ನಮ್ ಮನೆಗೆ ಊಟಕ್ಕೆ ಬನ್ರಣ್ಣ- ಸಿಎಂ ಡಿನ್ನರ್ ಪಾಲಿಟಿಕ್ಸ್ ಇನ್‍ಸೈಡ್ ಸ್ಟೋರಿ

Public TV
1 Min Read

– ಯಾರು ಹೋಗ್ತಾರೆ ಸಿಎಂ ಔತಣಕೂಟಕ್ಕೆ?

ಬೆಂಗಳೂರು: ತಮ್ಮ ವಿರುದ್ಧ ಅಸಮಾಧಾನಗೊಂಡಿರುವ ಶಾಸಕರ ಮನವೊಲೈಕೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದು, ಇಂದು ರಾತ್ರಿ ಕಮಲ ಶಾಸಕರಿಗಾಗಿ ಔತಣಕೂಟ ಏರ್ಪಡಿಸಿದ್ದಾರೆ. ಕಾವೇರಿ ನಿವಾಸದಲ್ಲಿ ಏರ್ಪಡಿಸಿರುವ ಔತಣಕೂಟಕ್ಕೆ ಸಿಎಂ ಕಚೇರಿಯಿಂದಲೇ ಎಲ್ಲ ಶಾಸಕರಿಗೂ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ. ಇಂದು ವಿಧಾನಸೌಧದಲ್ಲಿ ಕೆಲವು ಶಾಸಕರಿಗೆ ಸ್ವತಃ ಸಿಎಂ ಆಹ್ವಾನ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಔತಣದ ತಂತ್ರಗಾರಿಕೆ: ಸೋಮವಾರ ಸುಮಾರು 15ಕ್ಕೂ ಹೆಚ್ಚು ಕಮಲ ಶಾಸಕರು ಮಧ್ಯಾಹ್ನದ ಭೋಜನಕೂಟದ ನೆಪದಲ್ಲಿ ಒಂದೆಡೆ ಸೇರಿ ರಹಸ್ಯ ಸಭೆ ನಡೆಸಿದ್ದರು. ಎಲ್ಲರೂ ಸಿಎಂ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿ ಕಲಾಪದ ಬಳಿಕ ಹೈಕಮಾಂಡ್ ಗೆ ದೂರು ಸಲ್ಲಿಸಲು ಈ ಟೀಂ ಸಿದ್ಧವಾಗಿದೆ ಎನ್ನಲಾಗಿದೆ. ಹಾಗಾಗಿ ಈ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಡಿನ್ನರ್ ಆಯೋಜಿಸಿದ್ದಾರೆ ಎನ್ನಲಾಗುತ್ತಿದೆ. ಔತಣಕೂಟದ ನೆಪದಲ್ಲಿ ಭಿನ್ನಮತ ಶಮನಕ್ಕೆ ಸಿಎಂ ಮುಂದಾಗಿದ್ದಾರೆ ಅನ್ನೋ ಮಾತುಗಳು ಕಮಲ ಅಂಗಳದಲ್ಲಿ ಹರಿದಾಡುತ್ತಿವೆ.

ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ ವೇಳೆಯಲ್ಲಿ ಸಿಎಂ ನಡೆ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ನಮ್ಮ ಕೆಲಸಗಳು ಆಗುತ್ತಿಲ್ಲ. ಏಜೆಂಟರ ಮೂಲಕ ಹೋಗಬೇಕು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗುತ್ತಿದೆ. ಮತ್ತೆ ಹೈಕಮಾಂಡ್ ಗೆ ದೂರು ಹೋಗದಂತೆ ತಡೆಯಲು ಸಿಎಂ ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಮುಂದಾದಂತೆ ಕಾಣಿಸುತ್ತಿದೆ.

ಈ ಹಿಂದೆ ಸಿಎಂ ಖಾಸಗಿ ಹೋಟೆಲ್‍ನಲ್ಲಿ ಬಿಜೆಪಿ ಶಾಸಕರ ವಿಭಾಗವಾರು ಸಭೆ ಕರೆದಿದ್ದರು. ಯಡಿಯೂರಪ್ಪ ವಿರೋಧಿ ಬಣ, ಪಕ್ಷ ನಿಷ್ಠಬಣದ ಶಾಸಕರು ಹೋಗುವುದು ಅನುಮಾನ ಎಂದು ಹೇಳಲಾಗ್ತಿದೆ. ಔತಣಕೂಟಕ್ಕೆ ಯಾರು ಹೋಗ್ತಾರೆ ಅನ್ನೋದರ ಬಗ್ಗೆ ಕೂತುಹಲ ಮನೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *