ದೇವನಹಳ್ಳಿ ರೆಸಾರ್ಟ್ ಬಳಿ ಹಾಕಿದ್ದ ಚಿನ್ನಮ್ಮ ಬ್ಯಾನರ್‌ಗೆ ಬೆಂಕಿ – ತಮಿಳು ಬ್ಯಾನರ್ ಧ್ವಂಸ ಮಾಡಿ ಆಕ್ರೋಶ

Public TV
2 Min Read

ಬೆಂಗಳೂರು: ಎಐಎಡಿಎಂಕೆ ಮಾಜಿ ನಾಯಕಿ ವಿ.ಕೆ ಶಶಿಕಲಾ ಜೈಲಿನಿಂದ ಬಿಡುಗಡೆ ಬಳಿಕ ಒಂದಲ್ಲಾ ಒಂದು ಅಪಶಕುನ ಕಾಡುತ್ತಿದೆ. ಕಳೆದ ತಿಂಗಳು 27ರಂದು ಜೈಲಿಂದ ರಿಲೀಸ್ ಆದರೂ ಅವರು ಹೊರ ಬಂದಿರಲಿಲ್ಲ.

ಕೊರೊನಾ ಕಾರಣದಿಂದ ಆಸ್ಪತ್ರೆ ಸೇರಿದ್ದ ಚಿನ್ನಮ್ಮ, ಬಿಡುಗಡೆಯ ಮೂರು ದಿನದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಕಾಕತಾಳಿಯ ಎಂಬಂತೆ ಭಾನುವಾರ ರಾತ್ರಿ ಕೂಡ ಚಿನ್ನಮ್ಮಗೆ ಅಪಶಕುನ ಎದುರಾಗಿದೆ.

ಬೆಂಬಲಿಗರ ಎಡವಟ್ಟಿನಿಂದ ಚಿನ್ನಮ್ಮ ಪೋಸ್ಟರ್ ಧ್ವಂಸ ಮಾಡಲಾಗಿದೆ. ಶಶಿಕಲಾ ತವರಿಗೆ ಮರಳುತ್ತಿರುವ ಖುಷಿಯಲ್ಲಿ ಅವರ ಬೆಂಬಲಿಗರು ದೇವನಹಳ್ಳಿಯ ರೆಸಾರ್ಟ್ ಬಳಿ ಬ್ಯಾನರ್‍ಗಳನ್ನು ಅಳವಡಿಸಿದ್ರು. ಇದನ್ನ ನೋಡಿದ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ತಮಿಳು ಬ್ಯಾನರ್‍ಗಳನ್ನು ಧ್ವಂಸ ಮಾಡಿದ್ರು. ಬ್ಯಾನರ್‍ಗಳಿಗೆ ಬೆಂಕಿ ಇಟ್ಟು ಪ್ರತಿಭಟನೆ ನಡೆಸಿದ್ರು. ಕನ್ನಡ ನೆಲದಲ್ಲಿ ತಮಿಳು ಬ್ಯಾನರ್ ಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ರು.

1996ರಲ್ಲಿ ಸುಬ್ರಮಣಿಯನ್ ಸ್ವಾಮಿ, ಜಯಲಲಿತಾ ಸೇರಿದಂತೆ ಆಪ್ತರಾದ ಶಶಿಕಲಾ, ಇಳವರಸಿ ಹಾಗೂ ಸುಧಾಕರ್ ಮೇಲೆ ಆಕ್ರಮ ಆಸ್ತಿ ಗಳಿಕೆ ಕೇಸ್ ಹಾಕಿದ್ದರು. ಇದಕ್ಕಾಗಿ ಬೆಂಗಳೂರಿನಲ್ಲಿ ವಿಶೇಷ ಕೋರ್ಟ್ ಸ್ಥಾಪಿಸಲಾಗಿತ್ತು. 1991 ರಿಂದ 96 ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ 66 ಕೋಟಿಯಷ್ಟು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಅನ್ನೋದು ಸಾಬೀತಾಗಿ, ನಾಲ್ವರಿಗೂ 10 ಕೋಟಿ ದಂಡ ಮತ್ತು ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ವಿಶೇಷ ಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಜಯಲಲಿತಾ ಪ್ರಶ್ನೆ ಮಾಡಿದ್ದರು.

ಕರ್ನಾಟಕ ಹೈ ಕೋರ್ಟಿನಲ್ಲಿ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ನಾಲ್ವರನ್ನ ನಿರ್ದೋಷಿಗಳು ಎಂದು ಕರ್ನಾಟಕ ಹೈ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿತ್ತು. ಹೈ ಕೋರ್ಟ್ ತೀರ್ಪನ್ನು ರದ್ದುಗೊಳಿಸಿ, ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಲಾಗಿತ್ತು. 2016ರಲ್ಲಿ ಜಯಲಲಿತಾ ಮರಣ ಹೊಂದಿದ್ರಿಂದ ಉಳಿದ ಮೂವರು ಪರಪ್ಪನ ಅಗ್ರಹಾರ ಜೈಲು ಸೇರಬೇಕಾಯ್ತು. ಇದೀಗ ಶಶಿಕಲಾ ಮತ್ತು ಇಳವರಿಸಿ 10 ಕೋಟಿ ದಂಡ ಪಾವತಿಸಿದ್ದಾರೆ.

ಜನವರಿ 27ರಂದು ಜೈಲಿನಿಂದ ಶಶಿಕಲಾ ಬಿಡುಗಡೆಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಈ ಮೊದಲು ಅಮವಾಸ್ಯೆ ಬಳಿಕ ಅಂದ್ರೆ ಫೆಬ್ರವರಿ 11ರ ನಂತರ ಶಶಿಕಲಾ ತಮಿಳುನಾಡಿಗೆ ಹಿಂದಿರುಗಲಿದ್ದಾರೆ ಎಂದು ಹೇಳಲಾಗಿತ್ತು. ಜನವರಿ 31ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಶಶಿಕಲಾ ಬೆಂಗಳೂರಿನ ಹೊರವಲಯದಲ್ಲಿರುವ ದೇವನಹಳ್ಳಿ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದರು. ಇದೀಗ ಇಂದು ಶಶಿಕಲಾ ಅವರು ತವರಿಗೆ ತೆರಳುತ್ತಿದ್ದು, ಬೆಂಬಲಿಗರಲ್ಲಿ ಸಂತಸ ಮನೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *