ನನ್ನ ನಾಮನಿರ್ದೇಶನ ಮಾಡಲು ಯಾವುದೇ ಕಾನೂನಿನ ತೊಡಕಿಲ್ಲ: ವಿಶ್ವನಾಥ್

Public TV
2 Min Read

– ಸಿದ್ದರಾಮಯ್ಯ ಹೇಳಿಕೆಗೆ ಹಳ್ಳಿಹಕ್ಕಿ ತಿರುಗೇಟು

ಮೈಸೂರು: ಸಾಹಿತ್ಯ ಲೋಕದಿಂದ ನನ್ನನ್ನ ಆಯ್ಕೆ ಮಾಡಿ ಎಂದು ಮನವಿ ಮಾಡಿದ್ದೇನೆ. ಸಿಎಂ ಇದಕ್ಕೆ ಒಪ್ಪಿದ್ದು, ಆಗಬಹುದು ಎಂದು ಹೇಳಿದ್ದಾರೆ. ನನ್ನನ್ನ ನಾಮ ನಿರ್ದೇಶನ ಮಾಡಲು ಯಾವುದೇ ಕಾನೂನಿನ ತೊಡಕಿಲ್ಲ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಹೇಳಿದರು.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿಶ್ವನಾಥ್, ಪರಿಷತ್ ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರ ಇಲ್ಲ. ಯಾಕೆಂದರೆ 40 ವರ್ಷಗಳ ಕಾಲದಿಂದ ಈ ರಾಜಕಾರಣದ ಏರು-ಪೇರು, ಒಳ್ಳೆಯದ್ದು-ಕೆಟ್ಟದ್ದು, ಅವಕಾಶ-ಅವಕಾಶ ವಂಚನೆ ಎಲ್ಲವನ್ನೂ ನಾವು ಅನುಭವಿಸಿಕೊಂಡು ಬಂದಿದ್ದೇವೆ ಎಂದರು.

ತಳಮಟ್ಟದ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟಿರುವುದು ಸ್ವಾಗತಾರ್ಹ. ಕೆಲವೊಮ್ಮೆ ನಾವು ಅಂದುಕೊಂಡಿದ್ದಕ್ಕಿಂತ ದೊಡ್ಡದು ಸಿಗುತ್ತೆ. ಕೆಲವೊಮ್ಮೆ ಏನೂ ಸಿಗುವುದಿಲ್ಲ. ರಾಜಕಾರಣ ಅಂದರೆ ಸಿಗುವುದು, ಪಡೆದುಕೊಳ್ಳೋದಲ್ಲ. ನಾಮ ನಿರ್ದೇಶನದ ಮೂಲಕ ಪರಿಷತ್ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡುವ ವಿಶ್ವಾಸ ಇದೆ. ಮುಖ್ಯಮಂತ್ರಿಗಳು ಈ ಬಗ್ಗೆ ಭರವಸೆ ಕೊಟ್ಟಿದ್ದಾರೆ ಎಂದು ಮತ್ತೆ ಪರಿಷತ್ ಸ್ಥಾನಕ್ಕೆ ಹಳ್ಳಿಹಕ್ಕಿ ಆಸೆ ವ್ಯಕ್ತಪಡಿಸಿದ್ದಾರೆ.

ನಾನೊಬ್ಬ ಬರಹಗಾರ, ನನ್ನ ಪುಸ್ತಕಗಳು ರಾಜಕೀಯಕ್ಕೆ ಸಂಬಂಧಪಟ್ಟಿವೆ. ಲಂಡನ್ ಪಾರ್ಲಿಮೆಂಟ್ ಬಗ್ಗೆ ಪುಸ್ತಕ ಬರೆದಿದ್ದೇನೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಲೋಕದಿಂದ ನನ್ನನ್ನ ಆಯ್ಕೆ ಮಾಡಿ ಎಂದು ಮನವಿ ಮಾಡಿದ್ದೇನೆ. ಸಿಎಂ ಇದಕ್ಕೆ ಒಪ್ಪಿದ್ದು, ಆಗಬಹುದು ಎಂದು ಹೇಳಿದ್ದಾರೆ. ನನಗೂ ಕಾನೂನಿನ ಅರಿವಿದೆ. ನನ್ನನ್ನ ನಾಮನಿರ್ದೇಶನ ಮಾಡಲು ಯಾವುದೇ ಕಾನೂನಿನ ತೊಡಕಿಲ್ಲ. ಎಂಟಿಬಿ ನಾಗರಾಜ್ ಆಯ್ಕೆಗೆ ತೊಡಕಿಲ್ಲ ಅನ್ನೋದಾದರೆ ನನಗೆ ಏಕೆ ತೊಡಕಾಗುತ್ತೆ ಎಂದು ಪ್ರಶ್ನಿಸಿದರು.

ನಮ್ಮ ಅನರ್ಹತೆ ಇದ್ದದ್ದು ಕೇವಲ ಕೆಳ ಮನೆಗೆ ಮಾತ್ರ. ಮೇಲ್ಮನೆಗೆ ಆಯ್ಕೆಯಾಗೋಕೆ ಯಾವುದೇ ಕಾನೂನಿನ ಅಡೆ-ತಡೆ ಇಲ್ಲ. ಸಾಹಿತ್ಯ ಕ್ಷೇತ್ರದಿಂದ ನನ್ನನ್ನು ನಾಮ ನಿರ್ದೇಶನ ಮಾಡುವ ವಿಶ್ವಾಸ ಇದೆ ಎಂದು ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಹೇಳಿದರು.

ವಿಶ್ವನಾಥ್‍ಗೆ ಟಿಕೆಟ್ ಕೈ ತಪ್ಪಿದಾಗಲೆಲ್ಲಾ ನಾನೇ ನೆನಪಾಗುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಈ ಬಗ್ಗೆ ಮಾತನಾಡಿದ ವಿಶ್ವನಾಥ್, ನನಗೆ ಟಿಕೆಟ್ ಕೈ ತಪ್ಪಿದಾಗ ಸಿದ್ದರಾಮಯ್ಯ ನೆನಪಾಗೋದಲ್ಲ, ಅವರು ಸಿಎಂ ಆಗಿದ್ದಕ್ಕೆ ನನ್ನನ್ನ ನೆನಪಿಸಿಕೊಳ್ಳಲಿ ಎಂದು ಸಿದ್ದರಾಮಯ್ಯ ಹೇಳಿಕೆಗೆ ಹಳ್ಳಿಹಕ್ಕಿ ತಿರುಗೇಟು ನೀಡಿದರು.

ಸಿದ್ದರಾಮಯ್ಯರನ್ನ ಕಾಂಗ್ರೆಸ್ ಕರೆತಂದಿದ್ದು ನಾನು, ಇದನ್ನ ಸಿದ್ದರಾಮಯ್ಯ ಎಲ್ಲಿಯೂ ಹೇಳುವುದಿಲ್ಲ. ಪಾಪ ಅವರಿಗೆ ಕೃತಜ್ಞತಾ ಭಾವ ಇಲ್ಲ. ವಿಶ್ವನಾಥ್‍ನಿಂದ ನಾನು ಸಿಎಂ ಆಗಲು ಸಾಧ್ಯವಾಯಿತು ಅಂತ ಅಪ್ಪಿತಪ್ಪಿ ಎಲ್ಲಿಯೂ ಹೇಳುವುದಿಲ್ಲ. ನನಗೆ ಟಿಕೆಟ್ ಕೈ ತಪ್ಪಲು ಅವರು ಹೇಗೆ ಕಾರಣ ಅಂತ ಸಂದರ್ಭ ಬಂದಾಗ ಹೇಳುತ್ತೀನಿ. ಅವರ ಮಾತುಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *