ಕೋವಿಡ್‌ನಿಂದ ದೇವಾಲಯದ ಆದಾಯಕ್ಕೆ ಭಾರೀ ಹೊಡೆತ- ಕಳೆದ ವರ್ಷ ಎಷ್ಟು? ಈ ವರ್ಷ ಎಷ್ಟು ಬಂದಿದೆ?

Public TV
3 Min Read

ಬೆಂಗಳೂರು: ಕೋವಿಡ್‌ 19 ನಿಂದಾಗಿ ದೇವಾಲಯಗಳ ಆದಾಯಕ್ಕೆ ಭಾರೀ ಹೊಡೆತ ಬಿದ್ದಿದೆ. ಕಳೆದ ವರ್ಷ 317 ಕೋಟಿ ರೂ. ಆದಾಯ ಗಳಿಸಿದ್ದರೆ ಈ ಬಾರಿ ಏಪ್ರಿಲ್‌ 1ರಿಂದ ಜುಲೈ 31ರವರೆಗೆ ಕೇವಲ 18 ಕೋಟಿ ರೂ. ಆದಾಯ ಬಂದಿದೆ.

ಏಪ್ರಿಲ್‌ , ಮೇ ತಿಂಗಳಿನಲ್ಲಿ ಮಕ್ಕಳಿಗೆ ರಜೆ, ಜಾತ್ರೆಗಳು ನಡೆಯುವ ಕಾರಣ ದೇವಾಲಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಬರುತ್ತಿತ್ತು. ಆದರೆ ಈ ಬಾರಿ ಕೊರೊನಾದಿಂದ ಜನ ಮನೆಯಲ್ಲೇ ಇದ್ದ ಪರಿಣಾಮ ಆದಾಯದಲ್ಲಿ ಭಾರೀ ಇಳಿಕೆಯಾಗಿದೆ.

ಲಾಕ್‌ಡೌನ್‌ ಜಾರಿಯಾದ ಮಾರ್ಚ್‌ 24ರಿಂದ ಜೂನ್‌ 8 ರವರೆಗೆ ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ಜೂನ್‌ 8ರಿಂದ ದೇವಸ್ಥಾನ ತೆರೆಯಲು ಷರತ್ತುಬದ್ಧ ಅನುಮತಿ ನೀಡಿದ್ದರೂ ಭಕ್ತರು ದೊಡ್ಡ ಪ್ರಮಾಣದಲ್ಲಿ ಬಾರದ ಕಾರಣ ಆದಾಯ ಇಳಿಕೆಯಾಗಿದೆ.

ಯಾವ ದೇವಾಲಯದ ಆದಾಯ ಎಷ್ಟಿದೆ?
ಆದಾಯ ಸಂಗ್ರಹದಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಮೊದಲ ನಾಲ್ಕು ತಿಂಗಳಲ್ಲಿ ಕೇವಲ 4.28 ಕೋಟಿ ರೂ. ಗಳಿಸಿದೆ. ಕಳೆದ ವರ್ಷ ಈ ಅವಧಿಯಲ್ಲಿ ಒಟ್ಟು 98.92 ಕೋಟಿ ರೂ. ಗಳಿಸಿತ್ತು.

ಕೊಲ್ಲೂರು ಮೂಕಾಂಬಿಕಾ ದೇವಾಲಯ 4.51 ಕೋಟಿ ರೂ. (ಕಳೆದ ವರ್ಷ 45.65 ಕೋಟಿ ರೂ.), ಮೈಸೂರಿನ ಚಾಮುಂಡೇಶ್ವರಿ ದೇಗುಲ 7.4 ಕೋಟಿ ರೂ.(ಕಳೆದ ವರ್ಷ 35.23 ಕೋಟಿ ರೂ.) ಕಟೀಲು ದುರ್ಗಾಪರಮೇಶ್ವರಿ ದೇವಾಲಯ 1.05 ಕೋಟಿ ರೂ. (ಕಳೆದ ವರ್ಷ 25.42 ಕೋಟಿ ರೂ.) ನಂಜನಗೂಡಿನ ಶ್ರೀಕಂಠೇಶ್ವರ ದೇಗುಲ 1.25 ಕೋಟಿ ರು.(ಕಳೆದ ವರ್ಷ 20.80 ಕೋಟಿ ರೂ.) ಆದಾಯ ಗಳಿಸಿದೆ.

ಬೆಳಗಾವಿಯ ಸವದತ್ತಿ ರೇಣುಕಾ ಎಲ್ಲಮ್ಮ ದೇವಾಲಯ 1.67 ಕೋಟಿ ರೂ. (ಕಳೆದ ವರ್ಷ 16.49 ಕೋಟಿ ರೂ.) ಮಂದಾರ್ತಿ ದುರ್ಗಾಪರಮೇಶ್ವರಿ ದೇವಾಲಯ 1.2 ಕೋಟಿ ರೂ. (ಕಳೆದ ವರ್ಷ 11.43 ಕೋಟಿ ರೂ.), ಬೆಂಗಳೂರಿನ ಬನಶಂಕರಿ ದೇಗುಲ 1.03 ಕೋಟಿ ರೂ. (ಕಳೆದ ವರ್ಷ 9.04 ಕೋಟಿ ರೂ.), ಯಡಿಯೂರು ಸಿದ್ದಲಿಂಗೇಶ್ವರ ದೇವಾಲಯ 46 ಲಕ್ಷ ರೂ. (ಕಳೆದ ವರ್ಷ 6.39 ಕೋಟಿ ರು.) ಆದಾಯ ಗಳಿಸಿದೆ.

ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಾಲಯ 83.41 ಲಕ್ಷ ರೂ. (ಕಳೆದ ವರ್ಷ 8.20 ಕೋಟಿ ರೂ.) ಮಂಗಳೂರಿನಲ್ಲಿರುವ ಕದ್ರಿ ಮಂಜುನಾಥ ದೇವಾಲಯ 29.02 ಲಕ್ಷ ರೂ. (ಕಳೆದ ವರ್ಷ 5.78 ಕೋಟಿ ರೂ.), ದಕ್ಷಿಣ ಕನ್ನಡದ ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯ 29 ಲಕ್ಷ ರೂ. (ಕಳೆದ ವರ್ಷ 5.46 ಕೋಟಿ ರೂ.), ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಪೊಳಲಿ ರಾಜರಾಜೇಶ್ವರಿ ದೇವಾಲಯ ಕೇವಲ 88 ಸಾವಿರ ರೂ. (ಕಳೆದ ವರ್ಷ 5.9 ಕೋಟಿ ರೂ.) ಗಳಿಸಿದೆ.

ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಸೌತಡ್ಕ ಮಹಾಗಣಪತಿ ದೇವಾಲಯ 21 ಲಕ್ಷ ರೂ.(ಕಳೆದ ವರ್ಷ 5.80 ಕೋಟಿ ರೂ.) ಹಾಗೂ ಉಡುಪಿಯ ಅಂಬಲಪಾಡಿಯ ಜನಾರ್ದನ ಮತ್ತು ಮಹಾಕಾಳಿ ದೇವಾಲಯ 65 ಲಕ್ಷ ರೂ. (ಕಳೆದ ವರ್ಷ 3.93 ಕೋಟಿ ರೂ.) ಆದಾಯ ಬಂದಿದೆ.

ಹೂವಿನ ಹಡಗಲಿಯ ಮೈಲಾರಲಿಂಗೇಶ್ವರ ದೇವಾಲಯ ಕೇವಲ 59 ಸಾವಿರ ರೂ. (ಕಳೆದ ವರ್ಷ 2.51 ಕೋಟಿ ರೂ.), ಶ್ರೀರಂಗಪಟ್ಟಣದ ನಿಮಿಷಾಂಬಾ ದೇವಾಲಯ 89 ಸಾವಿರ ರೂ. (ಕಳೆದ ವರ್ಷ 3.27 ಕೋಟಿ ರೂ.), ಬಸವನಗುಡಿಯ ದೊಡ್ಡಗಣಪತಿ ಮತ್ತು ಮಲ್ಲಿಕಾರ್ಜುನಸ್ವಾಮಿ ದೇವಾಲಯ 25 ಲಕ್ಷ ರೂ.(ಕಳೆದ ವರ್ಷ 2.39 ಕೋಟಿ ರೂ.), ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯ 2.71 ಲಕ್ಷ ರೂ. (ಕಳೆದ ವರ್ಷ 1.86 ಕೋಟಿ ರೂ.) ಹಾಗೂ ಬಳ್ಳಾರಿಯ ಕನಕ ದುರ್ಗಮ್ಮ ದೇವಾಲಯ 2.52 ಲಕ್ಷ ರೂ. (ಕಳೆದ ವರ್ಷ 2.5 ಕೋಟಿ ರೂ.) ಮಾತ್ರ ಆದಾಯ ಗಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *