ಧರ್ಮಸ್ಥಳ ಯಕ್ಷಗಾನ ಮಂಡಳಿ – ಸೇವೆ ಬಯಲಾಟ ಪ್ರದರ್ಶನ ಪ್ರಾರಂಭ

Public TV
1 Min Read

ಮಂಗಳೂರು: ಇನ್ನೂರು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯು ಶುಕ್ರವಾರದಿಂದ ಯಕ್ಷಗಾನ ಸೇವೆ ಬಯಲಾಟ ಪ್ರದರ್ಶನ ಪ್ರಾರಂಭಿಸಿದೆ.

ಕಳೆದ ಐದು ವರ್ಷಗಳಿಂದ ಪ್ರತಿದಿನ ಸಂಜೆ 7 ರಿಂದ ರಾತ್ರಿ 12ರ ವರೆಗೆ ಕಾಲಮಿತಿ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದು ಇದಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಕಲಾವಿದರಿಗೂ ವಿಶ್ರಾಂತಿ ಹಾಗೂ ಹೆಚ್ಚಿನ ಅಧ್ಯಯನ, ಅಭ್ಯಾಸಕ್ಕೆ ಅವಕಾಶವಿದೆ. ಉದ್ಯೋಗದಲ್ಲಿರುವವರು, ವ್ಯವಹಾರ ನಡೆಸುವವರು ಹಾಗೂ ವಿದ್ಯಾರ್ಥಿಗಳು ಕೂಡಾ ಕಾಲಮಿತಿ ಯಕ್ಷಗಾನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2021ರ ಮೇ 23 ರ ವರೆಗೆ ಧರ್ಮಸ್ಥಳ ಭಕ್ತರು ಹಾಗೂ ಅಭಿಮಾನಿಗಳು ತಮ್ಮ ಊರಿನಲ್ಲಿ ಸೇವೆ ಬಯಲಾಟ ಪ್ರದರ್ಶನ ಆಯೋಜಿಸಿದ್ದಾರೆ. 2021ರ ಮೇ 24 ರಿಂದ 27ರ ವರೆಗೆ ಧರ್ಮಸ್ಥಳದಲ್ಲಿ ಮೂರು ದಿನ ಸೇವೆ ಬಯಲಾಟ ಪ್ರದರ್ಶನ ನೀಡಿ ವರ್ಷದ ತಿರುಗಾಟಕ್ಕೆ ಕಲಾವಿದರು ಮಂಗಳ ಹಾಡುವರು.

ಶುಕ್ರವಾರ ಬೆಳಗ್ಗೆ ಶುಭ ಮುಹೂರ್ತದಲ್ಲಿ ಯಕ್ಷಗಾನ ಮೇಳದ ಶ್ರೀ ಮಹಾಗಣಪತಿ ದೇವರಿಗೆ ಪೂಜೆ ನೆರೆವೇರಿಸಿ ಭವ್ಯ ಮೆರವಣಿಗೆಯಲ್ಲಿ ಭಕ್ತಿಪೂರ್ವಕವಾಗಿ ಕಳುಹಿಸಿಕೊಡಲಾಯಿತು. 2021ರ ಮೇ 23ರ ವರೆಗೆ ಯಕ್ಷಗಾನ ಮೇಳದ ಕಲಾವಿದರು ಬೇರೆ-ಬೇರೆ ಊರುಗಳಲ್ಲಿ ಸೇವೆ ಬಯಲಾಟ ಪ್ರದರ್ಶನ ನೀಡುವರು.

Share This Article
Leave a Comment

Leave a Reply

Your email address will not be published. Required fields are marked *