋಡಲಾಗುತ್ತಿದೆ ಎಂದು ಚಾಮರಾಜಪೇಟೆಯ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಹೇಳಿದ್ದಾರೆ.

ಡ್ರಗ್ಸ್‌ ಪ್ರಕರಣದಲ್ಲಿ ತನ್ನ ವಿರುದ್ಧ ಬಂದಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದ ಅವರು ನನ್ನ ಮೇಲೆ ಬರುತ್ತಿರುವ ಆರೋಪ ರಾಜಕೀಯ ಪ್ರೇರಿತ. ಫಾಜಿಲ್ ನಾಲ್ಕು ವರ್ಷದ ಹಿಂದೆ ಪರಿಚಯವಾಗಿದ್ದ. ಆದರೆ ಈಗ ನಾನು ಆತನ ಸಂಪರ್ಕದಲ್ಲಿ ಇಲ್ಲ. ಯಾರೋ ಬರುತ್ತಿರುತ್ತಾರೋ ಅವರೆಲ್ಲಾ ಆಪ್ತರು ಅಂತಾ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಈಗ ಇಲ್ಲಿ ಸರ್ಕಾರ ಯಾವುದಿದೆ ? ಕಾಂಗ್ರೆಸ್ ಸರ್ಕಾರ ಇದೆಯಾ ? ಬಿಜೆಪಿ ಸರ್ಕಾರ ಇದ್ಯಾ? ಸಂಜನಾ ಎಲ್ಲಿದ್ದಾರೆ? ಪೊಲೀಸ್ ಕಸ್ಟಡಿಯಲ್ಲಿದ್ದಾರೆ ತಾನೇ. ತನಿಖೆ ಮಾಡಲಿ. ನಾನು ಪ್ರಕರಣದಲ್ಲಿ ಇದ್ದದ್ದು ಸಾಬೀತಾದರೆ ರಾಜ್ಯದಲ್ಲಿರುವ ನನ್ನ ಆಸ್ತಿ ಸರ್ಕಾರ ಕ್ಕೆ ಕೊಟ್ಟು ಬಿಡುತ್ತೇನೆ. ಸಂಜನಾರನ್ನ ನಾನು ಶ್ರೀಲಂಕಾ ಯಾಕೆ ಇಲ್ಲೇ ನೋಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನಾನು ರಾಗಿಣಿ ಒಟ್ಟಿಗೆ ಡ್ರಗ್ಸ್ ಸೇವನೆ ಮಾಡಿದ್ವಿ- ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರವಿಶಂಕರ್

ಸಿದ್ದರಾಮಯ್ಯಗೆ ಸ್ಪಷ್ಟನೆ:
ಡ್ರಗ್ಸ್‌ ಪ್ರಕರಣದಲ್ಲಿ ತನ್ನ ಮೇಲೆ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಬೆಳಗ್ಗೆ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ ಜಮೀರ್‌ ಕ್ಯಾಸಿನೋ ವ್ಯವಹಾರದ ಬಗ್ಗೆ ಪೂರ್ತಿ ವಿವರಣೆ ನೀಡಿದ್ದಾರೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ತಿಳಿದು ಬಂದಿದೆ. ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಜಮೀರ್‌ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದರು.

ಸಿದ್ದರಾಮಯ್ಯ ಬಳಿ ಹೇಳಿದ್ದೇನು?
ನನ್ನದೇನು ತಪ್ಪಿಲ್ಲ, ಯಾವ ವ್ಯವಹಾರವೂ ಇಲ್ಲ. ಯಾವ ತನಿಖೆ ಬೇಕಾದರೂ ಮಾಡಲಿ. ಯಾವುದೇ ಅಕ್ರಮ ಕ್ಯಾಸಿನೋ ವ್ಯವಹಾರವೂ ಅಲ್ಲ. ಆದರೆ ಪಾಟರ್ನರ್ ಶಿಪ್ ನಲ್ಲಿ ಸಕ್ರಮ ಕ್ಯಾಸಿನೋ ಇದೆ. ಈ ಬಗ್ಗೆ ಆಡಳಿತ ಪಕ್ಷದ ಶಾಸಕರು, ಸಚಿವರಿಗೆ ಸತ್ಯ ಗೊತ್ತಿದೆ. ಗೊತ್ತಿರುವ ಸಚಿವರು ಸುಮ್ಮನಿದ್ದಾರೆ. ಆದರೆ ಈ ಪ್ರಕರಣಕ್ಕೂ ನನ್ನ ಪಾರ್ಟನರ್ ಶಿಪ್ ಕ್ಯಾಸಿನೋಗೆ ಸಂಬಂಧ ಇಲ್ಲ.

ನಮ್ಮ ಪಕ್ಷದಿಂದ ಹೋಗಿ ಸಚಿವರಾದವರಿಗೂ ಕ್ಯಾಸಿನೋ ವ್ಯವಹಾರ ಗೊತ್ತಿದೆ. ಶ್ರೀಲಂಕಾಕ್ಕೆ ಬಹಳ ಬಿಜೆಪಿ ಸೇರಿದಂತೆ ಎಲ್ಲ ಪಕ್ಷದ ನಾಯಕರು ಹೋಗಿದ್ದಾರೆ. ಅವರ ಪಾಸ್ ಪೋರ್ಟ್ ಪರಿಶೀಲಿಸಿದರೆ ಗೊತ್ತಾಗುತ್ತದೆ. ಕ್ಯಾಸಿನೋಗೆ ಶ್ರೀಲಂಕಾಕ್ಕೆ ಹೋದಾಗ ಹಲವರು ನನ್ನ ಬಳಿ ಮಾಹಿತಿ ಕೇಳಿದ್ದಾರೆ. ಅಲ್ಲಿನ ವಹಿವಾಟು ಕುರಿತು ಆತ್ಮೀಯತೆಯಲ್ಲಿ ಮಾಹಿತಿ ಪಡ್ಕೊಂಡಿದ್ದಾರೆ.

ಕೋರ್ಟ್ ಅನುಮತಿ ನೀಡಿದ್ದು ನಾನು ಸಂಬರಗಿ ಮೇಲೆ ಕೇಸ್ ಹಾಕುತ್ತಿದ್ದೇನೆ. ನನ್ನ ಸಹಿಸದವರು ಇದರ ಹಿಂದಿದ್ದಾರೆ. ನಾನು ಇಂತಹ ಯಾವ ಕೆಲಸ ಮಾಡಿಲ್ಲ. ಚಿನ್ನ, ಗಾಂಜಾದಂತಹ ವ್ಯವಹಾರ ನಾನು ಮಾಡಿಲ್ಲ.

 

 

Share This Article
Leave a Comment

Leave a Reply

Your email address will not be published. Required fields are marked *