ನಾಗರಹೊಳೆ ಅಭಯಾರಣ್ಯಕ್ಕೆ ರಾಜೀವ್ ಗಾಂಧಿ ಹೆಸರು ತೆಗೆದು, ಜನರಲ್ ಕಾರ್ಯಪ್ಪ ಹೆಸರಿಡಲಿ: ಅಪ್ಪಚ್ಚು ರಂಜನ್

Public TV
2 Min Read

ಮಡಿಕೇರಿ: ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯಕ್ಕೆ ಜನರಲ್ ಕಾರ್ಯಪ್ಪ ಹೆಸರಿಡುವುದು ಸೂಕ್ತ. ರಾಜೀವ್ ಗಾಂಧಿ ಹೆಸರು ತೆಗೆದು ಕಾರ್ಯಪ್ಪ ಅವರ ನಾಮಕರಣ ಮಾಡಲಿ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀವ್ ಗಾಂಧಿ, ಇಂದಿರಾ ಗಾಂಧಿ ಮತ್ತು ನೆಹರು ಹೆಸರಲ್ಲಿ ಹಲವು ಸಂಸ್ಥೆಗಳಿವೆ. ಆದರೆ ದೇಶದ ಸೇನೆಯ ಮೊದಲ ಜನರಲ್ ಆಗಿದ್ದ ಕೊಡಗಿನ ಕಾರ್ಯಪ್ಪ ಅವರು ಮೂರು ಸೇನಾ ಪಡೆಗಳ ಮುಖ್ಯಸ್ಥರಾಗಿದ್ದವರು. ಅವರಿಗೆ ಗೌರವ ಕೊಡಲು ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯಕ್ಕೆ ಕಾರ್ಯಪ್ಪ ಅವರ ಹೆಸರಿಡುವುದು ಸೂಕ್ತ. ಈ ಬಗ್ಗೆ ಸರ್ಕಾರಕ್ಕೂ ನಾನು ಆಗ್ರಹಿಸುತ್ತೇನೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೂ ಈ ಕುರಿತು ಪತ್ರ ಬರೆಯುತ್ತೇನೆ ಎಂದಿದ್ದಾರೆ.

ಇಂದಿರಾ ಕ್ಯಾಂಟೀನ್‍ಗೆ ಕಾವೇರಿ ಹೆಸರು
ಕೊಡಗಿನಲ್ಲಿ ಹುಟ್ಟಿ ನಾಡಿನುದ್ದಕ್ಕೂ ಹರಿಯುವ ಕಾವೇರಿಯ ಹೆಸರನ್ನು ಇಂದಿರಾ ಕ್ಯಾಂಟೀನ್ ಗೆ ಇಡಬೇಕು. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅವರು ಇಂದಿರಾ ಕ್ಯಾಂಟೀನ್ ಗೆ ಅನ್ನಪೂರ್ಣೇಶ್ವರಿ ಹೆಸರು ಸೂಚಿಸಿರುವುದನ್ನು ಅಲ್ಲಗಳೆದಿರುವ ಶಾಸಕ ಅಪ್ಪಚ್ಚು ರಂಜನ್, ಸಿ.ಟಿ.ರವಿ ಅವರು ಅನ್ನಪೂರ್ಣೇಶ್ವರಿ ಹೆಸರು ಸೂಚಿಸಿರಬಹುದು. ಆದರೆ ಕಾವೇರಿ ಹೆಸರಿಡುವುದು ಒಳ್ಳೆಯದು ಎಂದು ಹೊಸ ಬೇಡಿಕೆ ಮುಂದಿಟ್ಟಿದ್ದಾರೆ.

ಕಾವೇರಿ ನದಿಯಿಂದ ಕರ್ನಾಟಕ ತಮಿಳುನಾಡು ಮತ್ತು ಪಾಂಡಿಚೇರಿ ಸೇರಿ ಮೂರು ರಾಜ್ಯಗಳಿಗೆ ನೀರು ಸಿಗುತ್ತೆ. ಕರ್ನಾಟಕ, ತಮಿಳುನಾಡಿಗೆ ಕಾವೇರಿ ಮಾತೆ ಕೊಡುಗೆ ದೊಡ್ಡದಿದೆ. ಸಾಕಷ್ಟು ರೈತರು ಕಾವೇರಿ ನೀರು ಬಳಸಿ ಕೃಷಿ ಮಾಡುತ್ತಾರೆ. ಅದರಿಂದ ಬೆಳೆದ ಅನ್ನವನ್ನು ಇಂದಿರಾ ಕ್ಯಾಂಟಿನಗಳಲ್ಲಿ ಊಟ ಮಾಡುತಿದ್ದೇವೆ. ಹೀಗಾಗಿ ಕಾವೇರಿ ಹೆಸರಿಡುವುದು ಸೂಕ್ತ ಎಂದಿದ್ದಾರೆ. ಇಂದಿರಾ ಹೆಸರನ್ನು ತೆಗೆದು ಕಾವೇರಿ ಕ್ಯಾಂಟೀನ್ ಹೆಸರಿಡಲು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.

ಮೇಕೆದಾಟು ಆಗಲೇಬೇಕು
ಮೇಕೆದಾಟು ನಮ್ಮ ರಾಜ್ಯದ ಸಂಪತ್ತು, ನಾವು ಅಲ್ಲಿ ಅಣೆಕಟ್ಟೆ ಮಾಡಲು ತಮಿಳುನಾಡಿನವರನ್ನು ಕೇಳಿ ಮಾಡಬೇಕಾದ ಅಗತ್ಯವಿಲ್ಲ. ಹೀಗಾಗಿ ಸರ್ಕಾರ ಮೇಕೆದಾಟು ಕಾಮಗಾರಿಯನ್ನು ಮಾಡಲೇಬೇಕು ಎಂದು ಶಾಸಕ ಅಪ್ಪಚ್ಚು ರಂಜನ್ ಒತ್ತಾಯಿಸಿದ್ದಾರೆ. ಮೇಕೆದಾಟು ಯೋಜನೆ ಮಾಡುವುದರಿಂದ ರಾಜ್ಯದ ಸಾವಿರಾರು ರೈತರಿಗೆ ಅನುಕೂಲವಾಗಲಿದೆ. ಬರೋಬ್ಬರಿ 60 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸಬಹುದು. ಆದ್ದರಿಂದ ಸರ್ಕಾರ ಕೂಡಲೇ ಯೋಜನೆ ಕಾಮಗಾರಿಗೆ ಮುಂದಾಗಲಿ ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅವರು ರಾಷ್ಟ್ರೀಯ ಸಂಪತ್ತು ಎಂದು ಹೇಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಪ್ಪಚ್ಚು ರಂಜನ್, ಕಾವೇರಿ ಕೂಡ ರಾಷ್ಟ್ರೀಯ ಸಂಪತ್ತು. ಆದರೆ ಕಾವೇರಿ ನೀರನ್ನು ನಾವು ಎಷ್ಟನ್ನು ಬಳಸಿಕೊಂಡು ಎಷ್ಟನ್ನು ತಮಿಳುನಾಡಿಗೆ ಕೊಡಬೇಕೆಂದು ನಿರ್ಧಾರವಾಗಿಲ್ಲವೆ. ಕೇಂದ್ರವೇ ಅದನ್ನು ನಿರ್ಧರಿಸಿರುವಾಗ ಮೇಕೆದಾಟು ವಿಚಾರದಲ್ಲೂ ಅದೇ ರೀತಿ ಆಗುತ್ತದೆ. ಕೇಂದ್ರ ನೀರಾವರಿ ಸಲಹಾ ಸಮಿತಿಯ ನಿರ್ದೇಶನದಂತೆ ಮೇಕೆದಾಟು ಯೋಜನೆ ಕಾಮಗಾರಿ ಆರಂಭ ಆಗಲಿ ಎಂದು ಮಡಿಕೇರಿಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *