ನನಗೆ ರೈಸ್, ದಾಲ್ ಗೊತ್ತು ಹೊರತು ಬೇರೇನೂ ಗೊತ್ತಿಲ್ಲ: ಸುದೀಪ್

Public TV
2 Min Read

– ರಾಜಕೀಯದಿಂದ ಮಾತ್ರ ಪಾರ್ಟಿ ಆಫರ್ ಬಂದಿರೋದು

ತುಮಕೂರು: ನಮಗೆ ರೈಸ್, ದಾಲ್ ಗೊತ್ತು. ಮನೆಯಲ್ಲಿ ತರಕಾರಿ, ಸಾಂಬಾರ್ ಮಾಡಿಕೊಡುತ್ತಾರೆ. ಅದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದು ಡ್ರಗ್ಸ್ ಮಾಫಿಯಾದ ಬಗ್ಗೆ ನಟ ಸುದೀಪ್ ಹೇಳಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಸುದೀಪ್, ಹುಟ್ಟುಹಬ್ಬದ ವಿಶೇಷ ಎಂದು ಬಂದಿಲ್ಲ, ಪ್ರತಿದಿನಲೂ ವಿಶೇಷನೇ. ಆದರೆ ತುಂಬಾ ದಿನದಿಂದ ಮಠಕ್ಕೆ ಬರಬೇಕು ಅಂದುಕೊಂಡಿದ್ದೆ. ಆದರೆ ಸಮಯ ಸಿಕ್ಕಿರಲಿಲ್ಲ. ಈಗ ಎರಡು ದಿನ ಬೆಂಗಳೂರಿಗೆ ಬಂದಿದ್ದೆ. ಹೀಗಾಗಿ ಇಲ್ಲಿಗೂ ಬಂದಿದ್ದೇನೆ. ನಾಲ್ಕು ತಿಂಗಳ ಹಿಂದೆಯೇ ಸಿದ್ದಗಂಗಾ ಮಠಕ್ಕೆ ಬರಬೇಕು ಎಂದು ಇಂದ್ರಜಿತ್ ಅವರಿಗೆ ಹೇಳಿದ್ದೆ. ಎರಡು ದಿನಗಳ ಹಿಂದೆಯೇ ಫೋನ್ ಮಾಡಿ ಬೆಂಗಳೂರಿಗೆ ಬರುತ್ತಿರುವುದಾಗಿ ಹೇಳಿದ್ದೆ. ಹೀಗಾಗಿ ಇಂದ್ರಜಿತ್ ಬಂದಿದ್ದಾರೆ ಎಂದರು.

ಇನ್ನೂ ಇಂದ್ರಜಿತ್ ಜೊತೆ ಬಂದಿರುವುದರ ಬಗ್ಗೆ ಕೇಳಿದ್ದಕ್ಕೆ, ಇಂದ್ರಜಿತ್ ಜೊತೆ ಬಂದಿರುವುದಕ್ಕೆ ಬೇರೆ ಅರ್ಥ ಬೇಡ. ಇಂದ್ರಜಿತ್ ಚಿತ್ರರಂಗಕ್ಕೆ ಬರುವುದಕ್ಕಿಂತ ಮುಂಚೆಯಿಂದಲೂ ಪರಿಚಯ ಇದ್ದಾರೆ. ಹಾಗಾದರೆ ಇವರು ಮಾಡಿರುವ ಒಳ್ಳೆಯದು, ಕೆಟ್ಟದ್ದು ಎಲ್ಲದರಲ್ಲೂ ನಾನು ಭಾಗಿಯಾಗಿದ್ದೀನಾ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಮಠಕ್ಕೆ ಅವರ ಒಡನಾಟ ಇತ್ತು. ಹೀಗಾಗಿ ಜೊತೆಗೆ ಬಂದಿದ್ದೇವೆ ಎಂದರು.

ನಮಗೆ ರೈಸ್, ದಾಲ್ ಗೊತ್ತು. ಮನೆಯಲ್ಲಿ ತರಕಾರಿ, ಸಾಂಬಾರ್ ಮಾಡಿಕೊಡುತ್ತಾರೆ. ಪ್ರೊಡಕ್ಷನ್‌ನಲ್ಲಿ ಟೀ, ಕಾಫಿ ಕೊಡುತ್ತಾರೆ. ಅದನ್ನೇ ಕುಡಿದು, ತಿಂದುಕೊಂಡು 26 ವರ್ಷದಿಂದ ಜೀವನ ಸಾಗಿಸಿದ್ದೇವೆ. ಬೇರೆ ಏನು ಗೊತ್ತಿಲ್ಲ. ನನಗೆ ಗೊತ್ತಿಲ್ಲದೆ ಇರುವ ವಿಚಾರವನ್ನು ಮಾತನಾಡುವುದು ತಪ್ಪು, ಇದರ ಬಗ್ಗೆ ನನಗೆ ಗೊತ್ತಿಲ್ಲ. ಮನೆ, ಶೂಟಿಂಗ್ ಬಿಟ್ಟು ಬೇರೆ ಎಲ್ಲೂ ಹೋಗಲ್ಲ ಎಂದರು.

ಚಿತ್ರರಂಗ ಬಹಳ ದೊಡ್ಡದು. ಬಹಳ ಹಿರಿಯರು, ಕಲಾವಿದರು ಸೇರಿ ಕೆತ್ತಿದ ಒಂದು ಅದ್ಭುತವಾದ, ಸುದೀರ್ಘವಾದ ಪ್ರಚಂಚ. ಅದು ಕೂಡ ಸಾಕಷ್ಟು ನೋವು, ಕಷ್ಟ ನೋಡಿ ಇಲ್ಲಿಯವರೆಗೂ ಬಂದಿರೋದು. ಯಾವುದೋ ಒಂದು ಸಣ್ಣ ವಿಚಾರದಿಂದ ಇಡೀ ಚಿತ್ರರಂಗಕ್ಕೆ ಕಳಂಕ ಎಂದು ಹೇಳುವುದು ತಪ್ಪಾಗುತ್ತದೆ. ನನಗೆ ಪಾರ್ಟಿ ಆಫರ್ ಬಂದಿರೋದು ಬರೀ ರಾಜಕೀಯದಿಂದ ಮಾತ್ರ. ಬೇರೆ ಪಾರ್ಟಿಯ ಆಫರ್ ನನಗೆ ಬಂದಿಲ್ಲ. ಚಿತ್ರರಂಗದಲ್ಲಿ ಡ್ರಗ್ಸ್ ಇರುವುದರ ಬಗ್ಗೆ ನನಗೆ ಗೊತ್ತಿಲ್ಲ. ನಾಲ್ಕು ಜನರು ಕೂತು ಖುಷಿಯಿಂದ ಮಾತನಾಡುವುದಕ್ಕೆ ಪಾರ್ಟಿ ಎನ್ನುತ್ತಾರೆ. ಎಲ್ಲಾ ಪಾರ್ಟಿಗಳು ಒಂದೇ ರೀತಿ ಇರಲ್ಲ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಇಂದ್ರಜಿತ್, ಇದೊಂದು ಧಾರ್ಮಿಕ, ಆಧ್ಯಾತ್ಮಿಕವಾಗಿ ಅವರ ಹುಟ್ಟುಹಬ್ಬಕ್ಕೆ ನಾವು ಭೇಟಿ ಮಾಡಿರುವುದು. ನನ್ನ ಆತ್ಮಮಿತ್ರ ಸುದೀಪ್ ಅವರ ಹುಟ್ಟುಹಬ್ಬವನ್ನು ಸಿದ್ದಗಂಗಾ ಮಠದಲ್ಲಿ ಕಳೆಯುತ್ತಿರುವುದು ನನಗೆ, ನಮ್ಮ ಗೆಳೆಯರಿಗೆ ಖುಷಿ ತಂದಿದೆ. ಅವರನ್ನು ಭಗವಂತ ಕಾಪಾಡಿ, ಇನ್ನೂ ಹೆಚ್ಚಿನ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಿ ಎಂದು ಹಾರೈಸಿದರು.

Share This Article
Leave a Comment

Leave a Reply

Your email address will not be published. Required fields are marked *