ಬೆಂಗಳೂರು: ನನ್ನ ಅಣ್ಣನ ಆಶೀರ್ವಾದಿಂದ ನನಗೂ, ನನ್ನ ಪತ್ನಿಗೂ ಕೊರೊನಾ ನೆಗೆಟಿವ್ ವರದಿ ಬಂದಿದೆ ಎಂದು ನಟ ಧ್ರುವ ಸರ್ಜಾ ಅವರು ಟ್ವೀಟ್ ಮಾಡಿದ್ದಾರೆ.
ಜುಲೈ 15ರಂದು ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾಗೆ ಕೊರೊನಾಗೆ ದೃಢವಾಗಿತ್ತು. ತಕ್ಷಣ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೇ ತಮ್ಮ ಜೊತೆ ಸಂಪರ್ಕ ಹೊಂದಿದ್ದವರಿಗೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದರು. ಇಬ್ಬರಿಗೂ ಕೊರೊನಾ ಗುಣಲಕ್ಷಣ ಕಡಿಮೆ ಇದ್ದುದ್ದರಿಂದ ವೈದ್ಯರು ಮನೆಯಲ್ಲಿಯೇ ಕ್ವಾರಂಟೈನ್ ಆಗುವಂತೆ ಸೂಚಿಸಿದ್ದರು. ಹೀಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಇಬ್ಬರು ಮನೆಯಲ್ಲಿದ್ದರು.
My wife & I have tested negative today for COVID-19.Our gratitude to al ur prayers & mostly my brother's @chirusarja blessing.I wud like to thank my uncle @akarjunofficial who has stood by me in each & every situation.Special thanks to Dr.Surjit Pal Singh & medical help Rajkumar.
— Dhruva Sarja (@DhruvaSarja) July 22, 2020
ಇಂದು ಈ ವಿಚಾರವಾಗಿ ಟ್ವೀಟ್ ಮಾಡಿರುವ ಧ್ರುವ ಸರ್ಜಾ ಅವರು, ಇಂದು ಮಾಡಿದ ಕೊರೊನಾ ಪರೀಕ್ಷೆಯಲ್ಲಿ ನನಗೂ ಮತ್ತು ನನ್ನ ಪತ್ನಿ ನೆಗೆಟಿವ್ ಫಲಿತಾಂಶ ಬಂದಿದೆ. ನನ್ನ ಅಣ್ಣ ಚಿರಂಜೀವಿ ಸರ್ಜಾ ಅವರ ಆಶೀರ್ವಾದಿಂದ ನಮಗೆ ನೆಗೆಟಿವ್ ಬಂದಿದೆ. ನಮ್ಮ ಆರೋಗ್ಯದ ವಿಚಾರವಾಗಿ ದೇವರ ಬಳಿ ಬೇಡಿಕೊಂಡ ಎಲ್ಲರಿಗೂ ಧನ್ಯವಾದ. ಜೊತೆಗೆ ನನ್ನ ಎಲ್ಲ ಕಷ್ಟದ ಸಮಯದಲ್ಲೂ ನನ್ನ ಪರವಾಗಿ ನಿಲ್ಲುವ ಅರ್ಜುನ್ ಸರ್ಜಾ ಅಂಕಲ್‍ಗೆ ಧನ್ಯವಾದಗಳು. ವಿಶೇಷವಾಗಿ ಡಾ. ಸುರ್ಜಿತ್ ಪಾಲ್ ಸಿಂಗ್ ಮತ್ತು ಮೆಡಿಕಲ್ ಸಹಾಯ ಮಾಡಿದ ರಾಜ್‍ಕುಮಾರ್ ಅವರಿಗೆ ಥಾಂಕ್ಯೂ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಅರ್ಜುನ್ ಸರ್ಜಾ ಮಗಳು ಐಶ್ವರ್ಯಾಗೆ ಕೊರೊನಾ ಪಾಸಿಟಿವ್
ಇತ್ತೀಚೆಗೆ ಕೊರೊನಾ ವಿಚಾರವಾಗಿಯೇ ಲೈವ್ ಬಂದು ಮಾತನಾಡಿದ್ದ ಧ್ರುವ, ನಾನು ಮತ್ತು ಪ್ರೇರಣಾ ಆರೋಗ್ಯವಾಗಿದ್ದೇವೆ. ಕ್ಯಾಲರಿ ಕರಗಿಸಬೇಕಾಗಿದೆ ಮನೆಯಲ್ಲಿಯೇ ಟ್ರೆಡ್‍ಮಿಲ್ ಇತ್ತು ಹಾಗಾಗಿ ವರ್ಕೌಟ್ ಮಾಡುತ್ತಿದ್ದೇನೆ. ಆರಂಭದಲ್ಲಿ ಸ್ವಲ್ಪ ಸುಸ್ತಾಗುತ್ತೆ ಅಷ್ಟೆ. ಪ್ರೇರಣಾ ಅವರಿಗೂ ವರ್ಕೌಟ್ ಮಾಡಿಸಬೇಕು ಎಂದು ಹೇಳಿದ್ದಾರೆ. ಇದೇ ವೇಳೆ ಅತ್ತಿಗೆ ಮೇಘನಾ ಬಗ್ಗೆಯೂ ಮಾತನಾಡಿ, ಮೇಘನಾ ಕೂಡ ಆರೋಗ್ಯವಾಗಿದ್ದಾರೆ. ಯಾರೂ ಆತಂಕ ಪಡಬೇಡಿ. ನಾವು ಬೇಗ ಗುಣಮುಖರಾಗಿ ಮನೆಯಿಂದ ಹೊರಗೆ ಬರುತ್ತೇವೆ ಎಂದು ತಿಳಿಸಿದ್ದಾರೆ.
ಈ ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಜಾಗೃತರಾಗಿರಿ ಎಂದು ಅಭಿಮಾನಿಗಳಿಗೆ ಕೆಲವು ಸಲಹೆಗಳನ್ನು ನೀಡಿದ್ದರು. “ತಪ್ಪದೆ ಪ್ರತಿದಿನ ಬಿಸಿ ನೀರು ಕುಡಿಯಿರಿ. ಸಾಧ್ಯವಾದಷ್ಟು ವರ್ಕೌಟ್ ಮಾಡಿ. ಎಲ್ಲರೂ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಎಲ್ಲರೂ ಖುಷಿಯಾಗಿ ಇರಬೇಕು ಅಷ್ಟೇ. ಈ ಕೊರೊನಾವನ್ನು ಒಟ್ಟಾಗಿ ಸೇರಿ ಓಡಿಸೋಣ” ಎಂದು ಧ್ರುವ ಸರ್ಜಾ ಹೇಳಿದ್ದಾರೆ.