ವಿಜಯಪುರ: ದೊಡ್ಡ ವ್ಯಕ್ತಿಗಳು ಸಣ್ಣತನದ ಮಾತುಗಳನ್ನು ಆಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.
ಇಂದು ವಿಜಯಪುರದಲ್ಲಿ ಮಾತನಾಡಿದ ಅವರು, ದೊಡ್ಡ ವ್ಯಕ್ತಿಗಳು ಸಣ್ಣತನದ ಮಾತುಗಳನ್ನು ಆಡಬಾರದು. ಅಂತಹ ವ್ಯಕ್ತಿಯ ಬಾಯಿಂದ ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಎಚ್.ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದರು. ಅಲ್ಲದೆ ರಾಮ ಏನು, ರಾಮಮಂದಿರ ಏನು, ಗೌರವವಿದ್ದರೆ ಕೊಡಿ ಎಂದರು.
ರಾಮನ ಮೇಲೆ ಗೌರವ ಇರಲಿ, ಸುಪ್ರೀಂಕೋರ್ಟ್ ಮೇಲಾದರೂ ಗೌರವ ಇರಬೇಕಲ್ಲವೆ? ಸುಪ್ರೀಂಕೋರ್ಟ್ ಮೇಲೆ ಗೌರವ ಇಟ್ಟುಕೊಂಡು ಮಾತನಾಡಬೇಕು ಎಂದು ಹೇಳುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಮಂದಿರ ನಿರ್ಮಾಣಕ್ಕೆ ಹೇಳಿದ್ದು ಸುಪ್ರೀಂಕೋರ್ಟ್. ನರೇಂದ್ರ ಮೋದಿ, ವಿಎಚ್ ಪಿ ಅಧ್ಯಕ್ಷ ಹೇಳಿದ್ದಲ್ಲ ಎಂದರು. ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಟ್ರಸ್ಟ್ ರಚನೆ ಮಾಡಿದ್ದು, ಟ್ರಸ್ಟ್ ಮಂದಿರ ಕಟ್ಟುತ್ತದೆ ಹೊರತು ವಿಎಚ್‍ಪಿ ಅಥವಾ ಬಿಜೆಪಿ ಅಲ್ಲ. ಇದರಲ್ಲಿ ರಾಜಕೀಯ ಮಾಡಬಾರದು ಎಂದು ಸಿದ್ದುಗೆ ಕಿವಿ ಮಾತು ಹೇಳಿದರು.
ಸುಪ್ರೀಂಕೋರ್ಟ್ ಮೇಲೆ ಯಾರಿಗೆ ಗೌರವ ಇಲ್ಲವೋ, ಅವರು ಇಂತಹ ಮಾತುಗಳನ್ನು ಆಡುತ್ತಾರೆ. ಎಚ್‍ಡಿಕೆ ಹಾಗೂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್ ಮೇಲೆ ಗೌರವ ಇಲ್ಲ, ಅದಕ್ಕೆ ಹೀಗೆ ಮಾತನಾಡುತ್ತಾರೆ ಎಂದು ಹೇಳಿದರು.