ದೇಶದಲ್ಲಿ ಶೇ.1 ಪ್ರಮಾಣದಲ್ಲಿ ಕೊರೊನಾ ಹರಡಿದೆ: ಐಸಿಎಂಆರ್ ಸ್ಪಷ್ಟನೆ

Public TV
1 Min Read

– ಸೋಂಕು ಸಮುದಾಯಕ್ಕೆ ಹರಡಿಲ್ಲ

ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿಲ್ಲ. ದೇಶದ ಜನಸಂಖ್ಯೆಗೆ ಹೋಲಿಸಿಕೊಂಡರೇ ಶೇ.1 ಪ್ರಮಾಣದಲ್ಲಿ ಸೋಂಕು ಹರಡಿದೆ. ಇದನ್ನು ಸಮುದಾಯ ಹರಡುವಿಕೆ ಎಂದು ಕರೆಯಲು ಸಾಧ್ಯವಿಲ್ಲ ಎಂದು ಐಸಿಎಂಆರ್ ಡಿಜಿ ಬಲರಾಮ್ ಭಾರ್ಗವ್ ಸ್ಪಷ್ಟಪಡಿಸಿದ್ದಾರೆ.

ಆರೋಗ್ಯ ಇಲಾಖೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಕೆಲವು ಕಂಟೈನ್ಮೆಂಟ್ ಝೋನ್ ಗಳಿರುವ ನಗರಗಳಲ್ಲಿ ಮಾತ್ರ ಸೋಂಕು ಹರಡುತ್ತಿದೆ. ಅದನ್ನು ತಡೆಯುವ ಕೆಲಸ ನಡೆದಿದ್ದು, ಇದರ ಜೊತೆಗೆ ಟೆಸ್ಟಿಂಗ್ ಹೆಚ್ಚಿಸಲಾಗಿದೆ. ಲಾಕ್‍ಡೌನ್‍ನಿಂದ ಭಾರತದಲ್ಲಿ ಕೊರೊನಾ ಬೆಳವಣಿಗೆ ವೇಗಕ್ಕೆ ತಡೆ ಹಾಕಿದ್ದು ಬಹುತೇಕ ಯಶಸ್ವಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕೊರೊನಾ ಸೋಂಕು ತಡೆಯಲು ಸಾಮಾಜಿಕ ಅಂತರದ ನಿಯಮಗಳ ಪಾಲನೆ ಕಡ್ಡಾಯ. ಕಂಟೈನ್ಮೆಂಟ್‍ಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಸೋಂಕು ಪತ್ತೆ ಹಚ್ಚಲು ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಐಸಿಎಂಆರ್ ಪ್ರತಿ ದಿನಕ್ಕೆ ಎರಡು ಲಕ್ಷ ಪರೀಕ್ಷೆಗಳನ್ನು ನಡೆಸುವ ಗುರಿ ಹೊಂದಿದೆ ಎಂದು ಮಾಹಿತಿ ನೀಡಿದರು.

ಬಳಿಕ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಯಲದ ಜಂಟಿ ಕಾರ್ಯದರ್ಶಿ ಲವ ಅಗರ್‍ವಾಲ್, ವಿಶ್ವದ ಇತರೇ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪ್ರತಿ ಲಕ್ಷದಲ್ಲಿ ಒಬ್ಬರಿಗೆ ಸೋಂಕು ಹರಡಿದೆ. ಗುಣಮುಖವಾಗುತ್ತಿರುವವರ ಪ್ರಮಾಣ ಶೇ.49.21ಕ್ಕೆ ಏರಿಕೆಯಾಗಿದೆ ಎಂದರು.

ಕೊರೊನಾ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಹಿನ್ನೆಲೆ ರೋಗಿಗಳಲ್ಲಿ ಅನುಮಾನ ಮೂಡದಂತೆ ನೋಡಿಕೊಳ್ಳಬೇಕು. ಆಸ್ಪತ್ರೆಗಳು ಕಡ್ಡಾಯವಾಗಿ ಬೆಡ್‍ಗಳ ಮಾಹಿತಿಯನ್ನು ಪ್ರದರ್ಶಿಸಬೇಕು. ಆನ್‍ಲೈನ್‍ನಲ್ಲಿ ಬೆಡ್‍ಗಳ ಮಾಹಿತಿ ಹಂಚಿಕೊಳ್ಳಲು ಸೂಚಿಸಲಾಗಿದೆ. ಈವರೆಗೂ ಯಾವ ರಾಜ್ಯಗಳಲ್ಲೂ ಬೆಡ್‍ಗಳ ಕೊರತೆ ಸೃಷ್ಟಿಯಾಗಿಲ್ಲ. ಸೋಂಕಿಗೆ ಅನುಗುಣವಾಗಿ ಬೆಡ್‍ಗಳನ್ನು ಹೆಚ್ಚಿಸಲಾಗುತ್ತಿದೆ. ರೈಲ್ವೇ ಕೊಚ್‍ಗಳನ್ನು ಬೆಡ್‍ಗಳಾಗಿ ಮಾರ್ಪಡಿಸಿದೆ ರಾಜ್ಯ ಸರ್ಕಾರಗಳು ಅವಶ್ಯಕತೆ ಅನುಗುಣವಾಗಿ ಬಳಸಿಕೊಳ್ಳಬಹುದು ಎಂದರು.

Share This Article
Leave a Comment

Leave a Reply

Your email address will not be published. Required fields are marked *