ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡದ ಸರ್ಕಾರದ ಆದೇಶಕ್ಕೆ ವಿಶ್ವ ಹಿಂದು ಪರಿಷದ್ ಆಕ್ರೋಶ

Public TV
1 Min Read

ಮಂಗಳೂರು: ಕೊರೊನಾ ನಿಯಂತ್ರಿಸಲು ರಾಜ್ಯಸರ್ಕಾರ ಆದೇಶ ಹೊರಡಿಸಿದ್ದು ರಾಜಕೀಯ, ಮದುವೆ ಸಮಾರಂಭಗಳಿಗೆ ಅನುಮತಿ ನೀಡಿ ಧಾರ್ಮಿಕ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಿರುವುದನ್ನು ವಿಶ್ವ ಹಿಂದು ಪರಿಷದ್ ವಿರೋಧಿಸಿದೆ.

ಕಳೆದ 2 ತಿಂಗಳುಗಳಲ್ಲಿ ಕರಾವಳಿಯಲ್ಲಿ ಸಾಕಷ್ಟು ಕಡೆ ದೈವಾರಾಧನೆಯ ನೇಮ, ಕೋಲಗಳು, ಜಾತ್ರೆ, ನಾಗಮಂಡಲ, ಬ್ರಹ್ಮಕಲಶ, ಯಕ್ಷಗಾನದಂತಹ ಧಾರ್ಮಿಕ ಕಾರ್ಯಕ್ರಮಗಳ ದಿನಾಂಕ ನಿಗದಿಯಾಗಿದ್ದು ತಯಾರಿ ಕೂಡ ನಡೆದಿರುತ್ತದೆ. ಈಗಾಗಲೇ ಕೆಲವು ದೇವಸ್ಥಾನಗಳ ಬ್ರಹ್ಮಕಲಶ ಪ್ರಾರಂಭವಾಗಿದ್ದು, ಆದರೆ ತಕ್ಷಣ ಸರಕಾರ ಕೋವಿಡ್ ಕಾರಣದಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿರುವುದು ಸರಿಯಲ್ಲ.

ಈ ಹಿನ್ನೆಲೆಯಲ್ಲಿ ಧಾರ್ಮಿಕ ಮುಖಂಡರುಗಳಾದ ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮಿಜಿ, ವಿಎಚ್ ಪಿ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಬಿಜೆಪಿಯ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ್, ಜಗದೀಶ್ ಶೇಣವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಜಿಲ್ಲೆಯಲ್ಲಿನ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮನವರಿಕೆ ಮಾಡಿದ್ದಾರೆ.

ಸರ್ಕಾರ ತಕ್ಷಣ ಆದೇಶವನ್ನು ಹಿಂಪಡೆದು ಕೋವಿಡ್ ನಿಯಮಾವಳಿ ಪ್ರಕಾರ ಸೀಮಿತ ಸಂಖ್ಯೆಯಲ್ಲಿ ಸಾಮಾಜಿಕ ಅಂತರ ಕಾಪಾಡಿ, ರಾಜಕೀಯ, ಮದುವೆ ಕಾರ್ಯಕ್ರಮದ ರೀತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡಬೇಕೆಂದು ಈ ಮೂಲಕ ಸರ್ಕಾರಕ್ಕೆ ವಿಶ್ವ ಹಿಂದು ಪರಿಷತ್ ಒತ್ತಾಯ ಮಾಡುತ್ತದೆ ಎಂದು ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *