ನಗರ-ಗ್ರಾಮೀಣ ವಿದ್ಯಾರ್ಥಿಗಳ ಡಿಜಿಟಲ್ ಅಂತರ ಅಳಿಸಲು ಶಿಕ್ಷಣಕ್ಕೆ ಸಹಾಯ: ಡಿಸಿಎಂ

Public TV
3 Min Read

– ಸ.ಪ್ರ.ಕಾಲೇಜುಗಳಿಗೆ 12,500 ಡಿ-ಬಾಂಡೆಡ್ ಕಂಪ್ಯೂಟರ್
– ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್, ರೋಟರಿ ಕ್ಲಬ್ ಜೊತೆ ಒಪ್ಪಂದ

ಬೆಂಗಳೂರು: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿರುವ `ಶಿಕ್ಷಣಕ್ಕೆ ಸಹಾಯ’ದ (Help Educate) ಕಾರ್ಯಕ್ರಮದ ಅಂಗವಾಗಿ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 12,500 ಡಿ-ಬಾಂಡೆಡ್ ಡೆಸ್ಕ್‍ಟಾಪ್ ಕಂಪ್ಯೂಟರ್ ಗಳನ್ನು ನೀಡುವ ಬಗ್ಗೆ ಮಹತ್ವದ ಒಪ್ಪಂದ ಏರ್ಪಟ್ಟಿದೆ.

ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರ ಪರಿಕಲ್ಪನೆಯಂತೆ ಈ ಒಪ್ಪಂದ ಆಗಿದ್ದು, ನಗರ-ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ನಡುವೆ ಡಿಜಿಟಲ್ ಅಂತರವನ್ನು ಅಳಿಸಿಹಾಕಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ.

ಈ ಕುರಿತು ತಿಳುವಳಿಕೆ ಪತ್ರಕ್ಕೆ ಶುಕ್ರವಾರ ಉಪ ಮುಖ್ಯಮಂತ್ರಿಗಳ ಸಮಕ್ಷಮದಲ್ಲಿ ಸಹಿ ಹಾಕಲಾಗಿದ್ದು, ಇದರಲ್ಲಿ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ (ಡಿಸಿಟಿಇ), ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ರೋಟರಿ ಕ್ಲಬ್ ವೈಟ್‍ಫೀಲ್ಡ್ ಸೆಂಟ್ರಲ್ (ಜಿಲ್ಲೆ 1390) ವತಿಯಿಂದ ಸಹಿ ಬಿದ್ದಿದೆ.

ಈ ಕಾರ್ಯಕ್ರಮದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಮತ್ತು ವಿದ್ಯಾರ್ಥಿಗಳ ಕಲಿಕೆಯಲ್ಲಿ ವ್ಯತ್ಯಾಸವನ್ನುಂಟು ಮಾಡುವ ಪ್ರಮುಖ ಉದ್ದೇಶವನ್ನು ಹೊಂದಿದೆ. ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಡಿಸಿಎಂ ಡಾ.ಅಶ್ವಥ್ ನಾರಾಯಣ್ ಒಪ್ಪಂದಕ್ಕೆ ಅಂಕಿತ ಬಿದ್ದ ನಂತರ ಸುದ್ದಿಗಾರರಿಗೆ ತಿಳಿಸಿದರು.

ಶಿಕ್ಷಣದಲ್ಲಿ ಮಹತ್ವದ ಬದಲಾವಣೆ:
‘ಶಿಕ್ಷಣಕ್ಕೆ ಸಹಾಯ’ ಮಾಡುವ ಈ ಕಾರ್ಯಕ್ರಮದ ಅಡಿಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಕಾರ್ಪೊರೇಟ್ ಕಂಪನಿಗಳು ಮತ್ತು ದಾನಿಗಳ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಕಲಿಕೆ ಬಗ್ಗೆ ತರಬೇತಿ ನೀಡಲಾಗುವುದು. ಬೋಧಕ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮಗಳು, ಡಿಜಿಟಲ್ ಬೋಧನೆಯ ಮೂಲಕ ಆಧುನಿಕ ವಿಧಾನದಲ್ಲಿ ಪ್ರಾಧ್ಯಾಪಕರು ಅಪ್‍ಗ್ರೇಡ್ ಆಗಲು ಇದರಿಂದ ಸಾಧ್ಯವಿದೆ. ಜೊತೆಗೆ, ಡಿಜಿಟಲ್ ಕಲಿಕೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸರ್ಕಾರಿ ಕಾಲೇಜುಗಳನ್ನು ಸಜ್ಜುಗೊಳಿಸುವ ಅಂಶವೂ ಇದರಲ್ಲಿ ಸೇರಿದೆ ಎಂದರು.

ಸರ್ಕಾರಿ ಕಾಲೇಜುಗಳಿಗೆ ಸುಮಾರು 30,000 ಕಂಪ್ಯೂಟರ್‍ಗಳು ಅಗತ್ಯ ಇದ್ದು, ಆ ಪೈಕಿ ಈಗ 12,500 ಕಂಪ್ಯೂಟರ್‍ಗಳನ್ನು ಒದಗಿಸಲಾಗಿದೆ. ಸುಮಾರು 50 ಕೋಟಿ ರೂ.ಗಳ ಯೋಜನೆ ಇದಾಗಿದ್ದು, ವಿದ್ಯಾರ್ಥಿಗಳನ್ನು ಆಧುನಿಕ ಕಲಿಕೆಯತ್ತ ಕರೆದೊಯ್ಯಲು, ಡಿಜಿಟಲ್ ತಾರತಮ್ಯವನ್ನು ನಿವಾರಿಸುವ ಈ ಉದಾತ್ತ ಉದ್ದೇಶಕ್ಕೆ ಖಾಸಗಿ ಸಂಘ ಸಂಸ್ಥೆಗಳು ಸರಕಾರದ ಜತೆ ಕೈಜೋಡಿಸುತ್ತಿರುವುದು ಸಂತೋಷ ಉಂಟು ಮಾಡಿದೆ. ಅನೇಕ ದಾನಿಗಳು ಶಿಕ್ಷಣಕ್ಕೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.

ಈ ಉದಾತ್ತ ಕಾರ್ಯಕ್ರಮದ ಅಡಿಯಲ್ಲಿ ಕಾಗ್ನಿಜೆಂಟ್ ಇಂಡಿಯಾ ಪ್ರೈ. ಲಿಮಿಟೆಡ್ ಇಲಾಖೆಗೆ 12,500 ಡಿ-ಬಾಂಡೆಡ್, ಡೆಸ್ಕ್‍ಟಾಪ್ ಕಂಪ್ಯೂಟರ್ ಗಳನ್ನು ಒದಗಿಸಲು ಸ್ವಯಂ ಪ್ರೇರಿತವಾಗಿ ಮುಂದೆ ಬಂದಿದೆ. ಇದರೊಂದಿಗೆ ವಿದ್ಯಾರ್ಥಿಗಳ ಬಳಕೆಗಾಗಿ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಂಪ್ಯೂಟರ್ ಲ್ಯಾಬ್‍ಗಳನ್ನು ಸ್ಥಾಪಿಸಲಾಗುವುದು. ರೋಟರಿ ಕ್ಲಬ್ ನವರು ವಿಂಡೋಸ್ ಒಎಸ್ ಒದಗಿಸಲಿದ್ದಾರೆ. ನಂತರ ಕಂಪ್ಯೂಟರ್ ಗಳನ್ನು ನಿಗದಿತ ಕಾಲೇಜುಗಳಿಗೆ ತಲುಪಿಸುವ ಕೆಲಸ ಮಾಡಲಿದ್ದಾರೆ ಎಂದು ಡಿಸಿಎಂ ಮಾಹಿತಿ ಕೊಟ್ಟರು.

ಕಾಗ್ನಿಜೆಂಟ್ ಸಂಸ್ಥೆಯ ಬೆಂಗಳೂರು ಕೇಂದ್ರದ ಮುಖ್ಯಸ್ಥ ನವೀನ್ ರಾವ್ ಮಾತನಾಡಿ, ಕಾಲೇಜು ಶಿಕ್ಷಣ ಇಲಾಖೆಯ ನೇತೃತ್ವದ ಈ ನಿರ್ಣಾಯಕ ಕಾರ್ಯಕ್ರಮದಲ್ಲಿ ಭಾಗವಾಗಿರುವುದಕ್ಕೆ ಸಂತೋಷವಾಗಿದೆ. ಡಿಜಿಟಲ್ ಕಲಿಕೆಯನ್ನು ಉತ್ತೇಜಿಸುವ ಈ ಕಾರ್ಯಕ್ರಮ ಅರ್ಥಪೂರ್ಣವಾದದ್ದು ಎಂದರು.

ಡಿಜಿಟಲ್ ವೇದಿಕೆಯಲ್ಲಿರುವ ಸಮಗ್ರ ಕಲಿಕಾ ನಿರ್ವಹಣಾ ವ್ಯವಸ್ಥೆ ಮೂಲಕ ಕಲಿಯುವ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಾಯ ಕಾರ್ಯಕ್ರಮ ಪೂರಕ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತ ಎಂದು ರೋಟರಿ ಕ್ಲಬ್ ಜಿಲ್ಲಾ ಗರ್ವನರ್ ನಾಗೇಂದ್ರ ಪ್ರಸಾದ್ ಅವರು ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಪ್ರಭಾಕರ್ ಮಾತನಾಡಿ, ಯೋಜನೆ ಕುರಿತು ಮಾಹಿತಿ ನೀಡಿದರು. ಕಾಗ್ನಿಜೆಂಟ್ ಸಂಸ್ಥೆಯ ನಿರ್ದೇಶಕ (ಸಿಎಸ್‍ಆರ್) ದೀಪಕ್ ಪ್ರಭು, ಸಂಸ್ಥೆಯ ಸಹಾಯಕ ಉಪಾಧ್ಯಕ್ಷ ಹರಿಸಿಂಗ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *