‘ನನಗಲ್ಲ, ಚೈನಾಗೆ ಈ ಪ್ರಶ್ನೆ ಕೇಳಿ’ – ಅರ್ಧದಲ್ಲೇ ಸುದ್ದಿಗೋಷ್ಠಿ ಮುಗಿಸಿದ ಟ್ರಂಪ್

Public TV
2 Min Read

ವಾಷಿಂಗ್ಟನ್: “ಈ ಪ್ರಶ್ನೆಯನ್ನು ಚೀನಾ ಜೊತೆ ಕೇಳಿ” ಎಂದು ಹೇಳಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸುದ್ದಿಗೋಷ್ಠಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.

ಕೋವಿಡ್ 19 ಹಿನ್ನೆಲೆಯಲ್ಲಿ ಈಗ ಶ್ವೇತಭವನದ ಒಳಗಡೆ ನಡೆಯದೇ ರೋಸ್ ಗಾರ್ಡನ್ ನಲ್ಲಿ ಅಮೆರಿಕ ಅಧ್ಯಕ್ಷರ ಸುದ್ದಿಗೋಷ್ಠಿ ನಡೆಯುತ್ತಿದೆ. ಇಂದಿನ ಸುದ್ದಿಗೋಷ್ಠಿಯಲ್ಲೂ ಟ್ರಂಪ್ ಅವರು ಕೋವಿಡ್ 19 ಪರೀಕ್ಷೆಯಲ್ಲಿ ವಿಶ್ವದಲ್ಲೇ ಅಮೆರಿಕ ಮುಂದಿದೆ ಎಂದು ಪ್ರಸ್ತಾಪಿಸಿದ್ದಾರೆ.

ಈ ವೇಳೆ ಮಹಿಳಾ ಪ್ರತಕರ್ತೆ ಜಿಯಾಂಗ್, ಅಮೆರಿಕದಲ್ಲಿ ಜನ ಸಾಯುತ್ತಿರುವಾಗ ಇದರಲ್ಲೂ ಸ್ಪರ್ಧೆ ಯಾಕೆ? ಪ್ರತಿ ದಿನವೂ ಹೆಚ್ಚು ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವಾಗ ಈ ವಿಚಾರವನ್ನು ಯಾಕೆ ಪ್ರಸ್ತಾಪ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಈ ಪ್ರಶ್ನೆಗೆ, ಹೌದು, ವಿಶ್ವದೆಲ್ಲೆಡೆ ಹಲವು ಮಂದಿ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಪ್ರಶ್ನೆಯನ್ನು ನೀವು ನನ್ನ ಜೊತೆಯಲ್ಲ, ಚೀನಾಗೆ ಕೇಳಿ. ಚೈನಾಗೆ ಕೇಳಿದರೆ ನೀವು ಅವರಿಂದ ಅಸಾಮಾನ್ಯ ಉತ್ತರವನ್ನು ಪಡೆಯಬಹುದು ಎಂದು ಟ್ರಂಪ್ ಉತ್ತರಿಸಿದ್ದಾರೆ.

ಇದಾದ ಬಳಿಕ ಸಿಎನ್‍ಎನ್ ವಾಹಿನಿಯ ಪತ್ರಕರ್ತೆ ಕೈಟ್ಲಾನ್ ಕಾಲಿನ್ಸ್ ಗೆ ಪ್ರಶ್ನೆ ಕೇಳಲು ಟ್ರಂಪ್ ಅವಕಾಶ ನೀಡಿದರು. ಈ ವೇಳೆ ಪತ್ರಕರ್ತೆ, ಯಾಕೆ ನೀವು ವಿಶೇಷವಾಗಿ ನನ್ನನ್ನು ಉದ್ದೇಶಿಸಿ ಹೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಟ್ರಂಪ್, ನಾನು ಯಾರನ್ನು ನಿರ್ದಿಷ್ಟವಾಗಿ ಉದ್ದೇಶಿಸಿ ಹೇಳಿಲ್ಲ. ಈ ರೀತಿಯ ಅಸಹ್ಯ ಪ್ರಶ್ನೆಯನ್ನು ಯಾರು ಕೇಳುತ್ತಾರೋ ಅವರನ್ನು ಉದ್ದೇಶಿಸಿ ಹೇಳಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ವೇಳೆ ಕಾಲಿನ್ಸ್ ಮರು ಪ್ರಶ್ನೆ ಕೇಳಲು ಮುಂದಾದಾಗ ಟ್ರಂಪ್ ಸುದ್ದಿಗೋಷ್ಠಿಯನ್ನು ಅರ್ಧದಲ್ಲೇ ಮುಗಿಸಿ ತೆರಳಿದ್ದಾರೆ.

ಟ್ರಂಪ್ ವಿಶೇಷವಾಗಿ ಏಷ್ಯಾ ಮೂಲದ ಅದರಲ್ಲೂ ಚೀನಾದ ಮತ್ತು ಚೀನಾದ ಜೊತೆ ಉತ್ತಮ ಸಂಬಂಧ ಹೊಂದಿರುವ ದೇಶಗಳ ಪತ್ರಕರ್ತರ ಪ್ರಶ್ನೆಗೆ ಸರಿಯಾಗಿ ಉತ್ತರಿಸುವುದಿಲ್ಲ ಎನ್ನುವ ಆರೋಪ ಮೊದಲಿನಿಂದಲೂ ಇದೆ.

ಆರಂಭದಲ್ಲಿ ಟ್ರಂಪ್‍ಗೆ ಪ್ರಶ್ನೆಗೆ ಕೇಳಿದ ಜಿಯಾಂಗ್ ಮೂಲತಃ ಚೀನಾದವರಾಗಿದ್ದು, 2 ವರ್ಷವಿದ್ದಾಗ ಅಮೆರಿಕಕ್ಕೆ ಬಂದಿದ್ದು, ಈಗ ಅಮೆರಿಕದ ನಿವಾಸಿಯಾಗಿದ್ದಾರೆ.

ಸುದ್ದಿಗೋಷ್ಠಿಯ ಆರಂಭದಲ್ಲಿ ಟ್ರಂಪ್, ವಿಶ್ವದಲ್ಲಿ ಎಲ್ಲಿಯೂ ನಮ್ಮ ದೇಶದಲ್ಲಿ ನಡೆದಷ್ಟು ಹೆಚ್ಚು ಪರೀಕ್ಷೆಗಳು ನಡೆದಿಲ್ಲ ಮತ್ತು ನಮ್ಮ ಸರಿಸಾಟಿ ಯಾರೂ ಇಲ್ಲ. ನಮ್ಮ ಹತ್ತಿರಕ್ಕೆ ಯಾರು ಬರುವುದಿಲ್ಲ. ಈಗಾಗಲೇ 90 ಲಕ್ಷ ಪರೀಕ್ಷೆಗಳನ್ನು ನಡೆಸಿದ್ದೇವೆ. ಮೂರು ವಾರಗಳ ಹಿಂದೆ 1.50 ಲಕ್ಷ ಪರೀಕ್ಷೆ ನಡೆಯುತ್ತಿತ್ತು. ಆದರೆ ಈಗ ಪ್ರತಿ ದಿನ ಮೂರು ಲಕ್ಷ ಪರೀಕ್ಷೆಗಳನ್ನು ನಡೆಸುತ್ತಿದ್ದು ಮುಂದೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ತಿಳಿಸಿದ್ದರು.

ಕೋವಿಡ್ 19ಗೂ ಮುನ್ನ ಮೈಕ್‍ಗಳನ್ನು ಹಸ್ತಾಂತರಿಸುವ ಮೂಲಕ ಸುದ್ದಿಗೋಷ್ಠಿ ನಡೆಯುತ್ತಿತ್ತು. ಆದರೆ ಈಗ ಪತ್ರಕರ್ತರ ಸಾಲಿನಲ್ಲಿ ಒಂದು ಕಡೆ ಮೈಕ್ ನಿಲ್ಲಿಸಲಾಗುತ್ತದೆ. ಟ್ರಂಪ್ ಯಾರಿಗೆ ಪ್ರಶ್ನೆ ಕೇಳಲು ಅವಕಾಶ ನೀಡುತ್ತಾರೋ ಅವರು ಮೈಕ್ ಮುಂದೆ ಬಂದು ಪ್ರಶ್ನೆಯನ್ನು ಕೇಳಬೇಕಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *