ದೇಶದ ಮೊದಲ ಸೀಪ್ಲೇನ್‍ಗೆ ಮೋದಿ ಚಾಲನೆ – ಟಿಕೆಟ್ ದರ ಎಷ್ಟು? ಮುಂದೆ ಎಲ್ಲೆಲ್ಲಿ ಜಾರಿ?

Public TV
3 Min Read

ಗಾಂಧಿನಗರ: ದೇಶದ ಮೊದಲ ಸೀಪ್ಲೇನ್‍ಗೆ ಪ್ರಧಾನಿ ನರೇದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 145ನೇ ಜ್ಮದಿನಾಚಣೆಯ ಸಂದರ್ಭದಲ್ಲಿ ಅವರಿಗೆ ವಿಶೇಷ ಗೌರವ ಸಲ್ಲಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದಾರೆ.

ಸರ್ದಾರ್ ಸರೋವರದ ಡ್ಯಾಮ್‍ನ ಬಳಿಯ ಮೂರನೇ ಡ್ಯಾಮ್ ಬಳಿ ಮೋದಿ ಸೀಪ್ಲೇನ್‍ಗೆ ಚಾಲನೆ ನೀಡಿದರು. ಗುಜರಾತ್‍ನ ಸ್ಟ್ಯಾಚ್ಯೂ ಆಫ್ ಯುನಿಟಿಯ ಕೆವಾಡಿಯಾ ಕಾಲೋನಿ ಸ್ಥಳದಿಂದ ಅಹಮದಾಬಾದ್‍ನ ಸಬರಮತಿ ನಡುವೆ ಸಂಚರಿಸಲಿದೆ. ಅಹಮದಾಬಾದ್ ಮತ್ತು ಕೆವಾಡಿಯಾ ನಡುವೆ ಪ್ರಯಾಣಿಸಲು ನಾಲ್ಕು ಗಂಟೆ ಸಮಯ (205 ಕಿಮೀ) ತೆಗೆದುಕೊಳ್ಳುತ್ತದೆ. ಆದರೆ ಸೀಪ್ಲೇನ್ ಸುಮಾರು ಒಂದು ಗಂಟೆಯಲ್ಲಿ ಪ್ರಯಾಣವನ್ನು ಮಾಡಲಿದೆ.

ಸೀಪ್ಲೇನ್ ವಿಶೇಷತೆ ಏನು?
ನೀರಿನ ಮೇಲೆ ಟೇಕಾಫ್ ಮತ್ತು ಲ್ಯಾಂಡಿಂಗ್ ಮಾಡಲು ಸಾಧ್ಯವಿರುವ ಏರೋಪ್ಲೇನ್‍ಗೆ ಸೀಪ್ಲೇನ್ ಎಂದು ಕರೆಯುತ್ತಾರೆ. ಸ್ಪೈಸ್ ಜೆಟ್ ಕಂಪನಿ ಭಾರತದಲ್ಲಿ ಸದ್ಯ ಸೀಪ್ಲೇನ್ ಸರ್ವೀಸ್ ನೀಡಲಿದ್ದು, ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಸೇವೆ ನೀಡಲಾಗುತ್ತಿದೆ. 19 ಆಸನಗಳನ್ನು ಹೊಂದಿರುವ ವಿಮಾನದಲ್ಲಿ 12 ಪ್ರಯಾಣಿಕರು ಈ ವಾಹನದಲ್ಲಿ ಏಕಕಾಲದಲ್ಲಿ ಪ್ರಯಾಣ ಮಾಡಬಹುದಾಗಿದೆ.

ಟಿಕೆಟ್ ದರ ಎಷ್ಟು?
ಒಬ್ಬರಿಗೆ 4,800 ರೂ. ನಿಗದಿ ಮಾಡುವ ಸಾಧ್ಯತೆ ಇದೆ. ಪ್ರತಿದಿನ ಸೀಪ್ಲೇನ್ ವಿಮಾನ ಅಹಮದಾಬಾದ್‍ನಿಂದ ಕೆವಾಡಿಯಾಗೆ 4 ಬಾರಿ, ಮತ್ತು ಕೆವಾಡಿಯಿಂದ ಅಹಮದಾಬಾದ್‍ಗೆ 4 ಬಾರಿ ಸಂಚಾರ ಮಾಡಲಿದೆ.

ಮಾಲ್ಡೀವ್ಸ್‍ನಿಂದ ಅಕ್ಟೋಬರ್ 26 ರಂದು ಸೀಪ್ಲೇನ್ ಬಂದಿಗಳಿದಿತ್ತು. ಸರ್ಕಾರದ ಉಡಾನ್ ಯೋಜನೆಯಡಿ ಇದನ್ನು ಒದಗಿಸಲಾಗಿದೆ. ಯೋಜನೆಗಾಗಿ ಗುಜರಾತ್ ಸರ್ಕಾರ ಜುಲೈನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ತ್ರಿಪಕ್ಷೀಯ ಒಪ್ಪಂದವನ್ನು ಮಾಡಿಕೊಂಡಿತ್ತು. ಸಬರಮತಿ ಮತ್ತು ಸರ್ದಾರ್ ಸರೋವರ ಮಾರ್ಗವನ್ನು ದೇಶದ 16 ಸೀಪ್ಲೇನ್ ಮಾರ್ಗಗಳಲ್ಲಿ ಸೇರಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಹೈಡ್ರೋಗ್ರಾಫಿಕ್ ಸಮೀಕ್ಷೆಗಳು ಪೂರ್ಣಗೊಳಿಸಲಾಗಿದೆ. ಸೀಪ್ಲೇನ್‍ಗಳು ಭೂಮಿ ಮತ್ತು ಲಕ್ಷದ್ವೀಪಗಳು ಮತ್ತು ಕೊಚ್ಚಿಯಲ್ಲಿನ ಒಳನಾಡಿನ ನೀರಿನ ಮಾರ್ಗಗಳ ನಡುವೆ ಸಂಚರಿಸ ಬಹುದಾದ ಉತ್ತಮ ತಾಂತ್ರಿಕತೆಯನ್ನು ಹೊಂದಿದೆ.

ಮುಂದೆ ಎಲ್ಲೆಲ್ಲಿ ಸಾಧ್ಯತೆ?
ಸಬರಮತಿ ಬಳಿಕ ದೇಶದ ಗುವಾಹಟಿ, ಅಂಡಮಾನ್ ನಿಕೋಬಾರ್, ಯಮುನಾ ಸೇರಿದಂತೆ ಉತ್ತರಾಖಂಡದ ಟಪ್ಪರ್ ಅಣೆಕಟ್ಟಿನ ವಿವಿಧ ಮಾರ್ಗಗಳಲ್ಲಿ ನಿಯಮಿತ ಸೇವೆಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ. ಭಾರತದ ಸೀಪ್ಲೇನ್ ಬೆಳವಣಿಗೆ ದೇಶಕ್ಕೆ ಹೊಸ ಸಾರಿಗೆ ವಿಧಾನವನ್ನು ಕಲ್ಪಿಸಲಿದ್ದು, ದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಹುದೊಡ್ಡ ಉತ್ತೇಜನ ಸಿಕ್ಕಿದಂತಾಗುತ್ತದೆ. ಏಕೆಂದರೆ ಯಾವುದೇ ಕೊಳವನ್ನು ವಿಮಾನ ನಿಲ್ದಾಣವನ್ನಾಗಿ ಪರಿವರ್ತಿಸಬಹುದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದು, ಇಂದು ಅವರ ಗುಜರಾತ್ ಭೇಟಿ ಅಂತ್ಯವಾಗಲಿದೆ. ಸ್ಟ್ಯಾಚ್ಯೂ ಆಫ್ ಯುನಿಟಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ಸಶಸ್ತ್ರ ಪಡೆ (ಸಿಎಪಿಎಫ್), ಗುಜರಾತ್ ಪೊಲೀಸರು ಏಕ್ತಾ ದಿವಾಸ್ ಪೆರೇಡನ್ನು ಆಯೋಜಿಸಿದ್ದರು. ಉಳಿದಂತೆ ಶುಕ್ರವಾರ ಗುಜರಾತ್‍ಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರು, ನರ್ಮದಾ ಜಿಲ್ಲೆಯ ಕೆವಾಡಿಯಾದ ಸ್ಟ್ಯಾಚ್ಯೂ ಆಫ್ ಯುನಿಟಿ ಬಳಿ ಹೊಸ ಪ್ರವಾಸಿ ಆಕರ್ಷಣೆಗಳು ಸೇರಿದಂತೆ ಗುಜರಾತ್‍ನಲ್ಲಿ 17 ಹೊಸ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಆರೋಗ್ಯ ವ್ಯಾನ್, ಏಕ್ತಾ ಮಾಲ್, ಸರ್ದಾರ್ ಪಟೇಲ್ ಪಾರ್ಕ್, ದೋಣಿ ವಿಹಾರ ಸೇರಿದಂತೆ ಹಲವು ಪ್ರಮುಖ ಆಕರ್ಷಣಿಯ ಯೋಜನೆಗಲು ಇದರಲ್ಲಿ ಸೇರಿದೆ.

Share This Article
Leave a Comment

Leave a Reply

Your email address will not be published. Required fields are marked *