ನರಭಕ್ಷಕ ಚಿರತೆ ಸೆರೆಗೆ ಕೃತಕ ಕುರಿ ಹಟ್ಟಿ ತಯಾರಿ- ಅಧಿಕಾರಿಗಳಿಗೆ ಸವಾಲಾದ ಗುಹೆಗಳು

Public TV
2 Min Read

– ಚಿರತೆ ತಿರುಗಾಡುವ ಸೂಕ್ಷ್ಮ ಸ್ಥಳಗಳ ಪತ್ತೆ

ಕೊಪ್ಪಳ: ಕಳೆದ ಎರಡು ತಿಂಗಳಿಂದ ಅಧಿಕಾರಿಗಳ ನಿದ್ದೆಗೆಡಿಸಿರುವ ನರಭಕ್ಷಕ ಚಿರತೆ ಸೆರೆ ಹಿಡಿಯಲು ಅಕಾರಿಗಳು ನಾನಾ ತಂತ್ರಗಳನ್ನು ರೂಪಿಸಿ, ಕಾರ್ಯಚರಣೆ ನಡೆಸಿದರೂ ಪ್ರಯೋಜನವಾಗಿಲ್ಲ. ಇದೀಗ ಕುರಿ ಸಾಕಾಣಿಕೆಯ ಕೃತಕ ಹಟ್ಟಿ ನಿರ್ಮಿಸಿ, ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಂಚು ರೂಪಿಸಿದ್ದಾರೆ.

ಪ್ರವಾಸಿಗರ ನೆಚ್ಚಿನ ಸ್ಥಳ ಎಂದು ಗುರುತಿಸಿಕೊಂಡಿದ್ದ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ, ವಿರುಪಾಪೂರ ಗಡ್ಡೆ, ಸಣಾಪೂರ, ಜಂಗ್ಲಿ ಗ್ರಾಮಗಳಲ್ಲಿ ನರಭಕ್ಷಕ ಚಿರತೆ ಕಾಟ ಹೆಚ್ಚಳವಾಗಿದೆ. ಮೂರ್ನಾಲ್ಕು ತಿಂಗಳಿನಲ್ಲಿ ಈಗಾಗಲೇ ಇಬ್ಬರು ಯುವಕರನ್ನು ಬಲಿ ಪಡೆದಿರುವ ಚಿರತೆ, ಇಬ್ಬರನ್ನು ಗಂಭೀರವಾಗಿ ಗಾಯಗೊಳಿಸಿದೆ. ಇಂತಹ ನರಭಕ್ಷಕ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಎರಡು ತಿಂಗಳಿಂದ ಇಲ್ಲಿಯೇ ಬೀಡು ಬಿಟ್ಟು, ಆನೆ, ನೆಟ್‍ವರ್ಕ್ ಟ್ರ್ಯಾಪರ್, ಸೆನ್ ಸರ್ವೆ, ಟ್ರ್ಯಾಪ್ ಕ್ಯಾಮೆರಾ, ಬೋನ್ ಅಳವಡಿಕೆ ಸೇರಿದಂತೆ ನಾನಾ ಕಾರ್ಯಚರಣೆಗಳನ್ನು ನಡೆಸುತ್ತಿದ್ದಾರೆ. ಆದರೆ ಎರಡು ತಿಂಗಳಿಂದ ನರಭಕ್ಷಕ ಚಿರತೆ ಕಣ್ತಪ್ಪಿಸಿಕೊಂಡು ತಿರುಗಾಡುತ್ತಿದ್ದು, ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.

ವೈಜ್ಞಾನಿಕ ಕಾರ್ಯಚರಣೆ ನಡೆಸಿ ಅರಣ್ಯ ಇಲಾಖೆ ಅಕಾರಿಗಳು ಯಶಸ್ವಿಯಾಗದಿರುವುದರಿಂದ ಬೆಸತ್ತು ಕೃತಕ ಪ್ರಯೋಗಕ್ಕೆ ಮುಂದಾಗಿದ್ದಾರೆ. ಸೆನ್ ಸರ್ವೆ ಮೂಲಕ ಚಿರತೆ ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು, ಹೆಚ್ಚು ಕಾಣಿಸಿಕೊಳ್ಳುವ ಸ್ಥಳವಾಗಿರುವ ಜಂಗ್ಲಿ ಸಮೀಪದಲ್ಲಿ ಕೃತಕ ಕುರಿ ಹಟ್ಟಿಯನ್ನು ನಿರ್ಮಿಸಲು ಮುಂದಾಗಿದ್ದಾರೆ. ಕೃತಕ ಹಟ್ಟಿಯಲ್ಲಿ ಕುರಿ ಮರಿಗಳ ಸಾಕಾಣಿಕೆ ಮಾಡಿ, ಅದಕ್ಕೆ ಹೊಂದಿಕೊಂಡಂತೆ ಬೋನ್ ಅಳವಡಿಸಲಾಗಿದೆ. ಹಟ್ಟಿಯಲ್ಲಿನ ಕುರಿಗಳ ಮೇಲೆ ದಾಳಿ ಮಾಡಲು ಚಿರತೆ ಬರುವ ವೇಳೆ ಅಧಿಕಾರಿಗಳು ಅರವಳಿಕೆ ನೀಡಲು ಕೂಡ ಸಂಚು ರೂಪಿಸಿದ್ದಾರೆ.

ಸವಾಲಿನ ಕೆಲಸ: ಎರಡು ತಿಂಗಳಿಂದ ಕಾರ್ಯಚರಣೆ ನಡೆಸುತ್ತಿರುವ ಅಧಿಕಾರಿಗಳು, ನರಭಕ್ಷಕ ಚಿರತೆಯ ಚಲನವಲನಗಳನ್ನು ಗಂಭೀರವಾಗಿ ಪರಿಶೀಲಿಸಿದ್ದಾರೆ. ಬನ್ನೇರುಘಟ್ಟ, ಚಿತ್ರದುರ್ಗ, ಮೈಸೂರು, ದರೋಜಿಯಿಂದ ತತ್ಞರು ಭೇಟಿಯನ್ನು ನೀಡಿ, ಚಿರತೆಯ ಮೂತ್ರ, ಲದ್ದಿ, ತಿಂದು ಬಿಟ್ಟಿರುವ ಮಾಂಸದ ತುಕುಣುಗಳು, ತಿರುಗಾಡುವ ಸ್ಥಳಗಳ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಅಧಿಕಾರಿಗಳು ಹೇಳುವ ಪ್ರಕಾರ ಸಣಾಪೂರ ಗ್ರಾಮದಿಂದ ಸಂಗಾಪೂರ ಗ್ರಾಮದವರೆಗೆ ಅಂದರೆ 32 ಚ.ಕಿ.ಮೀ ಯಲ್ಲಿ ಚಿರತೆ ಸಂಚಾರ ನಡೆಸುತ್ತಿದೆ. ಇಂತಹ ವಿಶಾಲ ಬೆಟ್ಟಗುಡ್ಡಗಳ ಸಾಲಿನಲ್ಲಿ ಗುಹೆಗಳು ಹೆಚ್ಚಾಗಿದ್ದು, ಚಿರತೆ ವಾಸಕ್ಕೆ ಯೋಗ್ಯವಾಗಿದೆ. ಸೆನ್ ಸರ್ವೆಯಲ್ಲಿ ಸಾಕಷ್ಟು ಗುಹೆಗಳು ಪತ್ತೆಯಾಗಿದ್ದು, ಗುಹೆಗಳಲ್ಲಿ ಚಿರತೆ ವಾಸವಾಗಿದ್ದರೆ ಗುರುತಿಸುವುದು ಅಧಿಕಾರಿಗಳಿಗೆ ಸವಾಲಿನ ಕೆಲಸವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *