ನರೇಗಾ ಯೋಜನೆಯಡಿ ಬಾಳೆ ಬೆಳೆದು ಬಾಳು ಹಸನಾಗಿಸಿಕೊಂಡ ಕೊಪ್ಪಳದ ರೈತ

Public TV
2 Min Read

ಕೊಪ್ಪಳ: ತಾಲೂಕಿನ ಹ್ಯಾಟಿ ಗ್ರಾಮ ಬಾಳೆ ಬೆಳೆಗೆ ಖ್ಯಾತಿ ಪಡೆದಿದ್ದು, ಇಲ್ಲಿಯ ಮಸಾರಿ ಮಣ್ಣು ಹಾಗೂ ನೀರು ಬಾಳೆ ಬೆಳೆಗೆ ಉತ್ತಮವಾಗಿದೆ. ಈ ಗ್ರಾಮದ ವಿರೂಪಾಕ್ಷಪ್ಪ ಇಲ್ಲಿy ನೈಸರ್ಗಿಕ ಸಂಪತ್ತಿನ ಜತೆಗೆ 2020-21ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಹನಿ ನೀರಾವರಿ ಅಳವಡಿಸಿಕೊಂಡು ಹಾಗೂ ತೋಟಗಾರಿಕೆ ಇಲಾಖೆ ಯೋಜನೆಯನ್ನು ಸದುಪಯೋಗ ಪಡೆದುಕೊಂಡು ಒಂದು ಹೆಕ್ಟರ್ ಪ್ರದೇಶದಲ್ಲಿ ಬಾಳೆ ಬೆಳೆದಿದ್ದಾರೆ. ಕೋವಿಡ್ ಸಂಕಷ್ಟದಲ್ಲೂ ಸಹ ತೋಟಗಾರಿಕೆ ಅಧಿಕಾರಿಗಳ ಸಹಾಯ ಪಡೆದು ಆರ್ಥಿಕ ಪ್ರಗತಿ ಸಾಧಿಸಿದ್ದಾರೆ.

ವಿರೂಪಾಕ್ಷಪ್ಪ ಅವರಿಗೆ ಹೋಬಳಿ ಅಧಿಕಾರಿ ಕೃಷ್ಣಮೂರ್ತಿ ಪಾಟೀಲ್ ಮಾರ್ಗದರ್ಶನ ನೀಡಿದ್ದಾರೆ. ಅದರಂತೆ 2020ರ ಜೂನ್ ನಲ್ಲಿ ಬೆಂಗಳೂರಿನ ಖಾಸಗಿ ಕಂಪನಿಯಿಂದ ಬಾಳೆ ಸಸಿಗಳನ್ನು 13 ರೂ. ಗೆ ಒಂದರಂತೆ ತಂದು 6*6 ಅಡಿ ಅಂತರದಲ್ಲಿ 2 ಎಕರೆಯಲ್ಲಿ 3,000 ಗಿಡಗಳನ್ನು ನಾಟಿ ಮಾಡಿದ್ದಾರೆ. ಬಾಳೆ ನಾಟಿ, ಸಸ್ಯ ಸಂರಕ್ಷಣೆ, ನೀರು ಹಾಗೂ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಹಾರ್ಟಿ ಕ್ಲಿನಿಕ್ ವಿಷಯ ತಜ್ಞರಿಂದ ಸಲಹೆ ಪಡೆದಿದ್ದಾರೆ. ಜೂನ್‍ನಲ್ಲಿ ನಾಟಿ ಮಾಡಿದ ಬಾಳೆ ಈಗ ಕೊಯ್ಲಿಗೆ ಬಂದಿದ್ದು, ಸುಮಾರು 5 ಕ್ವಿಂಟಲ್ ಕಾಯಿಗಳನ್ನು 5 ರೂ. ಗೆ ಒಂದು ಕಿ.ಗ್ರಾಂ. ನಂತೆ ಸ್ಥಳೀಯ ಮಾರುಕಟ್ಟೆಗೆ ಮಾರಾಟ ಮಾಡಿದ್ದಾರೆ.

ಲಾಕ್‍ಡೌನ್‍ನಿಂದಾಗಿ ಬೆಲೆ ಕಡಿಮೆ ಆಗಿ ಹಾಗೂ ಖರೀದಿದಾರರೇ ಇಲ್ಲದ ಸಮಯದಲ್ಲಿ ತೋಟಗಾರಿಕೆ ಇಲಾಖೆ ಮಧ್ಯ ಪ್ರವೇಶಿಸಿ, ಸ್ಥಳೀಯವಾಗಿ ಮಾರುಕಟ್ಟೆ ಕಲ್ಪಿಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಗಳಿಗೆ ಕಳುಹಿಸಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ಮಾರಾಟ ಮಾಡುವುದೊಂದೇ ಸವಾಲಾಗಿದೆ. ಮಾರಾಟವಾಗದಿದ್ದಲ್ಲಿ ಹಣ್ಣುಗಳು ಹಾಳಾಗುತ್ತವೆ. ಮೊದಲೇ ಗಾಳಿಯಿಂದಾಗಿ ನೂರಾರು ಗಿಡಗಳು ಬಿದ್ದು ನಷ್ಟವಾಗಿವೆ, ಈಗ ಮತ್ತಷ್ಟು ನಷ್ಟವಾಗುವುದು ಬೇಡ ಎಂದು ಅಧಿಕಾರಿಗಳ ಸಲಹೆ ನೀಡಿದ್ದಾರೆ. ತೋಟಗಾರಿಕೆ ಅಧಿಕಾರಿಗಳ ಸಲಹೆಯಂತೆ ಬೆಳೆದ ಬಾಳೆ ಉತ್ತಮವಾಗಿದೆ, ಮುಂದಿನ ದಿನಗಳಲ್ಲಿ ಉತ್ತಮ ದರ ಸಿಗುವ ನಿರೀಕ್ಷೆ ಇದೆ ಎನ್ನುತ್ತಾರೆ.

ಇಲಾಖೆಯ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಅಧಿಕಾರಿಗಳ ಸಲಹೆ ಪಡೆದ ವಿರೂಪಾಕ್ಷ ಅವರು ಉತ್ತಮ ಬೆಳೆ ಬೆಳೆದಿದ್ದಾರೆ. ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಇವರಿಗೆ ಮಾರುಕಟ್ಟೆ ತೊಂದರೆ ಆಗಿತ್ತು. ಸದ್ಯ ಕಡಿಮೆ ದರ ಇದ್ದರೂ ಸ್ಥಳೀಯ ವ್ಯಾಪಾರಸ್ಥರು ತಾವೇ ಕೊಯ್ಲು ಮಾಡಿ ಕಾಯಿಗಳನ್ನು ಒಯ್ಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ದರ ಸಿಗಬಹುದು. ರೈತರು ಎದೆಗುಂದಬಾರದು. ತೋಟಗಾರಿಕೆ ಇಲಾಖೆ ಸದಾ ರೈತರ ನೆರವಿಗೆ ಇರುತ್ತದೆ ಎಂದು ಹಿರಿಯ ಸಹಾಯಕ ತೋಟಗಾರಿಗೆ ನಿರ್ದೇಶಕರಾದ (ಹಿ.ಸ.ತೋ.ನಿ) ಜಗನ್ನಾಥರೆಡ್ಡಿ ಹೇಳುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *