ದ.ಕ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಶೀಘ್ರದಲ್ಲೇ ಆಗಲಿದೆ: ಸಿ.ಪಿ ಯೋಗೇಶ್ವರ್

Public TV
4 Min Read

ಮಂಗಳೂರು: ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಮುಂದೆ ಇರುವ ಪ್ರಸ್ತಾವನೆಗಳ ಮಾಹಿತಿಯನ್ನು ಪಡೆಯಲಾಗಿದ್ದು, ಅವುಗಳ ಶೀಘ್ರ ವಿಲೇವಾರಿ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಒಟ್ಟು 27 ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇವುಗಳಲ್ಲಿ ಕೆಲವು ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ/ಅನುಮೋದನೆ ನೀಡಬೇಕಾಗಿರುತ್ತದೆ. ಉಳಿದಂತೆ ಸುಮಾರು 8-10 ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, ವಿವಿಧ ಹಂತದಲ್ಲಿ ಇರುವುದರಿಂದ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಅನುಷ್ಠಾನ ಸಂಸ್ಥೆಗಳಿಗೆ ಸೂಚನೆ ನೀಡಲಾಗಿರುತ್ತದೆ. ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದೆ ಎಂದು ಪ್ರವಾಸೋದ್ಯಮ ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪ್ರವಾಸಿ ತಾಣಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗಾಗಿ ಪ್ರಸ್ತಾವನೆಯನ್ನು ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿರುತ್ತದೆ ಎಂದರು.

ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ನಲ್ಲಿ ಪ್ರವಾಸಿಗರು ಕ್ರೂಸ್‍ನಲ್ಲಿ ಭೇಟಿ ನೀಡುತ್ತಿದ್ದು, ಅವರುಗಳಿಗೆ ಕೇವಲ ಒಂದು ದಿನ ಮಾತ್ರ ತಂಗುವ ಸೌಲಭ್ಯ ದೊರಕುತ್ತಿದೆ. ಈ ಸೌಲಭ್ಯವನ್ನು 2-3 ದಿವಸಗಳಿಗೆ ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಿ, ಪ್ರವಾಸೋದ್ಯಮ ಇಲಾಖೆಯ ಪಾಲುಗಾರಿಕೆಯೊಂದಿಗೆ ಸುತ್ತ-ಮುತ್ತಲಿನ ಜಿಲ್ಲೆಗಳನ್ನು ಅಂತರಾಷ್ಟ್ರೀಯ ಪ್ರವಾಸಿಗರಿಗೆ ಪರಿಚಯಿಸುವ ಒಂದು ಯೋಜನೆಯನ್ನು ರೂಪಿಸುವ ಬಗ್ಗೆ ಚರ್ಚಿಸಲಾಗಿರುತ್ತದೆ ಎಂದು ಹೇಳಿದರು.

ದಕ್ಷಿಣಕನ್ನಡ ಜಿಲ್ಲೆಯ ಸಸಿಹಿತ್ಲು ಕಡಲ ತೀರದಲ್ಲಿ ಅಂತಾರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಗಳನ್ನು ಏರ್ಪಡಿಸುವುದರೊಂದಿಗೆ ದೇಶ-ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸಲಾಗುವುದು. ಸರ್ಫಿಂಗ್ ಸ್ಕೂಲ್ & ಕ್ಲಬ್ ಹೌಸ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರದಿಂದ ರೂ.10.00 ಕೋಟಿಗಳ ಅನುದಾನ ಮಂಜೂರಾಗಿರುತ್ತದೆ. ಈ ನಿಟ್ಟಿನಲ್ಲಿ ಶೀಘ್ರವಾಗಿ ಸಿ.ಆರ್.ಝಡ್ ಕ್ಲೀಯರೆನ್ಸ್ ಪಡೆದು ಕಾಮಗಾರಿ ಪ್ರಾರಂಭಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅಂತಾರಾಷ್ಟ್ರೀಯ ಬ್ಲೂಫ್ಲಾಗ್ ಮಾನ್ಯತೆ ಪಡೆದಿರುವ ಪಡುಬಿದ್ರೆ ಹಾಗೂ ಕಾಸರಕೋಡು ಕಡಲತೀರಗಳ ಮಾದರಿಯಲ್ಲಿ ತಲಪಾಡಿ, ಪಣಂಬೂರು, ಚಿತ್ರಾಪುರ, ಸೂರತ್ಕಲ್, ಸೋಮೇಶ್ವರ, ಉಲ್ಲಾಳ, ತಣ್ಣಿರುಭಾವಿ ಬೀಚ್‍ಗಳಿಗೆ ಸಂಪರ್ಕ ರಸ್ತೆಗಳು, ಶೌಚಾಲಯಗಳು, ಹೈಮಾಸ್ಕ್ ದೀಪಗಳು ಸೇರಿದಂತೆ ಪ್ರವಾಸಿಗರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಜೈನರ ಕಾಶಿಯೆಂದೇ ಪ್ರಸಿದ್ಧವಾಗಿರುವ ಮೂಡುಬಿದ್ರೆಯಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಧಾರ್ಮಿಕ ಪ್ರವಾಸಿ ವೃತ್ತವನ್ನಾಗಿ ಅಭಿವೃದ್ಧಿಪಡಿಸಿ, ರಾಜ್ಯದಲ್ಲಿರುವ ಜೈನ ದೇವಾಲಯಗಳಿಗೆ ದೇಶ-ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಕ್ರಮ ಕೈಗೊಳ್ಳಲಾಗುವುದು. ಹುಲಿವೇಷ, ಯಕ್ಷಗಾನ, ಭೂತಕೊಲ, ಕಂಬಳ ಮುಂತಾದ ಸ್ಥಳೀಯ ಜಾನಪದ ಕಲೆಗಳಿಗೆ ಮುಂದಿನ ದಿನಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹೆಚ್ಚಿನ ಉತ್ತೇಜನ ನೀಡಲು ಇಲಾಖೆಯು ಶ್ರಮಿಸುತ್ತದೆ ಎಂದು ತಿಳಿಸಿದರು.

ಸರ್ಫಿಂಗ್ ಉತ್ಸವ ಹಾಗೂ ಇತರೆ ಕರಾವಳಿ ಉತ್ಸವಗಳಿಗೆ ಉತ್ತೇಜನ ನೀಡಲಾಗುವುದು. ರಾಜ್ಯದ 320 ಕಿ.ಮೀ ಉದ್ದದ ಕರಾವಳಿ ಕಿನಾರೆಯನ್ನು ಪ್ರವಾಸೋದ್ಯಮ ಸಕ್ರ್ಯೂಟ್ ಆಗಿ ಅಭಿವೃದ್ಧಿಪಡಿಸಿ, ದೇಶ-ವಿದೇಶ ಪ್ರವಾಸಿಗರನ್ನು ಆಕರ್ಷಿಸಲು ಕ್ರಿಯಾ ಯೋಜನೆ ಸಿದ್ದಪಡಿಸಲಾಗುವುದು. ಉಡುಪಿಯ ಸೆಂಟ್ ಮೇರಿಸ್ ಐಲ್ಯಾಂಡ್ ಬಳಿ ಫರ್ರಿ ಜೆಟ್ಟಿ ನಿರ್ಮಿಸುವ ಕಾಮಗಾರಿಗೆ ರೂ.420.00 ಲಕ್ಷಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತ್ತಿದ್ದು, ಸಿ.ಆರ್.ಝಡ್ ಕ್ಲೀಯರೆನ್ಸ್ ಪಡೆಯಲು ಬಾಕಿ ಇರುತ್ತದೆ. ಸದರಿ ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳುವಂತೆ ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ ರವರಿಗೆ ಸೂಚನೆಯನ್ನು ನೀಡಲಾಗಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆ, ನಗರ ಸ್ಥಳಿಯ ಸಂಸ್ಥೆಗಳು, ಪಂಚಾಯತಿಗಳು ಕಡ್ಡಾಯವಾಗಿ ಘನ-ತ್ಯಾಜ್ಯಗಳ ನಿರ್ವಹಣೆ ಮತ್ತು ಎಸ್‍ಟಿಪಿ ಘಟಕಗಳನ್ನು ಅಳವಡಿಸಿಕೊಳ್ಳಬೇಕು. ಮುಂದಿನ 25 ವರ್ಷಗಳ ಗುರಿಯಿಟ್ಟುಕೊಂಡು ಲ್ಯಾಂಡ್ ಫಿಲ್ಲಿಂಗ್ ಸ್ಥಳಗಳನ್ನು ಗುರುತಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ. ಗ್ರಾಮ ಪಂಚಾಯ್ತಿ ಹಂತದಲ್ಲಿ ಘನ-ತ್ಯಾಜ್ಯ ನಿರ್ವಹಣೆಗೆ ಸೂಕ್ತ ಸ್ಥಳಗಳನ್ನು ಗುರುತಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ. ಮನೆಗಳಿಂದ ನೇರವಾಗಿ ಕಸ ಸಂಗ್ರಹಣೆ ಮಾಡುವುದು. ಹಸಿ-ಒಣ ಕಸ ವಿಂಗಡಿಸಿ ಕಡ್ಡಾಯವಾಗಿ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಲು ಕ್ರಮ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆಯನ್ನು ನೀಡಲಾಗಿದೆ ಎಂದರು.

ಕಲ್ಲು ಗಣಿಗಾರಿಕೆ ಮಾಡಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಬೇಕು ಮತ್ತು ಸಿ-ಫಾರಂ ಹೊಂದಿರಬೇಕು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆಯದೇ ನಡೆಸುತ್ತಿರುವ ಕಲ್ಲು-ಗಣಿಗಾರಿಕೆ ಮತ್ತು ಕ್ರಷರ್‍ಗಳನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಪ್ರಾದೇಶಿಕ ಹಿರಿಯ ಪರಿಸರ ಅಧಿಕಾರಿಗಳು ಹಾಗೂ ಇತರೆ ಪರಿಸರ ಅಧಿಕಾರಿಗಳು ತಮ್ಮ ಜವಬ್ದಾರಿಯನ್ನು ಅರಿತು, ಮಂಡಳಿಯ ಕಾಯ್ದೆಗಳನ್ನು ಅನುಷ್ಠಾನಗೊಳಿಸಬೇಕು. ಅದರಂತೆ ಜಿಲ್ಲಾ ರೆಡ್ ದರ್ಜೆಯ ಕೈಗಾರಿಕೆಗಳಿಗೆ 3 ತಿಂಗಳಿಗೊಮ್ಮೆ ಭೇಟಿ ನೀಡಿ, ಪರಿಶೀಲಿಸುವುದು. ನದಿ ಮತ್ತು ಸಮುದ್ರದ ನೀರು ಕಲುಷಿತಗೊಳ್ಳದಂತೆ ಪರಿಸರ ಇಲಾಖೆಯ ಅಧಿಕಾರಿಗಳು ಕಟ್ಟು-ನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೇರಳದ ಆಲಪ್ಪಿ ಮಾದರಿಯಲ್ಲಿ ಗುರುಪುರ ಹಿನ್ನೀರಿನಲ್ಲಿ 20 ಕಿಲೋಮೀಟರ್ ಉದ್ದ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.

ತಣ್ಣೀರು ಬಾವಿಯಲ್ಲಿ ಇಕೊ ಟೂರಿಸಂ ಗೆ ಆದ್ಯತೆ ನೀಡಿ ಅಭಿವೃದ್ಧಿಪಡಿಸಲಾಗುವುದು. ಶಿಪ್ಪಿಂಗ್ ಯಾರ್ಡ್ ನಲ್ಲಿ ಕೇಂದ್ರ ಸರ್ಕಾರದ ಉಡಾನ್ ಹಾಗೂ ಸಾಗರಮಾಲಾ ಯೋಜನೆಯಡಿ ಹೆಲಿ ಟೂರಿಸಂ ಆಂಡ್ ಸೀ ಪ್ಲೇನ್ (Heli tourism and sea plane) ಯೋಜನೆ ಅಭಿವೃದ್ಧಿಪಡಿಸಲಾಗುವುದು. ಕ್ರೂಸ್ ನಲ್ಲಿ ಬರುವ ಪ್ರವಾಸಿಗರು ಲಕ್ಷದೀಪ ಹಾಗೂ ಸುತ್ತಮುತ್ತಲ ಪ್ರವಾಸಿ ತಾಣಗಳಿಗೆ ಹೋಗಲು ಇದರಿಂದ ಅನುಕೂಲವಾಗಲಿದೆ. ವರ್ಷದಲ್ಲಿ ಮೂರು ತಿಂಗಳಕಾಲ ಈ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ವಿಜಯ್ ಕೋಟ್ಯಾನ್ ಪಡು ಕಾರ್ಯಕ್ರಮ ನಿರೂಪಿಸಿದರು. ಜಿತೇಂದ್ರ ಕುಂದೇಶ್ವರ್, ಭಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *