ಧಾರವಾಡದಲ್ಲಿ ಕೋವಿಡ್ ಪರಿಸ್ಥಿತಿ ಎದುರಿಸಲು 7 ಕೋಟಿ ಸಿಎಸ್‍ಆರ್ ನಿಧಿ ಸಂಗ್ರಹ

Public TV
1 Min Read

ಹುಬ್ಬಳ್ಳಿ: ಕೋಲ್ ಇಂಡಿಯಾ ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್, ಟಾಟಾ, ಏಕಸ್ ಸೇರಿದಂತೆ ಹಲವು ಕಂಪನಿಗಳು ಸಿಎಸ್‍ಆರ್ ನಿಧಿಯಡಿ ಜಿಲ್ಲೆಯಲ್ಲಿ ಕೋವಿಡ್ ತುರ್ತು ಪರಿಸ್ಥಿತಿ ಎದುರಿಸಲು 7 ಕೋಟಿ ರೂಪಾಯಿ ಧನ ಸಹಾಯ ನೀಡಿವೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.

ಹುಬ್ಬಳ್ಳಿಯ ಖಾಸಗಿ ಹೋಟೆಲ್‍ನಲ್ಲಿ ನಡೆದ ಉದ್ಯಮಿದಾರರು ಹಾಗೂ ಕೈಗಾರಿಕಾ ಸಂಘದ ಪ್ರತಿನಿಧಿಗಳೊಂದಿಗೆ ಕೋವಿಡ್-19 ನಿಯಂತ್ರಣ ಮತ್ತು ಸಿಎಸ್‍ಆರ್ ನಿಧಿ ಬಳಕೆ ಕುರಿತು ನಡೆದ ಸಭೆಯಲ್ಲಿ ಡಿಸಿ ಮಾತನಾಡಿದರು.

ಧಾರವಾಡ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಆರೋಗ್ಯ ಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಂಪನಿಗಳ ಸಿಎಸ್‍ಆರ್ ನಿಧಿಯನ್ನು ಬಳಸಿಕೊಳ್ಳಲಾಗುತ್ತದೆ. ಕೋವಿಡ್ ಕೇರ್ ಸೆಂಟರ್ ಹಾಗೂ ಆಸ್ಪತ್ರೆಗಳಿಗೆ ಅಗತ್ಯವಿರುವ ವೆಂಟಿಲೇಟರ್, ಬೆಡ್, ಆಕ್ಸಿ, ಪಲ್ಸ್ ಮೀಟರ್, ಆಕ್ಸಿಜನ್, ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು.

ಹುಬ್ಬಳ್ಳಿ-ಧಾರವಾಡ ಉತ್ತರ ಕರ್ನಾಟಕದ ಪ್ರಮುಖ ಕೈಗಾರಿಕಾ ನಗರಗಳಾಗಿವೆ. ಕಂಪನಿಗಳು ನಿಧಿ ನೀಡಲು ಮುಂದೆ ಬಂದರೆ ಜಿಲ್ಲಾಡಳಿತ ಸರಿಯಾದ ರೀತಿಯಲ್ಲಿ ನಿಧಿ ಬಳಕೆಗೆ ಅನುವುಮಾಡಿಕೊಡಲಿದೆ ಎಂದರು.

ಲಕ್ಷಣ ರಹಿತ ಕೋವಿಡ್ ರೋಗಿಗಳಿಗಾಗಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಇಲ್ಲಿಗೆ ಆಟದ ಸಾಮಾನುಗಳು, ಪುಸ್ತಕ, ಟಿವಿ ಸೆಟ್, ಆರ್‍ಓ ಪ್ಲಾಂಟ್, ಬಿಸಿ ನೀರು ತಯಾರಿಸುವ ಘಟಕಗಳನ್ನು ಸಿಎಸ್‍ಆರ್ ನಿಧಿಯಡಿ ಕಂಪನಿಗಳು ನೀಡಬಹುದು. ಸಾಂಕ್ರಾಮಿಕ ರೋಗದ ತರುವಾಯ ಇವು ವಿದ್ಯಾರ್ಥಿಗಳಿಗೆ ಬಳಕೆಯಾಗಲಿವೆ. ಕಂಪನಿಗಳು ಇಚ್ಛಿಸಿದರೆ ಜಿಲ್ಲಾಡಳಿತದ ವತಿಯಿಂದ ನೌಕರರ ರ್ಯಾಪಿಡ್ ಆಂಟಿಜನ್ ಟೆಸ್ಟ್ ನಡೆಸಲಾಗುವುದು ಎಂದರು.

Share This Article
Leave a Comment

Leave a Reply

Your email address will not be published. Required fields are marked *