ಧೋನಿ ವಿರುದ್ಧ 3 ಸಿಕ್ಸ್‌ ಚಚ್ಚಿ ಸೇಡು ತೀರಿಸಿಕೊಂಡ ಅಕ್ಷರ್‌ ಪಟೇಲ್‌

Public TV
2 Min Read

ಶಾರ್ಜಾ: ಕೊನೆಯ ಓವರ್‌ನಲ್ಲಿ ಮೂರು ಸಿಕ್ಸರ್‌ ಚಚ್ಚುವ ಮೂಲಕ ಅಕ್ಷರ್‌ ಪಟೇಲ್‌ ಅವರು ಧೋನಿ ವಿರುದ್ಧ ಸೇಡನ್ನು ತೀರಿಸಿಕೊಂಡಿದ್ದಾರೆ.

ಹೌದು. ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಜಯವನ್ನು ತಂದಿಟ್ಟ ಅಕ್ಷರ್‌ ಪಟೇಲ್‌ ಮೂರು ಸಿಕ್ಸ್‌ ಸಿಡಿಸುವ ಮೂಲಕ ಧೋನಿ ವಿರುದ್ಧ ಸೇಡನ್ನು ತೀರಿಸಿಕೊಂಡಿದ್ದಾರೆ ಎಂಬ ಅಭಿಪ್ರಾಯವನ್ನು ನೆಟ್ಟಿಗರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

2016 ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಐಪಿಎಲ್‌ನಿಂದ ಅಮಾನತುಗೊಂಡಿದ್ದ ಹಿನ್ನೆಲೆಯಲ್ಲಿ ಧೋನಿ ರೈಸಿಂಗ್‌ ಪುಣೆ ಸೂಪರ್‌ ಜೈಂಟ್ಸ್‌ ತಂಡವನ್ನು ಮುನ್ನಡೆಸುತ್ತಿದ್ದರು. ಈ ವೇಳೆ ಅಕ್ಷರ್‌ ಪಟೇಲ್‌ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಪರ ಆಡುತ್ತಿದ್ದರು.

ವಿಶಾಖಪಟ್ಟಣದಲ್ಲಿ ಮೇ 21 ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ 7 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿತ್ತು.

173 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಪುಣೆ ತಂಡಕ್ಕೆ ಕೊನೆಯ ಓವರ್‌ನಲ್ಲಿ 23 ರನ್‌ಗಳು ಬೇಕಿತ್ತು. ಅಕ್ಷರ್‌ ಪಟೇಲ್‌ ಎಸೆದ ಈ ಓವರ್‌ನಲ್ಲಿ 3 ಸಿಕ್ಸ್‌, ಒಂದು ಬೌಂಡರಿ ಹೊಡೆಯುವ ಮೂಲಕ ಧೋನಿ 23 ರನ್‌ ಚಚ್ಚಿದ್ದರು. ಕೊನೆಯ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು. ಧೋನಿ ಔಟಾಗದೇ 64 ರನ್‌(32 ಎಸೆತ, 4 ಬೌಂಡರಿ, 5 ಸಿಕ್ಸರ್‌) ಹೊಡೆದು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

https://twitter.com/Romeo_theboss/status/1317547044068679682

ಅಂದು ಮೂರು ಧೋನಿ 3 ಸಿಕ್ಸ್‌ ಹೊಡೆದಿದ್ದರೆ ಶನಿವಾರದ ಪಂದ್ಯದಲ್ಲಿ ಅಕ್ಷರ್‌ ಪಟೇಲ್‌ ಕೊನೆಯ ಓವರಿನಲ್ಲಿ 3 ಸಿಕ್ಸ್‌ ಹೊಡೆದಿದ್ದರು. 180 ರನ್‌ ಗಳ ಗುರಿಯನ್ನು ಪಡೆದ ಡೆಲ್ಲಿ ಕೊನೆಯ 12 ಎಸೆತಗಳಲ್ಲಿ 21 ರನ್‌ ಬೇಕಿತ್ತು. 19ನೇ ಓವರ್‌ ಎಸೆದ ಕರ್ರನ್‌ 4 ರನ್‌ ನೀಡಿ 1 ವಿಕೆಟ್‌ ಪಡೆದರು. ಕೊನೆಯ 6 ಎಸೆತದಲ್ಲಿ 17 ರನ್‌ ಬೇಕಿತ್ತು.

ಕೊನೆಯ ಓವರ್‌ ಎಸೆದ ಜಡೇಜಾ ಮೊದಲ ಎಸೆತವನ್ನು ವೈಡ್‌ ಹಾಕಿದರು. ನಂತರದ ಎಸೆತದಲ್ಲಿ ಒಂದು ರನ್‌ ಬಂತು. ಸ್ಟ್ರೈಕ್‌ಗೆ ಅಕ್ಷರ್‌ ಪಟೇಲ್‌ ಬಂದರು. ನಂತರ 2 ಎಸೆತಗಳನ್ನು ಅಕ್ಷರ್‌ ಪಟೇಲ್‌ ಸಿಕ್ಸರ್‌ಗೆ ಅಟ್ಟಿದರು. 4ನೇ ಎಸೆತದಲ್ಲಿ 2 ರನ್‌ ಬಂತು. ಐದನೇಯ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಪರಿಣಾಮ ಡೆಲ್ಲಿ ತಂಡ 5 ವಿಕೆಟ್‌ಗಳ ಜಯವನ್ನು ಪಡೆದು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

29 ಎಸೆತಗಳಲ್ಲಿ 50 ರನ್‌ ಹೊಡೆದ ಶಿಖರ್‌ ಧವನ್‌ ಅಜೇಯ 101 ರನ್‌(58 ಎಸೆತ, 14 ಬೌಂಡರಿ, 1ಸಿಕ್ಸರ್‌) ಚಚ್ಚಿದರು. ಸ್ಫೋಟಕ ಬ್ಯಾಟಿಂಗ್‌ ಮಾಡಿ ಪಂದ್ಯದ ದಿಕ್ಕನ್ನೇ ಬದಲಾಯಿಸಿದ ಅಕ್ಷರ್‌ ಪಟೇಲ್‌ 21 ರನ್‌(5 ಎಸೆತ, 3 ಸಿಕ್ಸರ್‌) ಹೊಡೆದರು.

Share This Article
Leave a Comment

Leave a Reply

Your email address will not be published. Required fields are marked *