ಧರ್ಮ ಸಂಕಟದಲ್ಲಿದ್ದೀವಿ- ತೈಲ ಬೆಲೆ ಏರಿಕೆಗೆ ವಿತ್ತ ಸಚಿವರ ಪ್ರತಿಕ್ರಿಯೆ

Public TV
2 Min Read

ನವದೆಹಲಿ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆಯ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸುವ ಸಚಿವೆ ನಿರ್ಮಲಾ ಸೀತಾರಾಮನ್, ನಾವು ಧರ್ಮ ಸಂಕಟದಲ್ಲಿದ್ದೇವೆ ಎಂದು ಮತ್ತೊಮ್ಮೆ ತಮ್ಮ ಅಸಹಾಯಕತೆಯನ್ನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅರ್ಥವ್ಯವಸ್ಥೆಯ ವೃದ್ಧಿ ಆಗುತ್ತಿರುವ ಸುಳಿವು ಸಿಗ್ತಿದೆ ಎಂದು ಹೇಳಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿತ್ತ ಸಚಿವರು, ನಾವು ದೇಶದ ಯುವಕರನ್ನ ಗಮನದಲ್ಲಿರಿಸಿ ಬಜೆಟ್ ಮಂಡಿಸಿದ್ದೇವೆ. ಭವಿಷ್ಯದ 20 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗಿದೆ. ಲಾಕ್‍ಡೌನ್ ನಿಂದಾಗಿ ಕುಸಿತವಾಗಿದ್ದ ಅರ್ಥ ವ್ಯವಸ್ಥೆ ಚೇತರಿಕೆ ಕಾಣುತ್ತಿರುವ ಲಕ್ಷಣಗಳು ನಮ್ಮ ಮುಂದಿವೆ. ಹಲವು ಉದ್ದಿಮೆದಾರರ ಜೊತೆ ಮಾತನಾಡಿದ್ದು, ಎಲ್ಲ ಕಾರ್ಖಾನೆಗಳು ಪೂರ್ಣ ಕಾರ್ಮಿಕರೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಕಂಪನಿಗಳು ತಮ್ಮ ಕಾರ್ಯದ ವ್ಯಾಪ್ತಿಯನ್ನ ವಿಸ್ತರಿಸುವತ್ತ ಹೆಜ್ಜೆ ಇರಿಸಿವೆ ಎಂದರು.

ಐಐಟಿ ಮತ್ತು ಐಐಎಂ ಪ್ರಕಾರ ದೇಶದಲ್ಲಿ ಉದ್ಯೋಗ ಸೃಷ್ಟಿಯ ದರ ವೃದ್ಧಿಯಾಗಿದೆ. ಲಾಕ್‍ಡೌನ್ ಸ್ವಗ್ರಾಮಗಳಿಗೆ ಹಿಂದಿರುಗಿದ್ದ ಪ್ರವಾಸಿ ಕಾರ್ಮಿಕರು ನಗರಗಳತ್ತ ಹೊರಟಿದ್ದಾರೆ. ಬ್ಯಾಂಕುಗಳು ಹೋಮ್ ಲೋನ್ ಮೇಲಿನ ಬಡ್ಡಿ ದರ ಇಳಿಕೆ ಮಾಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಲೆ ಏರಿಕೆ ನಿಯಂತ್ರಣ ಸರ್ಕಾರದಿಂದ ಸಾಧ್ಯವಿಲ್ಲ- ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ತೈಲ ಬೆಲೆ ದಿನೇ ದಿನೇ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಹಣಕಾಸು ಸಚಿವಾಲಯವು ಚಿಂತನೆ ನಡೆಸಿದ್ದು, ಮಾರ್ಚ್ ಮಧ್ಯದಲ್ಲಿ ಬೆಲೆ ಇಳಿಕೆಯ ಸಿಹಿ ಸುದ್ದಿ ಸಿಗಬಹುದು. ತೈಲ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಏರತೊಡಗಿದೆ. ಹೀಗಾಗಿ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಮೂವರು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದನ್ನೂ ಓದಿ: ಸಾಮಾನ್ಯ ಜನರೇ ನಮ್ಮ ಬಂಡವಾಳಶಾಹಿಗಳು- ರಾಹುಲ್‌ಗೆ ಸೀತಾರಾಮನ್ ತಿರುಗೇಟು

ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಗ್ರಾಹಕ ದೇಶವಾಗಿರುವ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ ಶೇ.60 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ತೈಲ ಬೆಲೆ ವಿಶ್ವಾದ್ಯಂತ ಇಳಿಕೆಯಾಗಿತ್ತು. ಆದರೆ ಭಾರತದಲ್ಲಿ ಅಬಕಾರಿ ಸುಂಕ ಹೆಚ್ಚಳ ಮಾಡಿದ್ದರಿಂದ ಬೆಲೆ ಇಳಿಕೆಯ ಲಾಭ ಗ್ರಾಹಕರಿಗೆ ಸಿಕ್ಕಿರಲಿಲ್ಲ. ಇದನ್ನೂ ಓದಿ: ಕೊರೊನಾ ಬಿಕ್ಕಟ್ಟು ದೈವೇಚ್ಛೆ: ನಿರ್ಮಲಾ ಸೀತಾರಾಮನ್

Share This Article
Leave a Comment

Leave a Reply

Your email address will not be published. Required fields are marked *