ನನ್ನ ಮೇಲೆ ತನಿಖೆಗೆ ಅನುಮತಿ ನೀಡಿ ಬಿಎಸ್‍ವೈ ಕಿರುಕುಳ ಕೊಟ್ಟಿದ್ದಾರೆ – ಡಿಕೆಶಿ ಆರೋಪ

Public TV
2 Min Read

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸಿಬಿಐ ದಾಳಿಗೆ ಕಾರಣ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇರ ಆರೋಪ ಮಾಡಿದ್ದಾರೆ. ಅಲ್ಲದೆ 14 ಕಡೆ 140 ಜನರಿಗೆ ತೊಂದರೆ ಕೊಡಲಾಗ್ತಿದೆ. ನಾವು ಯಾವುದಕ್ಕೂ ಜಗ್ಗಲ್ಲ ಅಂತ ಡಿಕೆ ಬ್ರದರ್ಸ್ ಗುಡುಗಿದ್ದಾರೆ.

ಸಿಬಿಐ ದಾಳಿ ಬಗ್ಗೆ ಡಿಕೆ ಬ್ರದರ್ಸ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಸಿಬಿಐಗೆ ಅನುಮತಿ ಕೊಡೋದು ಬೇಡ. ಇದರ ಬಗ್ಗೆ ಐಟಿ, ಸಿಐಡಿ ತನಿಖೆ ನಡೆಸಬಹುದು ಅಂತ ಅಡ್ವೋಕೇಟ್ ಜನರಲ್ ತಿಳಿಸಿದರು ಕೂಡ ಸರ್ಕಾರ ಅದ್ಯಾರ ಒತ್ತಡದಿಂದ್ಲೋ ಏನೋ, ಸಿಬಿಐ ತನಿಖೆಗೆ ಅನುಮತಿ ಕೊಟ್ಟಿದೆ. ಮುಖ್ಯಮಂತ್ರಿಗಳೇ ನನಗೆ ಎಷ್ಟು ಕಿರುಕುಳ ಕೊಡ್ಬೇಕೋ ಕೊಟ್ಟಿದ್ದೀರಿ.

ಕೊರೊನಾ ವೇಳೆ ಸರ್ಕಾರ ಶೇ.400 ಲೂಟಿ ಮಾಡ್ತು. ಇದನ್ನು ಸರ್ಕಾರಕ್ಕೆ ಕೇಳಿದ್ದಕ್ಕೆ ಹೀಗೆಲ್ಲ ಮಾಡ್ತಿದ್ದಾರೆ. ಆದರೆ ನನ್ನ ದನಿ ಮುಚ್ಚೋಕೆ ಆಗಲ್ಲ. ಡಿಕೆಶಿ ನಿಮ್ಮ ಒತ್ತಡಕ್ಕೆ ಮಣಿಯಲ್ಲ ಅಂದ್ರು. ಈ ತಿಂಗಳ 3ರಂದು ಎಫ್‍ಐಆರ್ ಆಗಿದೆ. ಬೈಎಲೆಕ್ಷನ್‍ನಲ್ಲಿ ನನ್ನನ್ನು ಹಿಂದೆ ಸರಿಸುವ ಪ್ರಯತ್ನ ಇದು. 2024ರ ಚುನಾವಣೆವರೆಗೂ ಮುಂದುವರಿಯುತ್ತೇವೆ. ದಾಳಿಯಲ್ಲಿ ನನ್ನ ಮನೆಯಲ್ಲಿ ಪಂಚೆ, ಪ್ಯಾಂಟು ಶರ್ಟು, ಸೀರೆಗಳ ಲೆಕ್ಕವನ್ನು ಸಿಬಿಐ ತಗೊಂಡಿದೆ. ಇದು ರಾಜಕೀಯ ಕುತಂತ್ರ, ಒತ್ತಡಗಳಿಗೆ ನಾನು ಹೆದರೋ ಮಗ ಅಲ್ಲ ಅಂತಾ ಡಿಕೆ ಶಿವಕುಮಾರ್ ಗುಡುಗಿದ್ರು. ಅಲ್ಲದೆ ತನಿಖೆಗೆ ಕರೆದ್ರೆ ಹೋಗ್ತೇನೆ ಅಂತಲೂ ಹೇಳಿದ್ರು.

ಬೈ ಎಲೆಕ್ಷನ್‍ಗಾಗಿ ಸಿಬಿಐ ಛೂ ಬಿಡಲಾಗಿದೆ:
ಸಂಸದ ಡಿಕೆ ಸುರೇಶ್ ಮಾತನಾಡಿ, ಉಪಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಹುಳುಕುಗಳನ್ನು ಮುಚ್ಚಿಡಲು ನಮ್ಮ ಮೇಲೆ ಸಿಬಿಐಯನ್ನು ಛೂ ಬಿಡಲಾಗಿದೆ. ಆದರೆ ಬಿಜೆಪಿ ಕಡೆಯಿಂದ ಬಂದ ಇಂತಹ ಗೊಡ್ಡು ಬೆದರಿಕೆ ಜಗ್ಗೋದಾಗ್ಲಿ, ಕುಗ್ಗೋದಾಗ್ಲಿ ದೂರದ ಮಾತು ಅಂತ ಹೇಳಿದ್ರು. ರಾಜಕೀಯವನ್ನು ರಾಜಕೀಯವಾಗಿಯೇ ಎದುರಿಸಲು ಸಿದ್ಧರಿದ್ದೇವೆ. ಯಾರೂ ಧೃತಿಗೆಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಡಿಕೆ ಬ್ರದರ್ಸ್ ಬೆಂಗಳೂರು ಮನೆ ಜೊತೆಗೆ ಕನಕಪುರದ ಸ್ವಗ್ರಾಮ ದೊಡ್ಡ ಆಲಹಳ್ಳಿಯ ಮನೆ, ರಾಮನಗರದ ಕೋಡಿಹಳ್ಳಿಯಲ್ಲಿರೋ ತಾಯಿ ಗೌರಮ್ಮ ಮನೆಯಲ್ಲೂ ಸಿಬಿಐ ಶೋಧ ಮಾಡ್ತು. ಸಿಬಿಐ ರೇಡ್ ಬಗ್ಗೆ ಬೆಳಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ತಾಯಿ ಗೌರಮ್ಮ, ನನ್ನ ಮಗನನ್ನ ಕಂಡರೆ ಸರ್ಕಾರಕ್ಕೆ ಹಾಗೂ ಇ.ಡಿ, ಸಿಬಿಐ ಅಧಿಕಾರಿಗಳಿಗೆ ಪ್ರೀತಿ. ಅದಕ್ಕೆ ಪದೇ ಪದೇ ಟಾರ್ಗೆಟ್ ಮಾಡ್ತಾರೆ. ಬೇಕಿದ್ದರೆ ಮನೆ ಇಟ್ಟಿಗೆಗಳನ್ನು ತೆಗೆದುಕೊಂಡು ಹೋಗಲಿ. ನನ್ನ ಮಗನನ್ನು ಕರೆದುಕೊಂಡು ಹೋಗಿ ಕೂರಿಸಿಕೊಂಡು ಊಟ ಹಾಕಲಿ. ನಾನು ಬೇಕಿದ್ರೇ ಹೋಗ್ತೇನೆ ಅಂದ್ರು.

ಒಟ್ಟಿನಲ್ಲಿ ಡಿಕೆಶಿ ಬ್ರದರ್ಸ್ ಮಾತ್ರ ಅಲ್ಲ, ಡಿಕೆಶಿ ತಾಯಿ, ಡಿಕೆಶಿ ಅತ್ಯಾಪ್ತರ ಮೇಲೆ ಸಿಬಿಐ ತೀವ್ರ ನಿಗಾ ಇಟ್ಟಿದೆ. ಜೊತೆಗೆ ಬಿಎಸ್‍ವೈ ಪರ್ಮಿಷನ್ ಕೊಡೋ ಮೂಲಕ ರೇಡ್ ಮಾಡಿಸಿದ್ದಾರೆ ಅಂತ ಪರೋಕ್ಷವಾಗಿ ಬಿಎಸ್‍ವೈ ವಿರುದ್ಧ ಡಿಕೆ ಕುಟುಂಬ ರಣಕಹಳೆ ಮೊಳಗಿಸಿದೆ.

Share This Article
Leave a Comment

Leave a Reply

Your email address will not be published. Required fields are marked *