ಧಗಧಗನೇ ಹೊತ್ತಿ ಉರಿದ ಸೂರತ್‍ ಬಂದರಿನ ಒಎನ್‍ಜಿಸಿ- ಎದೆ ಝಲ್ ಎನಿಸೋ ಶಬ್ದ- ವಿಡಿಯೋ ನೋಡಿ

Public TV
2 Min Read

ಸೂರತ್: ದೇಶದ ಪ್ರಮುಖ ಬಂದರು ಎಂದು ಗುರುತಿಸಿಕೊಂಡಿರುವ ಸೂರತ್‍ನ ಹಜೀರಾ ಬಂದರಿನ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‍ಜಿಸಿ) ಘಟಕದಲ್ಲಿ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದೆ.

ಇಂದು ಮುಂಜಾನೆ 3 ಗಂಟೆ ಸಮಯದಲ್ಲಿ ಸ್ಫೋಟ ಸಂಭವಿಸಿದ್ದು, ಸ್ಥಳೀಯ ನಿವಾಸಿಗಳು ಭಾರೀ ಶಬ್ದ ಕೇಳಿ ನಿದ್ದೆಯಿಂದ ಎಚ್ಚರಗೊಂಡಿದ್ದು, ಬೆಂಕಿಯ ತೀವ್ರತೆಯ ಕಂಡು ಆತಂಕಗೊಂಡಿದ್ದಾರೆ. ಸದ್ಯದ ಮಾಹಿತಿಯ ಅನ್ವಯ, ಹಜೀರಾ ಬಂದರಿನ ಟರ್ಮಿನಲ್‍ನಲ್ಲಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಬೆಂಕಿ ತೀವ್ರತೆಗೆ ಬಂದರಿನ ಆಕಾಶ ಸಂಪೂರ್ಣ ಕೆಂಪಾಗಿ ಬದಲಾಗಿತ್ತು.

ಘಟನೆ ಕುರಿತಂತೆ ಸ್ಥಳೀಯ ನಿವಾಸಿಗಳು ಬೆಂಕಿ ಹೊತ್ತಿ ಉರಿಸುತ್ತಿರುವ ಸಂದರ್ಭದ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಬೆಂಕಿಯ ಕಾರಣದಿಂದ ಘಟನೆ ನಡೆದ ಸ್ಥಳದಿಂದ ಸುಮಾರು 10 ಕಿಮೀ ದೂರದವರೆಗೂ ಗ್ಯಾಸ್ ವಾಸನೆ ಆವರಿಸಿದೆ ಎಂದು ನಿವಾಸಿಗಳು ಹೇಳಿದ್ದರೆ. ಘಟನೆ ನಡೆದ ಸಂದರ್ಭದಲ್ಲಿ ಹಲವರು ಭೂಕಂಪನದಿಂದ ದುರಂತ ನಡೆದಿದೆ ಎಂದು ಹಲವರು ತಪ್ಪಾಗಿ ಭಾವಿಸಿದ್ದರು ಎನ್ನಲಾಗಿದೆ.

ಸ್ಫೋಟದ ಕುರಿತು ಸ್ಪಷ್ಟನೆ ನೀಡಿರುವ ಒಎನ್‍ಜಿಸಿ, ಹಜೀರಾ ಅನಿಲ ಸಂಸ್ಕರಣಾ ಘಟಕದಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಕೊಂಡಿದೆ. ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಘಟನೆಯಲ್ಲಿ ಯಾವುದೇ ವ್ಯಕ್ತಿಗೆ ಅಪಘಾತ ಅಥವಾ ಗಾಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದ ಕೂಡಲೇ ಘಟನಾ ಸ್ಥಳಕ್ಕೆ ಹತ್ತಿರವಾಗಿದ್ದ ರಿಲಯನ್ಸ್, ಕ್ರಿಬ್ಕೊ, ಎನ್‍ಟಿಪಿಸಿ, ಅದಾನಿ, ಶೆಲ್, ಗೇಲ್, ಜಿಎಸ್‍ಇಜಿ ಮತ್ತು ಇತರ ಹಲವು ಸ್ಥಾವರಗಳನ್ನು ಮುನ್ನೆಚ್ಚರಿಕ ಕ್ರಮವಾಗಿ ಮುಚ್ಚಲಾಗಿದೆ ಎಂಬ ಮಾಹಿತಿ ಲಭಿಸಿದೆ. ಹಜೀರಾ ಬಂದರು ಅರಬ್ಬೀ ಸಮುದ್ರದಿಂದ 8 ಕಿಮೀ ದೂರಲ್ಲಿರುವ ತಪತಿ ನದಿಯ ದಡದಲ್ಲಿದೆ. ಆಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *