ದೇವೇಗೌಡ್ರು ದೇಶಕ್ಕೆ ಈ ರೀತಿ ಸಮಸ್ಯೆ ಬಂತಲ್ಲ ಅಂತ ಕಣ್ಣೀರಿಡ್ತಿದ್ದಾರೆ: ರೇವಣ್ಣ

Public TV
3 Min Read

– ಸಿಬಿಐ ದಾಳಿಗೆ ಪ್ರತಿಕ್ರಿಯಿಸಲ್ಲ
– ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಹಾಸನ: ನಮ್ಮ ಜೆಡಿಎಸ್‍ಗೆ ಬಡವರ ಬಗ್ಗೆ ಭಾರೀ ಕಾಳಜಿ ಇದೆ. ದೇವೇಗೌಡರು ಈ ದೇಶಕ್ಕೆ ಈ ರೀತಿ ಸಮಸ್ಯೆ ಬಂತಲ್ಲ ಅಂತ ಕಣ್ಣೀರಿಡುತ್ತಿದ್ದಾರೆ ಎಂದು ಮಾಜಿ ಸಚಿಚ ಹೆಚ್‍ಡಿ ರೇವಣ್ಣ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಚುನಾವಣೆ ಸಮಯದಲ್ಲಿ ನಮ್ಮ ಬೆಂಬಲಿಗರ ಮನೆ ಮೇಲೂ ದಾಳಿ ಮಾಡಿದ್ದಾರೆ. ಒಂದು ಪಕ್ಷವನ್ನ ಗುರಿಯಾಗಿಟ್ಟುಕೊಂಡು ದಾಳಿ ಮಾಡುತ್ತಿದ್ದಾರೆ. ಅದು ಅವರ ಕರ್ತವ್ಯ ಅವರು ಮಾಡಿಕೊಳ್ತಾರೆ ನಾನ್ಯಾಕೆ ರಿಯಾಕ್ಟ್ ಮಾಡಬೇಕು. ಹೀಗಾಗಿ ನಾನು ಅದರ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದರು.

ಕಳೆದ ಬಾರಿ ಮಂಡ್ಯ ಹಾಸನ ಮತ್ತು ತುಮಕೂರಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಮತ್ತು ಬೆಂಬಲಿಗರ ಮನೆ ಮೇಲೆ ದಾಳಿ ಮಾಡಿದ್ದರು. ನಾವೇನು ಮೈತ್ರಿ ಮಾಡಿಕೊಳ್ತೀವಿ ಬನ್ನಿ ಅಂತ ಹೇಳಿದ್ವಾ ಅವರೇ ಬಂದಿದ್ದರು. ಐದು ವರ್ಷ ನೀವೇ ಅಧಿಕಾರ ಮಾಡಿ ಬನ್ನಿ ಅಂತ ಕರೆದವರು ಯಾರು ಅಂತ ಕೇಳಿ ಎಂದರು. ದ್ವೇಷದ ರಾಜಕಾರಣ ಮಾಡಿದರೆ ಅನುಭವಿಸೋದು ಏನ್ ಮಾಡೋದು ಎಂದು ಕಿಡಿಕಾರಿದರು.

ಮೈಸೂರು ಐಜಿಪಿಗೆ ನಮ್ ಶಾಸಕರು ಶಿವಲಿಂಗೇಗೌಡ ಫೋನ್ ಮಾಡಿದ್ರು. ಸರ್ಕಾರ ಹೇಳಿದಂಗೆ ನಾವು ಮಾಡ್ತೀವಿ ಅಂತ ಹೇಳಿದ್ರಂತೆ ಐಜಿಪಿ. ಅದೇನೋ ಜೆಡಿಎಸ್ ಅಂದ್ರೆ ಏನೋ ಎರಡು ರಾಷ್ಟ್ರೀಯ ಪಕ್ಷಗಳಿಗೆ. ಎರಡೂ ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಮುಗಿಸಬೇಕು ಅಂತ ಇದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಬಗ್ಗೆ ಮತ್ತು ದೇವೇಗೌಡರ ಬಗ್ಗೆ ಪ್ರತಿನಿತ್ಯ ಮಾತಾಡ್ತಾರೆ. ತಬ್ಬಿಕೊಳ್ಳಿ ನಮ್ಮನ್ನ ಅಂತ ನಾವು ಹೇಳಿದ್ವಾ ಅವರೇ ಬಂದು ನಮ್ಮನ್ನ ತಬ್ಬಿಕೊಂಡರು ಎಂದು ಈ ಹಿಂದೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದನ್ನ ಪರೋಕ್ಷವಾಗಿ ಹೇಳಿದರು.

ಕೆಲ ಶಾಲೆಗಳನ್ನ ಮುಚ್ಚುತ್ತಿದ್ದಾರೆ. ಶಾಲೆಗಳನ್ನ ಬದಲು ಅಲ್ಲಿ ಶಿಕ್ಷಕರಿದ್ದಾರೋ ವಿದ್ಯಾರ್ಥಿಗಳಿದ್ದಾರೋ ಎಂಬುದನ್ನು ಮೊದಲು ನೋಡಬೇಕು. ಅಧಿಕಾರಿಗಳಿಂದ ಎರಡು ಲಕ್ಷ, ಮೂರು ಲಕ್ಷ ಹಣ ತೆಗೆದುಕೊಳ್ಳುತ್ತಿದ್ದಾರೆ. ಈ ಸರ್ಕಾರದಲ್ಲಿ ಪೊಲೀಸರಿಂದಲೂ ದುಡ್ಡು ಇಸ್ಕೊಳ್ತಿದ್ದಾರೆ. ಯಾವ ಅಧಿಕಾರಿಗಳು ಬಂದರೂ ಕೆಲಸ ಮಾಡಿಸಿಕೊಳ್ಳೋದು ನನಗೆ ಗೊತ್ತಿದೆ. ನಮ್ಮ ಕೆಲಸ ಮಾಡಿದರೆ ಮಾಡಿ ಇಲ್ಲಾ ಅಂದರೆ ಬಿಡಿ. ಅದೇನ್ ಎರಡು ವರ್ಷ ನಮ್ಮ ಫೈಲ್ ಬಿದ್ದಿರುತ್ತಾ ಬಿದ್ದಿರಲಿ. ದ್ವೇಷದ ರಾಜಕಾರಣ ಹೆಚ್ಚು ದಿನ ನಿಲ್ಲೋದಿಲ್ಲಾ. ಹಾಸನ ನಗರಪಾಲಿಕೆಗೆ ಪ್ರಪೋಸಲ್ ಕಳಿಸಿದ್ದು ನಮ್ಮ ಸರ್ಕಾರದಲ್ಲಿ ಯಾರು ಕಳಿಸಿದ್ದರು ಅಂತ ಹೇಳಲಿ. ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಗೆ 508 ಕೋಟಿಯ ಕಾಮಗಾರಿಯನ್ನ ಬಿಜೆಪಿ ಸರ್ಕಾರ ವಜಾ ಮಾಡಿದೆ. ಕುಡಿಯುವ ನೀರಿನ ಕಾಮಗಾರಿಯನ್ನೂ ಬಿಜೆಪಿ ಸರ್ಕಾರ ವಜಾ ಮಾಡಿದೆ. ಏನೇನ್ ನಡೀತಿದೆ ಹೂಡಾದಲ್ಲಿ ನನಗೆ ಗೊತ್ತಿದೆ ಆ ಕಮಿಷನರ್ ನ್ನು ಬಲಿ ಹಾಕುತ್ತೇನೆ. ಈಗ ಹಾಸನದ ಉಪವಿಭಾಗಾಧಿಕಾರಿಯನ್ನ ಈಗ ವರ್ಗಾವಣೆ ಮಾಡಿದ್ದಾರೆ. ಇನ್ನೂ ಮುಂದಕ್ಕೆ ದುಡ್ಡು ಮಾಡೋ ಅಧಿಕಾರಿಗಳನ್ನ ತಂದು ಹಾಕ್ತಾರೆ. ಹಾಸನಕ್ಕೆ ಡ್ಯಾಮೇಜ್ ಆಗಿರೋ ಸರ್ಕಾರಕ್ಕೆ ದುಡ್ಡು ಕಲೆಕ್ಷನ್ ಮಾಡಲು ಎಕ್ಸ್ ಪರ್ಟ್ ಆಗಿರೋ ಅಧಿಕಾರಿಗಳನ್ನ ಇಲ್ಲಿಗೆ ಹಾಕ್ತಾರೆ. ಎಕ್ಸ್ ಪೈರ್ ಆಗಿರೋ ಎಂಜಿನ್ ಗಳನ್ನ ತಂದು ಇಲ್ಲಿಗೆ ಹಾಕ್ತಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ಸಿಗೆ ಯಾವ ಪರಿಸ್ಥಿತಿ ಬಂದಿದೆ ನೋಡಿ. ಯಾರೋ ನೊಣವಿನಕೆರೆ ಅಜ್ಜಯ್ಯ ಹೇಳಿದರಂತೆ ಅದಕ್ಕೆ ಆ ಹುಡುಗಿಯನ್ನು ಆರ್‍ಆರ್ ನಗರಕ್ಕೆ ಅಭ್ಯರ್ಥಿ ಮಾಡಿದ್ದಾರೆ. ಆ ಹುಡುಗಿಯನ್ನ ಏನು ಮಾಡ್ತಾರೆ ಏನೋ, ಒಂದೇ ದಿನದಲ್ಲಿ ಪಕ್ಷಕ್ಕೆ ಸೇರಿಸಿಕೊಂಡು ಅಭ್ಯರ್ಥಿ ಮಾಡಿದ್ದಾರೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *