ಕೊಪ್ಪಳ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತುಂಬಾ ಹಿರಿಯರು. ಅವರಿಗೆ ನನ್ನ ಮೇಲೆ ಬಹಳ ಪ್ರೀತಿಯಿದೆ. ನಮ್ಮ ಕುಟುಂಬದ ಬಗ್ಗೆ ಅವರು ಪತ್ರ ಬರೆದಿದ್ದಾರೆಂದರೆ ಸಂತೋಷ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ವಕ್ರವಾಗಿ ನುಡಿದರು.
ಕೊಪ್ಪಳ ತಾಲೂಕಿನ ಹುಲಿಗೆಮ್ಮ ದೇವಿ ದೇವಸ್ಥಾನದ ಬಳಿ ಸುದ್ದಿಗಾರರ ಜೊತೆ ಮಾತನಾಡಿ, ಪತ್ರ ಬರೆದ ವಿಚಾರ ದೆಹಲಿಯ ನಾಯಕರು ನೋಡಿಕೊಳ್ಳುತ್ತಾರೆ ಎಂದಷ್ಟೇ ಹೇಳಿ, ರಾಜ್ಯದಲ್ಲಿ ಮೀಸಲಾತಿಗೆ ನಡೆದ ಹೋರಾಟದ ವಿಚಾರದಲ್ಲಿ ಯಾರ ವಿರೋಧವೂ ಇಲ್ಲ. ಸಿಎಂ, ಬಿಜೆಪಿ ನಾಯಕರು ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಯಾವ ಗುಂಪುಗಾರಿಕೆಯೂ ನಡೆದಿಲ್ಲ. ಮೀಸಲಾತಿಗೆ ಹೋರಾಟ ಮಾಡುವುದು ಸಹಜ. ಹೋರಾಟ ಮಾಡುವುದು ತಪ್ಪಲ್ಲ. ಆದರೆ ಸಂವಿಧಾನದಡಿ ಯಾವ ರೀತಿ ಪರಿಹಾರ ಕೊಡಬೇಕು ಎನ್ನುವುದನ್ನ ಸಿಎಂ ನಿರ್ಧರಿಸುತ್ತಾರೆ ಎಂದರು.
ಬಸವ ಕಲ್ಯಾಣ, ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಮುಂದಿನ ಚುನಾವಣೆಗೆ ನಾನು ಎಲ್ಲಿ ಅಭ್ಯರ್ಥಿಯಾಗುವೆ ಎನ್ನವುದು ಗೊತ್ತಿಲ್ಲ. ಅದೆಲ್ಲವನ್ನು ಪಕ್ಷ ನಿರ್ಣಯ ಮಾಡಲಿದೆ. ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಣೆ ವಿಚಾರಣದಲ್ಲಿ ಯಾರಾದರೂ ಅವಿದ್ಯಾವಂತರು ಮಾತನಾಡಿದ್ದರೆ ನಾನು ಉತ್ತರ ಕೊಡಬಹುದಿತ್ತು. ಆದರೆ ವಿದ್ಯಾವಂತರಾದ ಸಿದ್ದರಾಮಯ್ಯ, ಹೆಚ್‍ಡಿಕೆ ಅವರೇ ಈ ರೀತಿ ಮಾತನಾಡಿದರೆ ಹೇಗೆ? ಎಂದರಲ್ಲದೇ, ಸುಪ್ರೀಂಕೋರ್ಟ್ ತೀರ್ಪಿನ ನಂತರವೂ ಅದು ವಿವಾಧಿತ ಎನ್ನುವುದು ನನಗೆ ಆಶ್ಚರ್ಯ ತರಿಸಿದೆ. ಇಂತಹ ವಿಷಯದಲ್ಲಿ ರಾಜಕೀಯ ಮಾಡಿ ಮತದಾರರನ್ನ ಅಡ್ಡದಾರಿಗೆ ತೆಗೆದುಕೊಂಡು ಹೋಗಿದ್ದಕ್ಕೆ ಕಾಂಗ್ರೆಸ್ಸಿಗೆ ಈ ಗತಿ ಬಂದಿದೆ ಎಂದು ಸಿದ್ದರಾಮಯ್ಯ, ಹೆಚ್‍ಡಿಕೆ ಹೇಳಿಕೆಗೆ ವಿಜಯೇಂದ್ರ ಅವರು ತಿರುಗೇಟು ನೀಡಿದರು.