ಅನ್ನಭಾಗ್ಯ ಅಕ್ಕಿಯನ್ನ 7 ರಿಂದ 5 ಕೆ.ಜಿಗೆ ಇಳಿಸಿದ್ದಾರೆ- ಬಿಎಸ್‌ವೈ ವಿರುದ್ಧ ಸಿದ್ದು ವಾಗ್ದಾಳಿ

Public TV
2 Min Read

– ನನ್ನ ಸೋಲಿಸಲು ಎಲ್ಲ ಸೇರಿ, ಎಲ್ಲ ರೀತಿಯ ಪ್ರಯತ್ನ ಮಾಡಿದರು
– ಮುಖ್ಯಮಂತ್ರಿಯಾದ್ರೆ ಗಟ್ಟಿಯಾಗಿ ಕುಳಿತುಕೊಳ್ತಾನೆಂದು ಸೋಲಿಸಿದ್ರು
– ಮಾನ, ಮಾರ್ಯಾದೆ ಬಿಟ್ಟು ಮಂತ್ರಿ ಕೆಲಸ ಮಾಡ್ಬೇಕಾ?

ಹಾಸನ: ಅನ್ನಭಾಗ್ಯ ಅಕ್ಕಿಯನ್ನು 7.ಕೆ.ಜಿ.ಯಿಂದ 5 ಕೆ.ಜಿ.ಗೆ ಇಳಿಸಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಅಪ್ಪನ ಮನೆಯಿಂದ ಹಣ ಕೊಡುತ್ತಾರಾ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದ್ದಾರೆ.

ಜಿಲ್ಲೆಯ ಹುಲ್ಲೇನಹಳ್ಳಿಯಲ್ಲಿ ಮಾತನಾಡಿದ ಅವರು, ಸರ್ಕಾರದ ದುಡ್ಡು ಯಾರ ಅಪ್ಪನ ಮನೆಯ ದುಡ್ಡೂ ಅಲ್ಲ, ಜನ ತೆರಿಗೆ ರೂಪದಲ್ಲಿ ನೀಡಿದ ಹಣವನ್ನು ಆದ್ಯತೆ ಮೇರೆಗೆ ಖರ್ಚು ಮಾಡಬೇಕು ಎಂದರು.

ಇನ್ನೊಂದು ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಎಲ್ಲಿ ಗಟ್ಟಿಯಾಗಿ ಕುಳಿತುಕೊಳ್ಳುತ್ತಾನೋ ಎಂಬ ಭಯದಿಂದ ಎಲ್ಲರೂ ಸೇರಿಕೊಂಡು, ಎಲ್ಲ ರೀತಿಯ ಪ್ರಯತ್ನ ಮಾಡಿ ನನ್ನನ್ನು ಸೋಲಿಸಿದರು. ನಮ್ಮ ಅಕ್ಕಿಯಿಂದ ಊಟ ಮಾಡಿ, ನನಗೆ ವಿರುದ್ಧವಾಗಿ ಮತ ಹಾಕಿದರೆ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಸರ್ಕಾರದಲ್ಲಿ ಈಶ್ವರಪ್ಪನವರದ್ದು ಏನೂ ನಡೆಯುವುದಿಲ್ಲ. ನಾನಾಗಿದ್ದರೆ ಒಂದು ಸೆಕೆಂಡ್ ಸಹ ಮಂತ್ರಿಯಾಗಿ ಇರುತ್ತಿರಲಿಲ್ಲ. ಮಾನ, ಮಾರ್ಯಾದೆ ಬಿಟ್ಟು ಮಂತ್ರಿ ಕೆಲಸ ಮಾಡಲಿಕ್ಕೆ ಆಗುತ್ತೇನ್ರಿ? ಸ್ವಾಭಿಮಾನ ತುಂಬಾ ಮುಖ್ಯ. ನನ್ನ ರಾಜಕೀಯ ಜೀವನದಲ್ಲಿ ಇನ್ನೊಬ್ಬರಿಗೆ ಗೊಡ್ಡು ಸಲಾಂ ಹೊಡೆದು ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ. 40 ವರ್ಷದಿಂದ ಇದೇ ರೀತಿ ರಾಜಕೀಯ ಮಾಡಿದ್ದೇನೆ, ಇದೆಲ್ಲ ಸಾದ್ಯವಾಗಿದ್ದು ನಿಮ್ಮೆಲ್ಲರ ಆಶೀರ್ವಾದದಿಂದ ಎಂದು ಸಚಿವ ಈಶ್ವರಪ್ಪ ವಿರುದ್ಧ ಹರಿಹಾಯ್ದರು.

ಇನ್ಮುಂದೆ ಹೊಂದಾಣಿಕೆ ಇಲ್ಲ
ಇನ್ನು ಮುಂದೆ ಜೆಡಿಎಸ್ ಜೊತೆ ಹೊಂದಾಣಿಕೆ ಇಲ್ಲ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ಇದೇ ಸಂದರ್ಭದಲ್ಲಿ ತಾವು ಮುಖ್ಯಮಂತ್ರಿ ಆಗಿದ್ದಾಗ ನುಗ್ಗೇಹಳ್ಳಿ ಹೋಬಳಿಯ ನೀರಾವರಿ ಕಾಮಗಾರಿಗೆ ಚಾಲನೆ ನೀಡಿದ ಬಗ್ಗೆ ಜನರಿಗೆ ಮಾಹಿತಿ ನೀಡಿದರು. ಕೆರೆಗೆ ನೀರು ತುಂಬಿಸಿದ್ದು ಯಾರು ಎಂಬ ಬಗ್ಗೆ ಸ್ಥಳೀಯ ಶಾಸಕ ಬಾಲಕೃಷ್ಣ ಮತ್ತು ಎಂಎಲ್‍ಸಿ ಗೋಪಾಲಸ್ವಾಮಿ ನಡುವೆ ಮುಸುಕಿದ ಗುದ್ದಾಟ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ ಅವರಿಂದಲೇ ಜನರಿಗೆ ಎಂಎಲ್‍ಸಿ ಗೋಪಾಲಸ್ವಾಮಿ ಮನವರಿಕೆ ಮಾಡಿದರು.

ಹಾಸನ ಜಿಲ್ಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರವಾಸ ಕೈಗೊಂಡಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಗ್ರಾಮಕ್ಕೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸುತ್ತಿದ್ದಂತೆ ಸಾವಿರಾರು ಜನರು ಹೆಲಿಕಾಪ್ಟರ್‍ನತ್ತ ಓಡಿದರು. ಇದರಿಂದಾಗಿ ಹೆಲಿಕಾಪ್ಟರ್ ನಿಂದ ಕೆಳಗಿಯಲು ಸಿದ್ದರಾಮಯ್ಯ ಹಿಂದೇಟು ಹಾಕಿದರು. ಹೆಲಿಕಾಪ್ಟರ್ ಲ್ಯಾಂಡ್ ಆದ ನಂತರ ಗಾಬರಿಗೊಂಡ ಪೈಲೆಟ್, ಮತ್ತೆ ಮೇಲೆ ಹಾರಿಸಿದರು. ಹತ್ತು ನಿಮಿಷಗಳ ನಂತರ ಹೆಲಿಕಾಪ್ಟರ್ ನಿಂದ ಮಾಜಿ ಸಿಎಂ ಸಿದ್ದರಾಮಯ್ಯ ಕೆಳಗಿಳಿದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪೊಲೀಸರ ಭದ್ರತಾ ವೈಫಲ್ಯದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *