ಧಾರವಾಡ: ಕಾಶ್ಮೀರದಲ್ಲಿ ಉಗ್ರರ ಪಡೆಯನ್ನು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ. ಇಂತಹ ದೇಶದ್ರೋಹಿ ಉಗ್ರ ಚಟುವಟಿಕೆಗಳ ಹಿಂದೆ ಗುಪ್ಕಾರ್ ಗ್ಯಾಂಗ್ ಕುಮ್ಮಕ್ಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಗ್ಯಾಂಗ್ ಜೊತೆಗಿರುವ ಪಕ್ಷಗಳ ಜೊತೆ ಕಾಂಗ್ರೆಸ್ ಕೈ ಜೋಡಿಸಿದೆ. ಗುಪ್ಕಾರ್ ಜೊತೆಗಿನ ಸಂಬಂಧದ ಬಗ್ಗೆ ಕಾಂಗ್ರೆಸ್ ಸ್ಪಷ್ಟಪಡಿಸಬೇಕು. ಏ ರಿಸ್ತಾ ಕ್ಯಾ ಕೆಹತಾ ಹೈ ಎಂದು ಕಾಂಗ್ರೆಸ್ ಹೇಳಬೇಕು. ತಾಯಿಗೆ ಹುಷಾರಿಲ್ಲ ಎಂದು ರಾಹುಲ್ ಗಾಂಧಿ ಗೋವಾದಲ್ಲಿ ಕುಳಿತಿದ್ದಾರೆ. ಅಲ್ಲಿಂದಲೇ ರಾಹುಲ್ ನಿಲುವು ಸ್ಪಷ್ಟಪಡಿಸಬೇಕು. ಅಸಹಿಷ್ಣುತೆ ಬಗ್ಗೆ ಮಾತನಾಡಿದವರು ಗುಪ್ಕಾರ್ ಬಗ್ಗೆ ಮಾತನಾಡುತ್ತಿಲ್ಲ. ಅವಾರ್ಡ್ ವಾಪಸಿ ಗ್ಯಾಂಗ್ ಈ ಬಗ್ಗೆ ಮಾತನಾಡಲಿ. ಆತ್ಮಸಾಕ್ಷಿ ಇದ್ದರೆ ಗುಪ್ಕಾರ್ ಗ್ಯಾಂಗ್ ಖಂಡಿಸಿ ಎಂದು ಕಿಡಿಕಾರಿದರು.
ಇದೇ ವೇಳೆ ದೆಹಲಿಯಲ್ಲಿ ರಮೇಶ್ ಜಾರಕಿಹೊಳಿ ಓಡಾಟ ವಿಚಾರವಾಗಿ ಮಾತನಾಡಿದ ಜೋಶಿ, ಜಾರಕಿಹೊಳಿ ನನ್ನ ಬಳಿಯೂ ಬಂದಿದ್ದರು. ಆದರೆ ಕೇವಲ 3-4 ನೀರಾವರಿ ಯೋಜನೆ ಬಗ್ಗೆ ಮಾತನಾಡಿದರು. ಅಷ್ಟನ್ನೇ ನಾವು ಮಾಡಿದ್ದೇವೆ, ಉಳಿದಿದ್ದು ಗೊತ್ತಿಲ್ಲ ಎಂದು ತಿಳಿಸಿದರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವರು, ಸಿಪಿಐಎಂ ರೀತಿಯಲ್ಲೇ ತೃಣಮೂಲ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಮಮತಾ ಬ್ಯಾನರ್ಜಿಯವರನ್ನು ಬರುವ ಚುನಾವಣೆಯಲ್ಲಿ ರಾಜಕೀಯವಾಗಿಯೇ ಮುಗಿಸುತ್ತೇವೆ ಎಂದರು.