ಧೋನಿ ನನ್ನ ದೊಡ್ಡಣ್ಣನಂತೆ – ಕೊನೆಗೂ ಮೌನ ಮುರಿದ ರೈನಾ

Public TV
2 Min Read

– ಐಪಿಎಲ್‍ನಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಪವರ್ ಹಿಟ್ಟರ್

ನವದೆಹಲಿ: ಮಹಿಭಾಯ್ ನನ್ನ ದೊಡ್ಡಣ್ಣನಂತೆ ಎಂದು ಹೇಳುವ ಮೂಲಕ ಭಾರತದ ಮಾಜಿ ಆಟಗಾರ ಸುರೇಶ್ ರೈನಾ ಅವರು ಕಟ್ಟುಕಥೆಗಳಿಗೆ ತೆರೆ ಎಳೆದಿದ್ದಾರೆ.

2020ರ ಐಪಿಎಲ್ ಆಡಲೆಂದು ಯುಎಇಗೆ ತೆರೆಳಿದ್ದ ರೈನಾ, ವೈಯಕ್ತಿಕ ಕಾರಣಗಳಿಂದ ಭಾರತಕ್ಕೆ ವಾಪಸ್ ಆಗಿದ್ದರು. ಐಪಿಎಲ್‍ನಲ್ಲಿ ಎರಡನೇ ಅಧಿಕ ರನ್ ಸಿಡಿಸಿದ ಆಟಗಾರ ಹೊರಬಂದಿರುವುದಕ್ಕೆ ಧೋನಿಯವರ ಜೊತೆ ರೂಮ್ ವಿಚಾರವಾಗಿ ಭಿನ್ನಾಭಿಪ್ರಾಯ ಇದ್ದದೇ ಕಾರಣ ಎಂದು ಹೇಳಲಾಗಿತ್ತು. ಆದರೆ ಈಗ ಈ ಎಲ್ಲ ಗಾಳಿಸುದ್ದಿಗೆ ರೈನಾ ಅವರು ತೆರೆ ಎಳೆದಿದ್ದಾರೆ.

ಈ ವಿಚಾರವಾಗಿ ರಾಷ್ಟ್ರೀಯ ಮಾಧ್ಯಮವೊಂದರ ಜೊತೆ ಮಾತನಾಡಿರುವ ರೈನಾ, ಮಹಿಭಾಯ್ ನನ್ನ ದೊಡ್ಡಣ್ಣನಂತೆ. ಇವೆಲ್ಲ ಕಟ್ಟುಕಥೆ ಎಂದಿದ್ದಾರೆ. ಜೊತೆಗೆ ನಾನು ಐಪಿಎಲ್‍ನಿಂದ ಹೊರಬರಲು ಕೊರೊನಾ ವೈರಸ್ ಕಾರಣ, ಸದ್ಯ ದುಬೈನಲ್ಲಿ ಪರಿಸ್ಥಿತಿ ಸರಿಯಿಲ್ಲ. ನನಗೆ ಕುಟುಂಬವಿದೆ. ಎರಡು ಮಕ್ಕಳು, ವಯಸ್ಸಾದ ಪೋಷಕರು ಇದ್ದಾರೆ. ಇದೆಲ್ಲದರ ನಡುವೆ ನಾನು ಅಲ್ಲಿ ಉಳಿಯಲು ಆಗಲಿಲ್ಲ ಎಂದು ರೈನಾ ಹೇಳಿದ್ದಾರೆ. ಇದನ್ನು ಓದಿ: 2020ರ ಐಪಿಎಲ್‍ನಿಂದ ದೂರವಾದ ರೈನಾಗೆ ಎಷ್ಟು ಕೋಟಿ ನಷ್ಟ?

ನಾನು ತೆಗೆದುಕೊಂಡ ನಿರ್ಧಾರ ಬಹಳ ಕಠಿಣವಾಗಿತ್ತು. ಆದರೆ ದುಬೈನಲ್ಲಿ ನನ್ನ ಮಕ್ಕಳ ಆರೋಗ್ಯದ ಬಗ್ಗೆ ನನಗೆ ಬಹಳ ಚಿಂತೆಯಾಗಿತ್ತು. ಅದಕ್ಕೆ ನಾನು ವಾಪಸ್ ಬರುವ ನಿರ್ಧಾರ ಮಾಡಿದ್ದೇನೆ. ನಾನೂ ಯಾವಗಲೂ ಸಿಎಸ್‍ಕೆ ಆಟಗಾರನೇ, ಚೆನ್ನೈ ತಂಡ ನನ್ನ ಕುಟುಂಬವಿದ್ದಂತೆ. ಅಲ್ಲಿನ ಪರಿಸ್ಥಿತಿ ತಿಳಿಯಾದರೆ, ನಾನು ಮತ್ತೆ ಹೋಗುತ್ತೇನೆ. ಅಲ್ಲಿನ ಬಾಗಿಲು ನನಗೆ ಮುಚ್ಚಿಲ್ಲ ಎಂದು ರೈನಾ ಮತ್ತೆ ವಾಪಸ್ ಹೋಗುವ ಬಗ್ಗೆ ಮಾತನಾಡಿದ್ದಾರೆ. ಇದನ್ನು ಓದಿ: ನನ್ನ ಸೋದರ ಮಾವನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ: ಸುರೇಶ್ ರೈನಾ

ಐಪಿಎಲ್‍ಗಾಗಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದ ಚೆನ್ನೈ ತಂಡ ಅಗಸ್ಟ್ 21ರಂದು ಯುಎಇಗೆ ತೆರಳಿತ್ತು. ಆದರೆ 6 ದಿನ ಕ್ವಾರಂಟೈನ್‍ನಲ್ಲಿ ಇದ್ದ ಸಿಎಸ್‍ಕೆ ತಂಡದ ಇಬ್ಬರು ಆಟಗಾರರು ಮತ್ತು 11 ಮಂದಿ ಸಹಾಯ ಸಿಬ್ಬಂದಿಗೆ ಕೊರೊನಾ ವೈರಸ್ ತಗುಲಿತ್ತು. ಇದು ಗೊತ್ತಾದ ದಿನವೇ ರೈನಾ ಅವರು ಕೂಡ ವೈಯಕ್ತಿಕ ಕಾರಣವನ್ನು ಕೊಟ್ಟು ಭಾರತಕ್ಕೆ ವಾಪಸ್ ಆಗಿದ್ದರು. ಇದು ಚೆನ್ನೈ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಆಗಿತ್ತು.

Share This Article
Leave a Comment

Leave a Reply

Your email address will not be published. Required fields are marked *