ನನ್ನ ಜೊತೆ ನಿಂತಿದ್ದಕ್ಕೆ ಧನ್ಯವಾದಗಳು, ಎಲ್ಲ ಕನ್ನಡ ಚಿತ್ರಗಳನ್ನು ನೋಡಿ ಹರಸಿ: ಧ್ರುವ

Public TV
2 Min Read

ಬೆಂಗಳೂರು: ಚಿತ್ರ ಮಂದಿರಗಳಲ್ಲಿ ಶೇ.100ರಷ್ಟು ಸೀಟ್‍ಗೆ ಅವಕಾಶ ನೀಡುವ ಕುರಿತು ಬೆಂಬಲ ನೀಡಿದ್ದಕ್ಕೆ ನಟ ಧ್ರುವ ಸರ್ಜಾ ಹಿರಿಯ ಕಲಾವಿದರು, ನಿರ್ಮಾಪಕರು, ನಿರ್ದೇಶಕರಿಗೆ ಹಾಗೂ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ.

ಈ ಕುರಿತು ಟ್ವಿಟ್ಟರ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು, ನನ್ನ ಮನಸಲ್ಲಿದ್ದ ಆತಂಕವನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದೆ. ಇದು ಇಷ್ಟೊಂದು ಸಹಕಾರ ಸಿಗುತ್ತದೆ ಎಂದುಕೊಂಡಿರಲಿಲ್ಲ. ನಿಮಗೆ ಹೇಗೆ ಧನ್ಯವಾದ ಹೇಳಬೇಕೆಂದು ತಿಳಿಯುತ್ತಿಲ್ಲ. ಈ ವಿಷಯದಲ್ಲಿ ಬೆಂಬಲ ನೀಡಿದ ಎಲ್ಲ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ಚಲನ ಚಿತ್ರ ವಾಣಿಜ್ಯ ಮಂಡಳಿ, ರಾಜ್ಯ ಸರ್ಕಾರಕ್ಕೆ ವಿಶೇಷವಾಗಿ ಮಾಧ್ಯಮದವರಿಗೆ, ಕನ್ನಡಿಗರಿಗೆ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಇನ್ನೂ ಒಳ್ಳೆಯದಾಗಬೇಕು. ನೀವು ಎಲ್ಲ ಸಿನಿಮಾಗಳನ್ನು ನೋಡಬೇಕು. ಇನ್‍ಸ್ಪೆಕ್ಟರ್ ವಿಕ್ರಂ, ಪೊಗರು, ರಾಬರ್ಟ್, ಯುವರತ್ನ, ಕೋಟಿಗೊಬ್ಬ 3, ಭಜರಂಗಿ 2, ಕೆಜಿಎಫ್-2, ಸಲಗ ಹೀಗೆ ಅನೇಕ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಎಲ್ಲ ಸಿನಿಮಾಗಳನ್ನು ನೋಡಿ ಆಶೀರ್ವದಿಸಿ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ನಟ ಧ್ರುವ ಸರ್ಜಾ ನಿನ್ನೆಯಷ್ಟೇ ಕಿಡಿಕಾರಿದ್ದರು. ಚಿತ್ರಮಂದಿರ ಶೇ.100 ಭರ್ತಿಗೆ ನಿರ್ಬಂಧ ಹೇರಿ, ಶೇ.50 ಭರ್ತಿಗೆ ರಾಜ್ಯ ಸರ್ಕಾರ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ನಟ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಸಂಬಂಧ ಟ್ವೀಟ್ ಮಾಡಿದ್ದ ಧ್ರುವ, ಮಾರ್ಕೆಟ್‍ನಲ್ಲಿ ಗಿಜಿ ಗಿಜಿ ಜನ ಸೇರುತ್ತಾರೆ. ಬಸ್ಸಿನಲ್ಲೂ ಫುಲ್ ರಶ್ ಇರುತ್ತೆ. ಆದರೆ ಚಿತ್ರಮಂದಿರಕ್ಕೆ ಮಾತ್ರ ಏಕೆ ಶೇ.50 ನಿರ್ಬಂಧ ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು. ಅಲ್ಲದೆ ಈ ಟ್ವೀಟ್ ಅನ್ನು ಸಿಎಂ, ಡಿಸಿಎಂ ಅಶ್ವತ್ಥ್ ನಾರಾಯಣ್ ಹಾಗೂ ಆರೋಗ್ಯ ಸಚಿವ ಸುಧಾಕರ್ ಗೆ ಟ್ಯಾಗ್ ಮಾಡಿದ್ದರು.

ಮಹಾಮಾರಿ ಕೊರೊನಾ ವೈರಸ್ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಚಿತ್ರಮಂದಿರಗಳ ಭರ್ತಿಗೆ ಆದೇಶ ನೀಡಿ ಮಾರ್ಗಸೂಚಿ ಪ್ರಕಟಿಸಿ, ರಾಜ್ಯ ಸರ್ಕಾರಗಳು ಈ ಸಂಬಂಧ ನಿರ್ಧಾರ ಕೈಗೊಳ್ಳಬಹುದು ಎಂದು ಸೂಚಿಸಿತ್ತು. ಆದರೆ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಆಸನ ಮಾತ್ರ ಭರ್ತಿ ಮಾಡಲು ಅವಕಾಶ ನೀಡಿ ಮಂಗಳವಾರ ಆದೇಶ ಹೊರಡಿಸಿತ್ತು. ಇದರಿಂದ ದೊಡ್ಡ ದೊಡ್ಡ ಸಿನಿಮಾಗಳಿಗೆ ಮತ್ತೆ ನಿರಾಸೆಯಾಗುವ ಆತಂಕ ಎದುರಾಗಿತ್ತು. ಹೀಗಾಗಿ ಧ್ರವ ಸರ್ಜಾ ಸಿಡಿದೆದ್ದಿದ್ದರು.

ಧ್ರುವ ಸರ್ಜಾ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಉಳಿದ ನಟರು ಸಹ ಈ ಕುರಿತು ಧ್ವನಿ ಎತ್ತಿದ್ದರು. ಹೀಗಾಗಿ ಸರ್ಕಾರ ನಿನ್ನೆ ಸಂಜೆ ಹಿರಿಯ ನಟರು, ನಿರ್ದೇಶಕರು, ನಿರ್ಮಾಪಕರ ಜೊತೆ ಸಭೆ ನಡೆಸಿ ನಾಲ್ಕು ವಾರಗಳಿಗೆ ಅನ್ವಯವಾಗುವಂತೆ ಶೇ.100ರಷ್ಟು ಸೀಟ್ ಭರ್ತಿಗೆ ಅವಕಾಶ ನೀಡಿದೆ. ಈ ವೇಳೆ ಕೊರೊನಾ ಪ್ರಕರಣ ಹೆಚ್ಚಾದಲ್ಲಿ ಮತ್ತೆ ಶೇ.50ಕ್ಕೆ ಇಳಿಸುವುದಾಗಿ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *