ಧುಮ್ಮಿಕ್ಕಿ ಹರಿಯುತ್ತಿರೋ ಗೋಕಾಕ್ ಜಲಪಾತ

Public TV
1 Min Read

– ಲೋಳಸೂರ ಸೇತುವೆ ಜಲಾವೃತ

ಬೆಳಗಾವಿ: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇತ್ತ ಜಿಲ್ಲೆಯ ಗೋಕಾಕ್ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಘಟಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ಗೋಕಾಕ್‍ನಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಜೊತೆ ಗೋಕಾಲ್ ಫಾಲ್ಸ್ ಧುಮ್ಮಿಕ್ಕಿ ಹರಿಯುತ್ತಿದ್ದು, ಅನೇಕರು ಜಲಪಾತವನ್ನು ನೋಡಲು ಹೋಗಿದ್ದಾರೆ.

ಈಗಾಗಲೇ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಜಲಾಶಯದಿಂದ ಘಟಪ್ರಭಾ ನದಿಗೆ 40 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಗೋಕಾಕ್-ಘಟಪ್ರಭಾ ಸಂಪರ್ಕಿಸುವ ಲೋಳಸೂರ ಸೇತುವೆ ಜಲಾವೃತವಾಗಿದೆ. ಜೊತೆಗೆ ಗೋಕಾಕ್ ನಗರದ ಹೊರವಲಯದಲ್ಲಿನ ದನದಪೇಟೆಗೆ ನೀರು ನುಗ್ಗಿದೆ. ಮನೆ ಹಾಗೂ ಅಂಗಡಿಗಳಿಗೆ ನುಗ್ಗಿದ ನೀರು.

ಇತ್ತ ಮಲಪ್ರಭಾ ನದಿ ಪ್ರವಾಹಕ್ಕೆ ರಾಮದುರ್ಗ ಸುನ್ನಾಳ, ಕಿಲಬನೂರು ಹಾಗೂ ಮುಲಂಗಿ ಗ್ರಾಮಗಳು ಅಕ್ಷರಶಃ ನಡುಗಡ್ಡೆಗಳಾಗಿವೆ. ಖಾನಾಪುರ ತಾಲೂಕಿನಲ್ಲಿ 12, ಬೆಳಗಾವಿ ತಾಲೂಕಿನಲ್ಲಿ 5 ಹಾಗೂ ರಾಮದುರ್ಗ ಸವದತ್ತಿ ತಾಲೂಕಿನಲ್ಲಿ ತಲಾ 6 ಸೇತುವೆಗಳು ಮುಳುಗಿವೆ. ಬೆಳಗಾವಿ-ಗೋವಾ ಹಾಗೂ ಬೆಳಗಾವಿ-ಬಾಗಲಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆಯಾಗಿದ್ದು, ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಲಾಗಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಸಹ್ಯಾದ್ರಿ ಪರ್ವತಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ದಾಖಲೆ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಇದರಿಂದ ಜಿಲ್ಲೆಯ ಏಳು ನದಿಗಳು, ಬೆಳಗಾವಿ ನಗರದಲ್ಲಿನ ಬಳ್ಳಾರಿ ನಾಲಾ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಪ್ರವಾಹ ಪರಿಸ್ಥಿತಿ ಎದುರಿಸಲು ಬೋಟಗಳು, ಟಾಸ್ಕ್ ಪೋರ್ಸ್ ಜೊತೆ ಜಿಲ್ಲಾಡಳಿತ ಸನ್ನದ್ಧವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *