ಧವನ್ ಶತಕ ವ್ಯರ್ಥ- 5 ವಿಕೆಟ್ ಗೆಲುವು ಪಡೆದ ರಾಹುಲ್ ಪಡೆ

Public TV
4 Min Read

– ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ ಕಿಂಗ್ಸ್
– ಐಪಿಎಲ್ ಹೊಸ ಇತಿಹಾಸ ಸೃಷ್ಟಿಸಿದ ಧವನ್

ಅಬುಧಾಬಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಅಜೇಯ ಶತಕ ಗಳಿಸಿದ್ದ ಧವನ್ ಏಕಾಂಗಿ ಹೋರಾಟ ವ್ಯರ್ಥವಾಗಿದ್ದು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಡೆಲ್ಲಿ ತಂಡದ ವಿರುದ್ಧ ಕೆಎಲ್ ರಾಹುಲ್ ಪಡೆ 5 ವಿಕೆಟ್ ಜಯವನ್ನು ಪಡೆದಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಇದರೊಂದಿಗೆ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿಡಲು ಯಶಸ್ವಿಯಾಗಿದೆ.

165 ರನ್ ಗಳ ಮೊತ್ತವನ್ನು ಬೆನ್ನಟ್ಟಿದ್ದ ಕಿಂಗ್ಸ್ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಪೊರನ್ ಅರ್ಧ ಶತಕ ಗಳಿಸಿ ಮಿಂಚಿಸಿದರೆ, 13 ಎಸೆತಗಳಲ್ಲಿ 29 ಗಳಿಸಿದ ಗೇಲ್ ತಂಡದ ಗೆಲುವಿಗೆ ಕಾಣಿಕೆ ನೀಡಿದ್ದರು. ಇದರೊಂದಿಗೆ 19 ಓವರ್ ಗಳಲ್ಲೇ 5 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿದ ಪಂಜಾಬ್ ತಂಡ ಗೆಲುವು ಪಡೆಯಿತು.

ಸವಾಲಿನ ಮೊತ್ತ ಬೆನ್ನಟ್ಟಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 2ನೇ ಓವರಿನಲ್ಲೇ ನಾಯಕ ಕೆಎಲ್ ರಾಹುಲ್ ಅವರನ್ನು ಕಳೆದುಕೊಂಡಿತ್ತು. ಆ ಬಳಿಕ ಕಣಕ್ಕಿಳಿದ ಗೇಲ್ ಎಂದಿನಂತೆ ತಮ್ಮ ಹೊಡಿಬಡಿ ಆಟದ ಮೂಲಕ ಸ್ಫೋಟಕ ಪ್ರದರ್ಶನ ನೀಡಿದರು. ತುಷಾರ್ ದೇಶಪಾಂಡೆ ಎಸೆತ 5ನೇ ಓವರಿನಲ್ಲಿ 2 ಸಿಕ್ಸರ್, 3 ಬೌಂಡರಿಗಳೊಂದಿಗೆ 26 ರನ್ ಸಿಡಿಸಿದ್ದರು. ಈ ಬಾರಿಯ ಟೂರ್ನಿಯ ಪವರ್ ಪ್ಲೇ ಓವರ್ ಒಂದರಲ್ಲಿ ಮೂಡಿಬಂದ ಅತ್ಯಧಿಕ ರನ್ ಇದಾಗಿದೆ. ಇದಕ್ಕೂ ಮುನ್ನ ಸಿಎಸ್‍ಕೆ ವಿರುದ್ಧ ಖಲೀಲ್ 22 ರನ್ ಬಿಟ್ಟುಕೊಟ್ಟಿದ್ದರು. ಆದರೆ ಸ್ಫೋಟಕ ಆಟದೊಂದಿಗೆ ಮುನ್ನುತ್ತಿದ್ದ ಗೇಲ್‍ರನ್ನು ಕ್ಲೀನ್ ಬೌಲ್ಡ್ ಮಾಡಿದ ಅಶ್ವಿನ್ ಪಂಜಾಬ್ ತಂಡಕ್ಕೆ ಭಾರೀ ಹೊಡೆತ ನೀಡಿದರು. ಇದರ ಬೆನ್ನಲ್ಲೇ ಮಯಾಂಕ್ ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಈ ವೇಳೆ 56 ರನ್ ಗಳಿಸಿದ್ದ ಪಂಜಾಬ್ ಪ್ರಮುಖ 3 ವಿಕೆಟ್ ಕಳೆದುಕೊಂಡಿತ್ತು.

ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಆಸರೆಯಾದ ಪೊರನ್ ಅರ್ಧ ಶತಕ ಗಳಿಸಿ ತಂಡವನ್ನು ಗೆಲುವಿನ ಸನಿಹ ತಂದರು. ಪೊರನ್ ಉತ್ತಮ ಸಾಥ್ ನೀಡಿದ ಮ್ಯಾಕ್ಸ್ ವೇಲ್ 32 ಗಳಿಸಿ ಔಟಾದರು. ಅಂತಿಮ ಹಂತದಲ್ಲಿ 24 ಎಸೆತಗಳಲ್ಲಿ 17 ರನ್ ಗಳಿಸಬೇಕಿದ್ದ ಸಂದರ್ಭದಲ್ಲಿ ಒಂದಾದ ದೀಪಕ್ ಹೂಡಾ 15 ರನ್, ನೀಶಾಮ್ 10 ರನ್ ಗಳಿಸಿ 19 ಓವರಿನ ಕೊನೆಯ ಎಸೆದಲ್ಲಿ ತಂಡಕ್ಕೆ ತಂದುಕೊಟ್ಟರು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಶಿಖರ್ ಧವನ್ ಶತಕ ಸಿಡಿಸಿ ತಂಡ ಬೃಹತ್ ಮೊತ್ತ ಗಳಿಸಲು ಕಾರಣವಾದರು. ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಗಳಿಸಿದ ಧವನ್ ಪಂದ್ಯದಲ್ಲಿ 61 ಎಸೆತಗಳಲ್ಲಿ 12 ಬೌಂಡರಿ, 3 ಸಿಕ್ಸರ್ ಗಳೊಂದಿಗೆ 106 ರನ್ ಗಳಿಸಿ ಅಜೇಯರಾಗಿ ಉಳಿದರು. ಡೆಲ್ಲಿ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತ್ತು.

ಪೃಥ್ವಿ ಶಾ ರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಧವನ್ ಮತ್ತೊಮ್ಮೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. ಇನ್ನಿಂಗ್ಸ್ ನ 4ನೇ ಓವರಿನಲ್ಲಿ ಪೃಥ್ವಿ ಶಾ ವಿಕೆಟ್ ಒಪ್ಪಿಸಿದರೆ, ಆ ಬಳಿಕ ನಾಯಕ ಅಯ್ಯರ್ ಮತ್ತು ರಿಷಬ್ ಪಂತ್ ತಲಾ 14 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು. ಸ್ಟೋಯಿನ್ಸ್ ಕೂಡ 9 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ತಮ್ಮ ಆಟವನ್ನು ಮುಂದುವರಿಸಿದ ಧವನ್ ಐಪಿಎಲ್ ವೃತ್ತಿ ಜೀವನದಲ್ಲಿ 2ನೇ ಶತಕ ಪೂರ್ಣಗೊಳಿಸಿದರು. ಉಳಿದಂತೆ ಹೆಟ್ಮಾಯರ್ ಒಂದು ಸಿಕ್ಸರ್ ಸಿಡಿಸಿ 10 ರನ್ ಗಳಿಸಿದರು.

ಶಾರ್ಜಾ ಕ್ರೀಡಾಂಗಣದಲ್ಲಿ ಚೆನ್ನೈ ವಿರುದ್ಧ ಶತಕ ಸಿಡಿಸಿದ್ದ ಧವನ್, ಪಂಜಾಬ್ ವಿರುದ್ಧ ಅಜೇಯ ಶತಕ ಗಳಿಸಿದ್ದು, 13 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬ್ಯಾಟ್ಸ್ ಮನ್ ಬ್ಯಾಕ್ ಟು ಬ್ಯಾಕ್ ಗಳಿಸಿದ ಸಾಧನೆ ಇದಾಗಿದೆ. ಇಂದಿನ ಪಂದ್ಯದಲ್ಲಿ ಧವನ್ 106 ಗಳಿಸಿದರೇ, ಡೆಲ್ಲಿ ಪರ ಬ್ಯಾಟ್ ಮಾಡಿದ ಎಲ್ಲಾ ಆಟಗಾರರು ಒಟ್ಟಾರೆ 54 ರನ್ ಕೆಲ ಹಾಕಿದ್ದರು. ಪಂಜಾಬ್ ಪರ ಶಮಿ 2, ಮ್ಯಾಕ್ಸ್ ವೇಲ್, ಜೇಮ್ಸ್ ನಿಶಾಮ್, ಅಶ್ವಿನ್ ತಲಾ ವಿಕೆಟ್ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *